ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಬಸ್: ರಾಜ್ಯದಲ್ಲಿ ಈಗ ಎಲೆಕ್ಟ್ರಿಕ್ ಬಸ್ ಕ್ರಾಂತಿ ಶುರುವಾಗಿದೆ. ರಾಜ್ಯದೆಲ್ಲೆಡೆ ಸೇವೆ ಒದಗಿಸಲು ಎಲೆಕ್ಟ್ರಿಕ್ ಬಸ್‌ಗಳು ಅಖಾಡಕ್ಕಿಳಿಯಲಿವೆ. ಈ ಒಂದು ಯೋಜನೆಗೆ ಕ್ಯಾಬಿನೆಟ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಈ ಯೋಜನೆಗಾಗಿ ವಿಶ್ವಬ್ಯಾಂಕ್‌ನಿಂದ 3,000 ಕೋಟಿ ರೂ. ಸಾಲ ಪಡೆಯಲಾಗುತ್ತಿದ್ದು, ರಾಜ್ಯದಲ್ಲಿ 4,000 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಾಗುತ್ತದೆ.

ಹೌದು, ಕರ್ನಾಟಕ ಸರ್ಕಾರದ ಉದ್ದೇಶ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬುದಾಗಿದೆ. ಇದಕ್ಕಾಗಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಸರ್ಕಾರ, ರಾಜ್ಯದ ವಿವಿಧ ಸಾರಿಗೆ ನಿಗಮಗಳಿಗೆ 4,000 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವ ಯೋಜನೆಗೆ ಸಚಿವ ಸಂಪುಟದಲ್ಲಿ ಅಧಿಕೃತ ಅನುಮೋದನೆ ನೀಡಿದೆ. ಈ ಕುರಿತು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಈ ಯೋಜನೆಯ ಅಡಿಯಲ್ಲಿ ಬಿಎಂಟಿಸಿ, KSRTC ಮತ್ತು ಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಸೇರಿದಂತೆ ವಿವಿಧ ನಿಗಮಗಳು ವಿಶ್ವಬ್ಯಾಂಕ್‌ನಿಂದ ಕಡಿಮೆ ಬಡ್ಡಿದರದ ₹3,000 ಕೋಟಿ ಸಾಲವನ್ನು ಬಳಸಿಕೊಂಡು ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಿವೆ. ಹಾಗೂ ಈ ಯೋಜನೆಯ ಪ್ರಾಥಮಿಕ ವರದಿಯಲ್ಲಿ ಈಗಾಗಲೇ ಆರ್ಥಿಕ ವ್ಯವಹಾರಗಳ ಇಲಾಖೆ ಪೋರ್ಟಲ್ ಮೂಲಕ ಸಲ್ಲಿಸಲಾಗಿದೆ. ಈಗ ಅದು ಅಧಿಕೃತ ರೂಪ ಪಡೆದಿದೆ.
ಈ ಯೋಜನೆಯ ಮುಖ್ಯ ಗುರಿ ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸುವುದು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ನಾಗರಿಕರಿಗೆ ಶುಭ್ರ ಹಾಗೂ ನವೀನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಒದಗಿಸುವುದು ಆಗಿದೆ.
ಬಿಎಂಟಿಸಿ ಮುಂಚೂಣಿಯಲ್ಲಿ:
ಇದರಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಬಿಎಂಟಿಸ್ ಬಸ್‌ಗಳು ದೇಶಾದ್ಯಂತ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಿರುವುದರಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. 2017 ರಲ್ಲಿ, FAME-I ..ಅಂದರೆ Faster Adoption and Manufacturing of Electric Vehicles ಯೋಜನೆಯಡಿ 10 ಎಲೆಕ್ಟ್ರಿಕ್ ಬಸ್‌ಗಳ ಪೈಲಟ್ ಟೆಸ್ಟ್‌ನೊಂದಿಗೆ ಪ್ರಾರಂಭವಾದ ಈ ಪ್ರಯತ್ನ, ಇಂದಿಗೆ ಅತ್ಯಂತ ಯಶಸ್ವಿಯಾಗಿ ಬೆಳವಣಿಗೆಯಾಗುತ್ತಿದೆ.
ಈಗಾಗಲೇ ಬಿಎಂಟಿಸಿ ತನ್ನ ದಂಡೆಯಲ್ಲಿ ಸುಮಾರು 1,027 ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಿಸುತ್ತಿದೆ. ಈ ಬಸ್‌ಗಳಲ್ಲಿ ಬಹುತೇಕವನ್ನು ಟಾಟಾ ಮೋಟಾರ್ಸ್‌ದ ಅಂಗಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್ ತನ್ನ ಧಾರವಾಡ ಘಟಕದಲ್ಲಿ ತಯಾರಿಸಿದೆ. ಈ ಬಸ್‌ಗಳು FAME-II ಯೋಜನೆಯಡಿ ತರಲಾಗಿದ್ದು, ಪ್ರತಿಯೊಂದು 12 ಮೀಟರ್ ಉದ್ದವಿದೆ.
ಬಿಎಂಟಿಸಿ ಜೊತೆಗೆ ಸ್ವಿಚ್ ಮೊಬಿಲಿಟಿ300 ಎಲೆಕ್ಟ್ರಿಕ್ ಬಸ್‌ಗಳನ್ನು ಮತ್ತು ಜೆಬಿಎಂ ಗ್ರೂಪ್ 90 ಎಲೆಕ್ಟ್ರಿಕ್ ಬಸ್‌ಗಳನ್ನು ಉತ್ಪಾದನೆ ಮಾಡಿವೆ. ಇವುಗಳೆಲ್ಲವೂ A/C ಸೌಲಭ್ಯವಿಲ್ಲದ ಬಸ್‌ಗಳಾಗಿದ್ದು, ಒಟ್ಟು ವೆಚ್ಚದ ಒಪ್ಪಂದ ಮಾದರಿಯಡಿ ಕಾರ್ಯನಿರ್ವಹಿಸುತ್ತಿವೆ. ಈ ಮಾದರಿಯಲ್ಲಿ, ವಾಹನ ತಯಾರಕರು ಚಾಲಕರನ್ನು ಮತ್ತು ನಿರ್ವಹಣಾ ಸಿಬ್ಬಂದಿಯನ್ನು ಒದಗಿಸುವ ಜವಾಬ್ದಾರಿ ಹೊಂದಿರುತ್ತಾರೆ.
K.S.R.T.C. ಕೂಡ ಎಲೆಕ್ಟ್ರಿಕ್ ಬಸ್ ಯೋಜನೆಯಲ್ಲಿ:
ಬಿಎಂಟಿಸಿ ಅಷ್ಟೇ ಅಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಕೂಡ ಈ ಎಲೆಕ್ಟ್ರಿಕ್ ಬಸ್ ಯೋಜನೆಯಲ್ಲಿ ಭಾಗವಹಿಸುತ್ತಿದೆ. ಅಂದರೆ ಈಗಾಗಲೇ ಸುಮಾರು ಸುಮಾರು 350 ಎಲೆಕ್ಟ್ರಿಕ್ ಬಸ್‌ಗಳಳು ನಿರ್ವಹಿಸುತ್ತಿವೆ. ಇವುಗಳಲ್ಲಿ, 2023ರಲ್ಲಿ, ಬೆಂಗಳೂರು ಮತ್ತು ಮೈಸೂರಿನ ನಡುವಿನ ಮಾರ್ಗಗಳಲ್ಲಿ ಸಂಚರಿಸುವ 50 ಎಲೆಕ್ಟ್ರಿಕ್ ಬಸ್‌ಗಳನ್ನು FAME-II ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಈಗ ಸಾರಿಗೆ ನಿಗಮವು 2025ರ ಮದ್ಯದಲ್ಲಿ ಇನ್ನೂ 300 ಎಲೆಕ್ಟ್ರಿಕ್ ಬಸ್‌ಗಳನ್ನು ತನ್ನ ದಂಡೆಯಲ್ಲಿ ಸೇರಿಸಲು ಸಜ್ಜಾಗಿದೆ. ಇದು ಗ್ರಾಮೀಣ ಹಾಗೂ ಶಹಾರಿ ನಿಗಮಗಳ ನಡುವೆ ಸಮತೋಲನದ ಎಲೆಕ್ಟ್ರಿಕ್ ಸಾರಿಗೆ ಅಭಿವೃದ್ಧಿಗೆ ಸಹಕಾರಿ ಆಗಲಿದೆ.
ಹಸಿರು ಸಂಚಾರದ ದಿಕ್ಕಿನಲ್ಲಿ ಕರ್ನಾಟಕ:
ಈ ಇಡೀ ಯೋಜನೆಯ ಅಡಿಯಲ್ಲಿ ವಿಶ್ವಬ್ಯಾಂಕ್‌ದ ನೆರವಿನಿಂದ ಸಾಕಷ್ಟು ಬಂಡವಾಳ ಪ್ರಾರಂಭಿಕ ಹಂತದಲ್ಲಿ ಲಭ್ಯವಾಗುವುದರಿಂದ, ಹಣಕಾಸು ಪೂರೈಕೆಗಾಗಿ ರಾಜ್ಯ ಸರ್ಕಾರದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಇಂಥ ಯೋಜನೆಗಳ ಮೂಲಕ ಕರ್ನಾಟಕವು ದೇಶದ ಇತರೆ ರಾಜ್ಯಗಳಿಗೆ ಹಸಿರು ಸಾರಿಗೆ ಮಾದರಿಯ ಉದಾಹರಣೆಯಾಗುತ್ತಿದೆ. ಈ ಯೋಜನೆಯ ಯಶಸ್ಸು ಸಾರ್ಥಕವಾದರೆ, ಅದು ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಎಲೆಕ್ಟ್ರಿಫಿಕೇಶನ್‌ಗಾಗಿ ಬಲಿಷ್ಠ ಮೆಟ್ಟಿಲಾಗಿ ಪರಿಗಣಿಸಬಹುದಾಗಿದೆ. ಜೊತೆಗೆ, ಪರಿಸರ ಕಾಳಜಿಗೆ ಸ್ಪಂದನೆ ನೀಡುವ ನವೀನ ಜನಪ್ರಿಯ ಮಾದರಿಯೆಂದೂ ಪರಿಗಣಿಸಬಹುದಾಗಿದೆ.


Click it and Unblock the Notifications