ಕರ್ನಾಟಕದಲ್ಲಿ ಹವಾಮಾನದಲ್ಲಿ ಎಷ್ಟು ಬದಲಾವಣೆಯಾಗುತ್ತಿದೆ ಎಂದರೆ, ಅದನ್ನು ಊಹಿಸಲಿಕ್ಕೂ ಆಗುವುದಿಲ್ಲ. ಬೇಸಿಗೆಯ ಅತಿಯಾದ ತಾಪಮಾನ, ಕೊಂಚವೇ ಮಳೆ, ಮತ್ತೆ ಧಗೆ ಹೀಗೆ ಹವಾಮಾನದಲ್ಲಿ ಬದಲಾವಣೆಯಾಗುತ್ತಲೇ ಇದೆ. ಯಾವಾಗ ಹೆಚ್ಚು ಬಿಸಿಯಾಗಿರುತ್ತದೋ, ಅದ್ಯಾವಾಗ ಮಳೆ ಬರುತ್ತದೋ ತಿಳಿಯುವುದೇ ಇಲ್ಲ. ಮಳೆ ಬರಲಿ, ಬಾರದೇ ಇರಲಿ ತಾಪಮಾನವಂತೂ ಕಡಿಮೆಯಾಗುತ್ತಿಲ್ಲ. ಕುಂತಲ್ಲೇ ಬೆಂದುಹೋಗುವ ಸ್ಥಿತಿ ಎದುರಾಗಿದೆ. ಅದರಲ್ಲೂ ಉತ್ತರ ಒಳನಾಡಿನಲ್ಲಿ ತಾಪಮಾನದ ತೀವ್ರತೆಯ ಬಗ್ಗೆ ಕೇಳುವುದೇ ಬೇಡ. ಮೊದಲೇ ಬಿಸಿಲು ಹೆಚ್ಚಾಗಿರುವ ಪ್ರದೇಶಗಳು. ಇನ್ನು ಬೇಸಿಗೆಯಲ್ಲಿ ಕೇಳಬೇಕಾ..? ಹೀಗಾಗಿಯೇ ಕರ್ನಾಟಕದ ಕಲಬುರಗಿ ವಿಭಾಗದ ಏಳು ಜಿಲ್ಲೆಗಳು ಮತ್ತು ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ವೇಳೆಯನ್ನು ಬದಲಾಯಿಸಲಾಗಿದೆ.

ಹೌದು, ಕರ್ನಾಟಕ ಸರ್ಕಾರ 2025ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತಿಹೆಚ್ಚು ತಾಪಮಾನವಿರುವುದನ್ನು ಪರಿಗಣಿಸಿ, ಈ ನಿರ್ಧಾರ ತೆಗೆದುಕೊಂಡಿದೆ. ಅಂದರೆ ಕೆಲಸದ ವೇಳೆಯನ್ನು ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 1:30ರವರೆಗೆ ಮಾತ್ರ ನಿಗದಿಪಡಿಸಲಾಗಿದ್ದು, ಸರ್ಕಾರಿ ನೌಕರರು ಈ ಸಮಯದಲ್ಲಿ ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ. ಈ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿಫಾರಸ್ಸಿನ ಪ್ರಕಾರ ತೆಗೆದುಕೊಳ್ಳಲಾಗಿದೆ.
ಹೆಚ್ಚುತ್ತಿರುವ ತಾಪಮಾನದಿಂದ ಆರೋಗ್ಯದಲ್ಲಿ ಬದಲಾವಣೆಯಾಗಬಹುದು. ಹೀಗಾಗಿ ಸರ್ಕಾರಿ ನೌಕರರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ. ಇದು ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಕೆಲವು ಜಿಲ್ಲೆಗಳ ಸರ್ಕಾರಿ ಕಚೇರಿಗಳಿಗೆ ಮಾತ್ರ ಇದು ಅನ್ವಯಿಸಲಾಗುತ್ತದೆ.
ಅಂದಹಾಗೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಈ ವರ್ಷ ರಾಜ್ಯದಲ್ಲಿ ಗರಿಷ್ಠ ತಾಪಮಾನವು ಸಾಧಾರಣ ಮಟ್ಟಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿಯೇ ಸಾರ್ವಜನಿಕ ಸೇವೆಯಲ್ಲಿ ನಿರತ ಸರ್ಕಾರಿ ನೌಕರರ ಆರೋಗ್ಯ ಮತ್ತು ಕಲ್ಯಾಣದ ದೃಷ್ಟಿಯಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಅಲ್ಲದೇ 2024ರ ಬೇಸಿಗೆಯಲ್ಲಿ ಕೂಡ ಅತಿಹೆಚ್ಚು ತಾಪಮಾನ ಹೆಚ್ಚಿನ ಪರಿಣಾಮ ಬೀರಿತ್ತು. ದೇಶದ ಹಲವೆಡೆ ಶಾಖದ ಅಲೆಗಳ ಪರಿಣಾಮದಿಂದ, ಸಾಕಷ್ಟು ಮಂದಿ ಅಸ್ವಸ್ಥರಾಗಿದ್ದರು. ಅಷ್ಟೇ ಅಲ್ಲ ಶಾಖದ ಹೊಡೆತದಿಂದ ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿರುವುದನ್ನು ಕಾಣಬಹುದಾಗಿದೆ. ಹಿಂದಿನ ವರ್ಷ ತೀವ್ರವಾದ ಶಾಖದ ಪರಿಣಾಮಗಳನ್ನು ಅನುಭವಿಸಿರುವ ಕರ್ನಾಟಕ ಸರ್ಕಾರ, ಈ ಬಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು, ನೌಕರರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಣಾ ವೇಳೆಯನ್ನು ಬದಲಾಯಿಸಿದೆ.
ಸರ್ಕಾರಿ ನೌಕರರಿಗೆ ಇದರಿಂದ ಏನು ಉಪಯೋಗ..?
ಬೆಳಗ್ಗೆ ಸಮಯದಲ್ಲಿ ಹೆಚ್ಚಿನ ತಾಪಮಾನ ಇರುವುದಿಲ್ಲ. ಅದು ಸಹನೀಯವಾಗಿರುವ ಕಾರಣದಿಂದ ನೌಕರರು ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಬಿಸಿಯ ಮಧ್ಯಾಹ್ನದ ಹೊತ್ತಿನಲ್ಲಿ ಪ್ರಯಾಣ ಮಾಡುವ ಅನಿವಾರ್ಯತೆಯನ್ನು ತಪ್ಪಿಸಲೂಬಹುದು. ಅಷ್ಟೇ ಅಲ್ಲ ಬಿಸಿಗಾಳಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಇದು ಉತ್ತಮ ಯೋಜನೆಯಾಗಿದೆ.
ಅಂದಹಾಗೆ ಕೆಲಸದ ಉದ್ದೇಶದಿಂದ ಬಹಳಷ್ಟು ನೌಕರರು ಪ್ರಥಮಿಕ ಆರೋಗ್ಯ ಕೇಂದ್ರಗಳು, ಕೋರ್ಟ್, ತಹಸೀಲ್ದಾರ್ ಕಚೇರಿಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡಬೇಕಾಗುತ್ತದೆ. ಈ ಹೊಸ ಸಮಯದೊಂದಿಗೆ, ಅವರಿಗೆ ಹೆಚ್ಚು ಅನುಕೂಲವಾಗಲಿದೆ.
ಸಾರ್ವಜನಿಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ..?
ಇನ್ನು ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳಿಗಾಗಿ ಭೇಟಿ ನೀಡುವ ಸಾರ್ವಜನಿಕರು, ಈ ಹೊಸ ಸಮಯವನ್ನ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅಂದರೆ ಮೊದಲೆಲ್ಲ ಹತ್ತು ಗಂಟೆ ವೇಳೆಗೆ ಕಾರ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಕೆಲಸಗಳು, ಈಗ ಬದಲಾವಣೆಯಾಗಿದೆ. ಇದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಹಾಗೆಯೇ ಅಷ್ಟು ಬೆಳಗ್ಗೆಯೇ ಎದ್ದು ಸರ್ಕಾರಿ ಕಚೇರಿಗಳತ್ತ ಹೋಗಿ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಲು ಕೂಡ ಆಗುವುದಿಲ್ಲ. ಮಧ್ಯಾಹ್ನ 1:30 ರ ನಂತರ ಯಾವುದೇ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ, ಆದ್ದರಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 1:30ರೊಳಗೆ ಕಚೇರಿಗಳಿಗೆ ಭೇಟಿ ನೀಡಬೇಕು.
ಈ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಈ ಬದಲಾವಣೆವು ಕೆಲವು ಜನರಿಗೆ ತೊಂದರೆ ಉಂಟುಮಾಡಬಹುದು, ಆದರೆ ಉಷ್ಣತೆಯಿಂದಾಗುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ಒಟ್ಟಿನಲ್ಲಿ ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ಹಿತವನ್ನು ಪರಿಗಣಿಸಿ ಕೆಲಸದ ವೇಳೆಯನ್ನು ಬದಲಾಯಿಸಿದೆ. ಈ ಹೊಸ ಕಚೇರಿ ಸಮಯ ಏಪ್ರಿಲ್ ಮತ್ತು ಮೇ 2025 ತಿಂಗಳಲ್ಲಿ ಮಾತ್ರ ಜಾರಿಗೆ ಬರಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಕಚೇರಿ ಕಾರ್ಯಗಳಿಗಾಗಿ ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 1:30 ರೊಳಗೆ ಭೇಟಿ ನೀಡಬೇಕು. ಈ ಬದಲಾವಣೆಯು ನೌಕರರ ಆರೋಗ್ಯ ಮತ್ತು ಕಾರ್ಯಕ್ಷಮತೆಯ ಉನ್ನತಿಗಾಗಿ ತೆಗೆದುಕೊಳ್ಳಲಾದ ಒಂದು ಪ್ರಮುಖ ನಿರ್ಧಾರ ಎಂದು ಹೇಳಬಹುದು. ರಾಜ್ಯ ಸರ್ಕಾರ ಶಾಖದ ಅಲೆಗಳ ತೀವ್ರತೆ ಹೆಚ್ಚಾದಾಗ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ.


Click it and Unblock the Notifications