ರಾಜ್ಯದಲ್ಲಿ ಹಣಕಾಸು ಖಾತೆಯನ್ನು ಕೂಡಾ ಹೊಂದಿರುವ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ (ಫೆಬ್ರವರಿ 16) ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಜೆಟ್ ಮಂಡನೆ ವೇಳೆ ಐದು ಗ್ಯಾರಂಟಿ ಯೋಜನೆಗೆ 57,000 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ರಾಜ್ಯದ ಹೆಚ್ಚಿನ ಸವಲತ್ತು ಪಡೆದ ಜನರು ಐದು ಖಾತರಿಗಳಿಂದ ಸುಮಾರು 0,000 ರಿಂದ 55,000 ರೂ ಮೌಲ್ಯದ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕೇಂದ್ರ ಸರ್ಕಾರವು ಟೀಕೆ ಮಾಡಿತ್ತು. ಆದರೆ ನಾವು ಕೇಂದ್ರ ಸರ್ಕಾರ ಮಾಡದ ಕಾರ್ಯವನ್ನು ಮಾಡುತ್ತಿದ್ದೇವೆ. ನಾವು ನುಡಿದಂತೆ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ್ದೇವೆ. ಈ ಗ್ಯಾರಂಟಿ ಯೋಜನೆ ಚುನಾವಣಾ ಗಿಮಿಕ್ ಅಲ್ಲ. ಇದರ ಮೂಲಕವೇ ನಾವು ಆರ್ಥಿಕ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗಿರುವುದಿಲ್ಲ. ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಇವು ಪ್ರಮುಖ ಪಾತ್ರ ವಹಿಸಿವೆ. ಈ ಬಜೆಟ್‌ನಲ್ಲಿ ದುರ್ಬಲ ವರ್ಗದವರಿಗೆ ಮತ್ತಷ್ಟು ಆದ್ಯತೆ ನೀಡಲಾಗುವುದು. ಅಭಿವೃದ್ಧಿ ಪೂರಕವಾಗಿ ನಮ್ಮ ಬಜೆಟ್ ಆಗಿದೆ. ಗ್ಯಾರಂಟಿ ಯೋಜನೆ ಮೂಲಕ ಎಲ್ಲಾ ವರ್ಗದವರನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯ ನೀಡುವುದು ನಮ್ಮ ಆಶಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ 15ನೇ ಬಾರಿ ಬಜೆಟ್ ಮಂಡನೆ ವೇಳೆ ಹೇಳಿದರು.
ಐದು ಗ್ಯಾರಂಟಿ ಯೋಜನೆಗಳಿವು
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನವೇ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡಿತ್ತು. ಈಗ ಚುನಾವಣೆಯಲ್ಲಿ ಗೆದ್ದು ಗದ್ದುಗೆಯನ್ನು ಪಡೆದ ಬಳಿಕ ಈ ಐದು ಯೋಜನೆಗಳನ್ನು ಜಾರಿ ಮಾಡಿದೆ.
ಮೊದಲನೆಯದಾಗಿ ಶಕ್ತಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದು ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಯೋಜನೆಯಾಗಿದೆ. ಅದಾದ ಬಳಿಕ ಐದು ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿಯ ಹಣವನ್ನು ನೀಡುವ ಅನ್ನಭಾಗ್ಯ ಯೋಜನೆ, 200 ಯುನಿಟ್‌ವರೆಗೆ ವಿದ್ಯುತ್ ಉಚಿತ ನೀಡುವ ಗೃಹ ಜ್ಯೋತಿ ಜಾರಿ ಮಾಡಲಾಗಿದೆ.
ಅದಾದ ಬಳಿಕ ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ. ಅದಾದ ಬಳಿಕ ಕೊನೆಯದಾಗಿ ಯುವಕರಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಯುವನಿಧಿ ಯೋಜನೆ ಜಾರಿ ಮಾಡಲಾಗುತ್ತಿದೆ.


Click it and Unblock the Notifications