ಒಂದು ಕಡೆ ಫೆಬ್ರವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಕುರಿತು ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದೆ. ಈ ನಡುವೆ ರಾಜ್ಯ ಸರ್ಕಾರವು ಬಜೆಟ್ ಸಿದ್ದಪಡಿಸುವುದರಲ್ಲಿ ಮಗ್ನವಾಗಿದೆ. ರಾಜ್ಯದಲ್ಲಿ 2025-26 ನೇ ಸಾಲಿನ ಬಜೆಟ್ ಅನ್ನು ಮಾರ್ಚ್ 14 ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಮಾರ್ಚ್ 10 ರಿಂದ ಆರಂಭವಾಗಲಿದೆ. ಇನ್ನು ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16ನೇ ದಾಖಲೆಯ ಬಜೆಟ್ ಮಂಡನೆ ಇದಾಗಿರಲಿದೆ. ರಾಜ್ಯದಲ್ಲಿ ಜುಲೈ 2023ರಲ್ಲಿ 14ನೇ ಬಜೆಟ್ ಮಂಡಿಸಿದಾಗಲೇ ಅಧಿಕ ಆಯವ್ಯಯ ಮಂಡಿಸಿದ ದಾಖಲೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿದೆ. 2024-25ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದರು. ಇದು ಅವರ 15ನೇ ಬಜೆಟ್ ಆಗಿತ್ತು.
1995ರಲ್ಲಿ. ಎಚ್.ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಮೊದಲ ಬಜೆಟ್ ಮಂಡಿಸಿದ್ದರು. 1995 ಮತ್ತು 1996ರಲ್ಲಿ ದೇವೇಗೌಡರು ಸಿಎಂ ಆಗಿದ್ದಾಗ, 1997, 1998, 1999ರಲ್ಲಿ ಜೆ.ಎಚ್. ಪಟೇಲ್ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ್ದರು. ಕರ್ನಾಟಕದ ಮಾಜಿ ರಾಜ್ಯಪಾಲರೂ ಆಗಿರುವ ಗುಜರಾತ್ ನ ಮಾಜಿ ಆರ್ಥಿಕ ಸಚಿವ ವಜೂಬಾಯಿ ವಾಲಾ ಅವರು 18 ಬಾರಿ ಬಜೆಟ್ ಮಂಡಿಸುವ ಮೂಲಕ ಬಜೆಟ್ ಮಂಡನೆಯಲ್ಲಿ ದೇಶದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಮುರಿಯಬೇಕೆಂದರೆ ಸಿದ್ದರಾಮಯ್ಯ ಅವರು ಇನ್ನೂ ಎರಡು ಬಜೆಟ್ ಗಳನ್ನು ಮಂಡಿಸಬೇಕಾಗುತ್ತದೆ.

ಈ ಬಾರಿಯ ರಾಜ್ಯ ಬಜೆಟ್ ವಿಶೇಷತೆ ಏನು?
ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳ ಅಶ್ವಾಸನೆ ನೀಡಿ ರಾಜ್ಯಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತಿನಂತೆ ಗ್ಯಾರಂಟಿ ಜಾರಿಗೊಳಿಸಿತ್ತು. ಆದರೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಇತರ ಅಭಿವೃದ್ಧಿ ಯೋಜನೆಗಳಿಗೆ ಹಣ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನೇ ಆರಂಭದಿಂದಲೂ ವಿರೋಧ ಪಕ್ಷಗಳು ಹೇಳಿಕೊಂಡು ಬಂದಿದ್ದವು. ಹೀಗಾಗಿ ರಾಜ್ಯದಲ್ಲಿ ಆದಾಯ ಉತ್ಪಾದನೆ ಮತ್ತು ತೆರಿಗೆ ತಂತ್ರಗಳನ್ನು ಮರು ರೂಪಿಸುವ ಅಗತ್ಯ ಇದೆ. ಇದಲ್ಲದೇ ಬಜೆಟ್ ಮಂಡನೆಗೆ ದಿನಗಣನೆಯೂ ಆರಂಭವಾಗಿರುವುದರಿಂದ ಸಿದ್ದರಾಮಯ್ಯ ಅವರು ಸೋಮವಾರದಿಂದಲೇ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿದ್ದು, ಆಯವ್ಯಯ ಸಿದ್ಧತೆಗೆ ಚಾಲನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಅವರ 16ನೇ ಬಜೆಟ್ ಅನೇಕ ವಿಶೇಷತೆಗಳನ್ನು ಹೊಂದಿದ್ದು ಮೊದಲನೆಯದಾಗಿ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಜೆಟ್ ಮಂಡನೆಗೂ ಮುನ್ನ ಮಾಡುವ ವಿವಿಧ ಇಲಾಖೆಯ ಸಮಾಲೋಚನಾ ಸಭೆಗಳು ಪ್ರಮುಖವಾಗಿರುತ್ತದೆ, ಏಕೆಂದರೆ ಬಜೆಟ್ ಮಂಡನೆಗೆ ಈ ಸಭೆಗಳೇ ಅಡಿಪಾಯ ಹಾಕಲಿರುವ ಕಾರಣ ಇವು ನಿರ್ಣಾಯಕವಾಗಿದೆ. ಇದಕ್ಕಾಗಿ ಸಿಎಂ ಪ್ರಮುಖವಾಗಿ ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಇಲಾಖಾವಾರು ಪರಿಶೀಲನಾ ಸಭೆಗಳನ್ನು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಗ್ಯಾರಂಟಿ ಯೋಜನೆಗಳ ಒತ್ತಡದ ನಡುವೆ ಅಭಿವೃದ್ದಿ ಮತ್ತು ಬೇಡಿಕೆಗಳ ನಡುವೆ ಸಮತೋಲನವಾಗಿ ನಿಭಾಯಿಸುವ ಸವಾಲಿನ ಕೆಲಸ ಸಿಎಂ ಮುಂದಿರುವುದರಿಂದ ಈ ಬಜೆಟ್ ಪೂರ್ವ ಸಭೆಗಳು ನಿರ್ಣಾಯಕವಾಗಿರುತ್ತದೆ. ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ, ಮುಂದಿನ ದಿನಗಳಲ್ಲಿ ನಡೆಯಲಿರುವ ಸಭೆಗಳಲ್ಲಿ ಹಿಂದಿನ ವರ್ಷದ ಆರ್ಥಿಕ ಕಾರ್ಯಕ್ಷಮತೆಯ ವಿಶ್ಲೇಷಣೆ, ಹೊಸ ಆದಾಯ ಮೂಲಗಳನ್ನು ಗುರುತಿಸುವುದು ಮತ್ತು ತಜ್ಞರ ಸಲಹೆಗಳನ್ನು ಪರಿಗಣಿಸುವುದು ಸೇರಿದಂತೆ ಹಲವಾರು ಅಂಶಗಳನ್ನು , ಮಾಹಿತಿಗಳನ್ನು ಮುಖ್ಯಮಂತ್ರಿಗಳು ಸಂಗ್ರಹಿಸಲಿದ್ದಾರೆ.


Click it and Unblock the Notifications