ಇಂದು ಕರ್ನಾಟಕ ಬಜೆಟ್ ಮಂಡನೆ ದಿನವಾದ ಕಾರಣ ಎಲ್ಲರ ಗಮನ ಇಂದಿನ ಆಯವ್ಯಯದತ್ತ ನೆಟ್ಟಿದೆ.. ಸಾವಿರಾರು ನಿರೀಕ್ಷೆಗಳು ಜನಸಾಮಾನ್ಯರಲ್ಲಿ ಕವಲೊಡೆದಿವೆ. ಇದು ನಿರೀಕ್ಷೆ ಮತ್ತು ನಿರಾಸೆ ಎರಡನ್ನೂ ನಿರ್ಧರಿಸುವ ದಿನವಾಗಿದೆ. ಈಗಾಗಲೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು, ಯಶಸ್ವಿಯಾಗಿ ಫಲಾನುಭವಿಗಳಿಗೆ ಸಿಗುತ್ತಿವೆ. ಈ ಬಾರಿಯ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಮತ್ತಷ್ಟು ಬಲ ತುಂಬುವ ನಿರೀಕ್ಷೆ ಇದೆ. ಇದರ ಜೊತೆಗೆ ಶಿಕ್ಷಣ, ಕೃಷಿ, ಕೈಗಾರಿಕೆ, ಸಾರಿಗೆ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಂಪರ್ ಕೊಡುಗೆಗಳು ಸಿಗಬೇಕು ಎಂಬ ನಿರೀಕ್ಷೆ ಜನರಲ್ಲಿ ಇದೆ. ಹಾಗಾದ್ರೆ ಈ ಎಲ್ಲಾ ಕ್ಷೇತ್ರಗಳ ನಿರೀಕ್ಷೆ ಏನು? ಏನನ್ನ ಅಪೇಕ್ಷೆ ಪಡಲಾಗ್ತಿದೆ ಎಂದು ತಿಳಿಯಿರಿ.

ಶಿಕ್ಷಣ ಕ್ಷೇತ್ರ:
ಸರ್ಕಾರಿ ಶಾಲೆಗಳಲ್ಲಿ ಸುಮಾರು 60,000 ಹುದ್ದೆಗಳ ನೇಮಕಾತಿ, OPS ಯೋಜನೆಯ ಜಾರಿ, ಶಿಕ್ಷಕರ ಗೌರವಧನ ಹೆಚ್ಚಳ ಮತ್ತು ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ RTE ಕಾಯ್ದೆ ಅನುಷ್ಠಾನ ಇವು ಮುಖ್ಯ ನಿರೀಕ್ಷೆಗಳು.
ಕೃಷಿ ಮತ್ತು ರೈತ ಕಲ್ಯಾಣದಲ್ಲೇನು ನಿರೀಕ್ಷೆ?
ರೈತರಿಗೆ ಶೂನ್ಯ ಬಡ್ಡಿ ಸಾಲ, ಬೆಂಬಲ ಬೆಲೆ, ಹನಿ ನೀರಾವರಿ ಪ್ರೋತ್ಸಾಹ, ಟೋಲ್ ಮುಕ್ತ ಸಾಗಣೆ, ನಕಲಿ ಕೀಟನಾಶಕ/ಗೊಬ್ಬರ ಮಾರಾಟದ ನಿಯಂತ್ರಣ ಹಾಗೂ ಪಂಜಾಬ್ ಮಾದರಿ ಸಾರಿಗೆ ವ್ಯವಸ್ಥೆ ಈ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ರೈತರು ಬಯಸುತ್ತಿದ್ದಾರೆ.
ಹಿಂದುಳಿದ ವರ್ಗಗಳ ಅಭಿವೃದ್ಧಿ:
ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕನಿಷ್ಠವೆಂದರೂ 10,000 ಕೋಟಿ ರೂ. ಅನುದಾನದ ನಿರೀಕ್ಷೆ ಇದೆ., ಮೀಸಲಾತಿ ಶೇ.50ಕ್ಕೆ ಹೆಚ್ಚಳ ಮತ್ತು ವಿವಿಧ ನಿಗಮಗಳಿಗೆ ಹೆಚ್ಚಿನ ಅನುದಾನ ಘೋಷಿಸುವ ನಿರೀಕ್ಷೆ ಇದೆ.
ಕೈಗಾರಿಕೆ ಮತ್ತು ಉದ್ಯಮ:
ಬೆಂಗಳೂರು ಹೊರವಲಯದಲ್ಲಿ ಕೈಗಾರಿಕೆ ವಿಸ್ತರಣೆ, MSME ಗಾಗಿ ಪ್ರೋತ್ಸಾಹ, ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆ ಮತ್ತು ಹಸಿರು ಇಂಧನ, ಪ್ರವಾಸೋದ್ಯಮ, ಕೌಶಲ್ಯಾಭಿವೃದ್ಧಿಗೆ ಸಹಾಯಧನ ನೀಡಬೇಕೆಂಬ ನಿರೀಕ್ಷೆಯಿದೆ.
ಸಾರಿಗೆ ವಲಯದ ನಿರೀಕ್ಷೆ:
ಸರ್ಕಾರಿ ಮತ್ತು ಖಾಸಗಿ ಸಾರಿಗೆ ನೌಕರರಿಗೆ ವೇತನ ಪಾವತಿ, ವೇತನ ಪರಿಷ್ಕರಣೆ, ಅಸಂಘಟಿತ ಚಾಲಕರಿಗಾಗಿ ಅಭಿವೃದ್ಧಿ ನಿಗಮ, ಹೆದ್ದಾರಿಯಲ್ಲಿ ತಂಗುದಾಣ ಮತ್ತು ಎಲೆಕ್ಟ್ರಿಕ್ ವಾಹನ ಖರೀದಿಗೆ ಸಹಾಯಧನ ಘೋಷಣೆ ಬೇಕು ಎಂದು ನಿರೀಕ್ಷಿಸಲಾಗಿದೆ.
ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದ ಪ್ರಮುಖ ನಿರೀಕ್ಷೆ:
ಸರ್ಕಾರಿ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ವೃದ್ಧಿ, ಐಸಿಯು, ಕ್ಯಾನ್ಸರ್ ಮತ್ತು ಡಯಾಲಿಸಿಸ್ ಘಟಕಗಳ ಸ್ಥಾಪನೆ, ವೈದ್ಯಕೀಯ ಸಿಬ್ಬಂದಿ ನೇಮಕಾತಿ, ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ ಹಾಗೂ ಆರೋಗ್ಯ ಡೇಟಾ ಡಿಜಿಟಲೀಕರಣ ಇವು ಮುಖ್ಯ ನಿರೀಕ್ಷೆಗಳಾಗಿದೆ.
ಒಟ್ಟಾರೆ, 2026-27ನೇ ಸಾಲಿನ ಬಜೆಟ್ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎಂಬ ತತ್ತ್ವದಡಿ ರೂಪಿಸಬೇಕು. ಜನರು ತಮ್ಮ ವಿವಿಧ ಕ್ಷೇತ್ರಗಳಿಗೆ ಪರಿಹಾರ ಮತ್ತು ಪ್ರೋತ್ಸಾಹ ನೀಡುವಂತಹ ಘೋಷಣೆಗಳನ್ನು ಈ ಬಜೆಟ್‌ನಲ್ಲಿ ಕಾಣುವ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications