ಇದು ಡಿಜಿಟಲ್ ಯುಗ (Digital). ಒಂದು ಹೊತ್ತು ಊಟವನ್ನಾದ್ರೂ ಕೆಲವರು ಬಿಡುತ್ತಾರೆ, ಆದ್ರೆ ಮೊಬೈಲ್ ಬಿಟ್ಟಿರಲ್ಲ. ಮೊಬೈಲ್, ಟಿವಿ, ಲ್ಯಾಪ್‌ಟಾಪ್, ವೆಬ್‌ಸೀರಿಸ್, ಓಟಿಟಿ (Mobile, TV, OTT) ಹೀಗೆ ಎಲ್ಲವೂ ಅಗತ್ಯ ಸಾಧನವಾಗಿಬಿಟ್ಟಿದೆ. ಈ ಎಲೆಕ್ಟ್ರಾನಿಕ್ ಸಾಧನಗಳು ಅದೆಷ್ಟೋ ಬಾಲ್ಯದ ದಿನಗಳನ್ನು ಮರೆಸುವಂತೆ ಮಾಡಿದೆ. ರಜಾ ದಿನಗಳಲ್ಲಿ ಹೋಗುತ್ತಿದ್ದ ಅಜ್ಜಿ ಮನೆ, ಗೆಳೆಯರೆಲ್ಲಾ ಸೇರಿ ಆಡುತ್ತಿದ್ದ ಕ್ರಿಕೆಟ್, ಕುಟುಂಬದವರೆಲ್ಲಾ ಸೇರಿ ಮಾಡುತ್ತಿದ್ದ ಮಜಾವನ್ನು, ಇಂದು ಮೊಬೈಲ್ ಎಲ್ಲವನ್ನೂ ಕಸಿದುಕೊಂಡುಬಿಟ್ಟಿದೆ. ಆದರೆ ಈ ಎಲ್ಲಾ ಡಿಜಿಟಲ್ ಸಾಧನಗಳಿಗೆ ಬ್ರೇಕ್ ನೀಡುವ ಉದ್ದೇಶದಲ್ಲಿ ಇಲ್ಲೊಂದು ಜಿಲ್ಲೆ ಮಾದರಿಯಾಗಿಬಿಟ್ಟಿದೆ.

7 ಗಂಟೆಯ ನಂತರ "ನೋ ಸ್ಕ್ರೀನ್"
ಬೆಳಗಾವಿಯ ಹಲಗಾ ಗ್ರಾಮವು, ಡಿಜಿಟಲ್ ಸ್ಕ್ರೀನ್ ಅತಿಯಾದ ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಕುಟುಂಬ ಬಾಂಧವ್ಯ ಗಟ್ಟಿಗೊಳಿಸುವ ಉದ್ದೇಶದಿಂದ ವಿಶಿಷ್ಟ ಉಪಕ್ರಮ ಜಾರಿಗೆ ತಂದಿದೆ. ಆ ಪ್ರಕಾರ, ಬೆಳಗಾವಿಯ ಹಲಗಾ ಗ್ರಾಮವು ಪ್ರತಿ ಸಂಜೆ 7 ರಿಂದ 9 ರವರೆಗೆ 'ನೋ-ಸ್ಕ್ರೀನ್' ನಿಯಮ ಜಾರಿಗೆ ಬಂದಿದೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಉತ್ತಮ ವಾತಾವರಣ ನಿರ್ಮಿಸುವುದು ಹಾಗೂ ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುವುದೇ ಇದರ ಮುಖ್ಯ ಗುರಿ.
ಯಾವಾಗದಿಂದ ಜಾರಿ?
ದಿನಾಂಕ ಡಿಸೆಂಬರ್ 17, 2025 ರಿಂದ ಜಾರಿಯಲ್ಲಿರುವ ಈ ನಿರ್ಧಾರ, ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ಗಳನ್ನು ಆಫ್ ಮಾಡುತ್ತಾರೆ. ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸಂಜೆ 7 ಮತ್ತು 9 ಗಂಟೆಗೆ ಸೈರನ್ ಮೊಳಗುತ್ತವೆ. ಆರಂಭದ ಸೈರನ್ ಮತ್ತು ಅಂತ್ಯದ ಸೈರನ್ 9 ಗಂಟೆಗೆ ಆಗಲಿದೆ.
ಈ ಅವಧಿಯಲ್ಲಿ, "ನೋ ಟಿವಿ, ನೋ ಮೊಬೈಲ್, ಬರೀ ಓದು ಮತ್ತು ಸಂಭಾಷಣೆ" ಎಂಬ ಘೋಷವಾಕ್ಯ ಪಾಲಿಸಲಾಗುತ್ತದೆ. ಇದು ಮಕ್ಕಳ ಅಧ್ಯಯನ ಹಾಗೂ ಸಾಮಾಜಿಕ ಸಂವಾದಕ್ಕೂ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ. ಸುಮಾರು 12,000 ಜನಸಂಖ್ಯೆ ಹೊಂದಿರುವ ಹಲಗಾ, ಬೆಳಗಾವಿ ಹೊರವಲಯದ ಸುವರ್ಣ ವಿಧಾನಸೌಧದ ಸಮೀಪದಲ್ಲಿದೆ.
ಗ್ರಾಮ ಪಂಚಾಯತ್ ಈ ಉಪಕ್ರಮ ಮುಂದುವರೆಸಿದ್ದು, ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಭಾಗವಹಿಸಲು ಪ್ರೇರಣೆ ನೀಡುತ್ತಿದ್ದಾರೆ. ಸಂಪೂರ್ಣ ಸ್ವಯಂಪ್ರೇರಿತ ಹಾಗೂ ಸಂವಾದ ಬೆಂಬಲಕ್ಕಾಗಿ ಈ ಅಭಿಯಾನ ಆರಂಭಿಸಲಾಗಿದೆ. ಇನ್ನು ಕಾನೂನು ಜಾರಿಗಿಂತ ಜಾಗೃತಿ ಮತ್ತು ಸಾರ್ವಜನಿಕ ಬೆಂಬಲದ ಮೂಲಕ ಸದ್ಯ ಈ ಅಭಿಯಾನ ಯಶಸ್ವಿಯಾಗಿದೆ.
ಇದರ ಉದ್ದೇಶ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸುವುದು ಹಾಗೂ ಕುಟುಂಬದಲ್ಲಿ ಬಾಂಧವ್ಯ ಹೆಚ್ಚಿಸುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಆರಂಭವಾದ ಈ ಕ್ರಮ, ಸದ್ಯ ಕರ್ನಾಟಕದಲ್ಲೂ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಆಗ್ರನ್ ಧುಳಗಾವ್ ಗ್ರಾಮದಿಂದ ಈ ಪರಿಕಲ್ಪನೆ ಪ್ರೇರಣೆಗೊಂಡಿದೆ. ಅಲ್ಲಿನ ಇದೇ ರೀತಿಯ ಕಾರ್ಯಕ್ರಮ ಮಕ್ಕಳ ಅಧ್ಯಯನಕ್ಕೆ ಹೊಸ ದಾರಿ ಮಾಡಿಕೊಟ್ಟಿತ್ತು. ಇದೀಗ ಹಲಗಾ ಕೂಡ ಆ ಕ್ರಮವನ್ನು ಜಾರಿಗೆ ತಂದು, ಆರೋಗ್ಯಕರ ಡಿಜಿಟಲ್ ಅಭ್ಯಾಸಗಳಿಗೆ, ಮಕ್ಕಳ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ.


Click it and Unblock the Notifications