ಕರ್ನಾಟಕದಲ್ಲಿನ ದರ ಏರಿಕೆ ಸರಣಿಯು ಮುಂದುವರೆದಿದೆ. ಕನ್ನಡಿಗರು ಸರಣಿ ಬೆಲೆ ಏರಿಕೆ ಭಾರವನ್ನು ಹೊರಬೇಕಾದ ಪರಿಸ್ಥಿತಿ ಬಂದಿದೆ. ಮೆಟ್ರೋ, ಬಸ್ ದರ, ಆಟೋದರ ಏರಿಕೆ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ. ಈ ದರ ಹೆಚ್ಚಳವು ಕರ್ನಾಟಕದ ವಿದ್ಯುತ್ ಗ್ರಾಹಕರ ಮೇಲೆ ಪರಿಣಾಮ ಬೀರಲಿರುವುದು ಖಚಿತ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ರಾಜ್ಯದ ವಿದ್ಯುತ್ ದರವನ್ನು ಏಪ್ರಿಲ್ 1, 2024 ರಿಂದ ಜಾರಿಗೆ ಬರುವಂತೆ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಿಸಿದೆ. ಈ ಹೆಚ್ಚಳವು ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿಗಳ ಪಿಂಚಣಿ ಮತ್ತು ಗ್ರಾಚ್ಯುಟಿ ವೆಚ್ಚಗಳನ್ನು ಭರಿಸಲು ಗ್ರಾಹಕರಿಂದ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ಹೆಚ್ಚುತ್ತಿರುವ ಬೆಲೆಗಳಿಂದ ತತ್ತರಿಸಿರುವವರಿಗೆ ಜನಸಾಮಾನ್ಯರಿಗೆ ಇದರಿಂದ ಹೆಚ್ಚುವರಿ ಹೊರೆ ಆಗಲಿದೆ. 2023 ರಲ್ಲಿ 3 ಬಾರಿ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು, ಹಾಗೂ 2024 ರಲ್ಲಿ ಪ್ರತಿ ಯೂನಿಟ್ ಗೆ 50-60 ಪೈಸೆ ಏರಿಕೆಗೆ ಎಸ್ಕಾಂಗಳು ಕೆಇಆರ್ಸಿ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದವು.ಎಸ್ಕಾಂಗಳು ನಷ್ಟ ಸರಿದೂಗಿಸಲು 2024-25ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಕೆಇಆರ್‌ಸಿಗೆ ಮನವಿ ಮಾಡಿಕೊಂಡಿದ್ದವು.

ಸಚಿವ ಶರಣಪ್ರಕಾಶ್ ಪಾಟೀಲ ದರ ಹೆಚ್ಚಳದ ಬಗ್ಗೆ ಏನಂದ್ರು?
ವಿದ್ಯುತ್ ದರ ಏರಿಕೆ ಕುರಿತು ಸ್ಪಷ್ಟನೆ ನೀಡಿದ ಸಚಿವ ಶರಣಪ್ರಕಾಶ್ ಪಾಟೀಲ್, ಈ ಹೆಚ್ಚಳವು ಸಾಮಾನ್ಯ ಜನರಿಗೆ ಹೊರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಗೃಹಜ್ಯೋತಿ ಯೋಜನೆಯಿಂದಾಗಿ ಯಾವುದೇ ನಷ್ಟ ಸಂಭವಿಸಿಲ್ಲ ಮತ್ತು ಈ ದರ ಏರಿಕೆಯು ಗೃಹಜ್ಯೋತಿ ಯೋಜನೆಯ ನಷ್ಟವನ್ನು ಸರಿದೂಗಿಸಲು ಮಾಡಲಾಗಿಲ್ಲ ಎಂದು ಅವರು ಹೇಳಿದರು. ಸರ್ಕಾರವು 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು, ಅದಕ್ಕಿಂತ ಹೆಚ್ಚಿನ ಬಳಕೆಯ ಮೇಲಿನ ದರ ಮಾತ್ರ ಹೆಚ್ಚಾಗಿದೆ ಎಂದು ಅವರು ತಿಳಿಸಿದರು. ಬಿಜೆಪಿಯು ಶ್ರೀಮಂತರ ಪರವಾಗಿ ಮಾತನಾಡುತ್ತಿದೆ ಎಂದು ಟೀಕಿಸಿದ ಅವರು, ಸರ್ಕಾರ ದರ ಏರಿಕೆ ಮಾಡಿಲ್ಲ, ಬದಲಿಗೆ ಸ್ವಾಯತ್ತ ಸಂಸ್ಥೆಯಾದ ಕೆಇಆರ್‌ಸಿ ಈ ನಿರ್ಧಾರ ತೆಗೆದುಕೊಂಡಿದೆ. ಈ ವಿಷಯದಲ್ಲಿ ಬಿಜೆಪಿಯ ಆರೋಪಗಳು ಆಧಾರರಹಿತ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಇಂಧನ ಪೂರೈಕೆ ಕಂಪನಿಗಳಿಗೆ (ಎಸ್ಕಾಂಗಳು) ಗ್ರಾಹಕರಿಂದ ಸರ್ಕಾರದ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳ ಪಾಲನ್ನು ವಸೂಲಿ ಮಾಡಲು ಅನುಮತಿ ನೀಡಿರುವ ಆದೇಶವು ಈ ವರ್ಷ ಮಾತ್ರವಲ್ಲದೆ, 2026-27 ಮತ್ತು 2027-28 ರ ಆರ್ಥಿಕ ವರ್ಷಗಳಿಗೂ ಅನ್ವಯಿಸುತ್ತದೆ. ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಗ್ರಾಹಕರು ಕ್ರಮವಾಗಿ 35 ಪೈಸೆ ಮತ್ತು 34 ಪೈಸೆಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.
ಈ ಹೆಚ್ಚಳವು ನೀರಾವರಿ ಪಂಪ್‌ಸೆಟ್‌ಗಳು ಮತ್ತು ಎಲ್ಲಾ ವಿದ್ಯುತ್ ಬಳಕೆದಾರರನ್ನು ಒಳಗೊಂಡಂತೆ ಎಲ್ಲಾ ಗ್ರಾಹಕರಿಗೆ ಅನ್ವಯಿಸುತ್ತದೆ. ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ಸಿಬ್ಬಂದಿ ಪಿಂಚಣಿ ಮತ್ತು ಗ್ರಾಚ್ಯುಟಿಯಲ್ಲಿ ಸರ್ಕಾರದ ಪಾಲನ್ನು ಎಸ್ಕಾಂಗಳು ಬಯಸಿದರೆ ಗ್ರಾಹಕರಿಗೆ ವರ್ಗಾಯಿಸಬಹುದು ಎಂದು 2022 ರಲ್ಲಿ ಕರ್ನಾಟಕ ವಿದ್ಯುತ್ ಸುಧಾರಣಾ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿತ್ತು. ಈ ತಿದ್ದುಪಡಿಗೆ ಆಗಲೇ ವಿರೋಧ ವ್ಯಕ್ತವಾಗಿತ್ತು, ಆದರೆ ಈಗ ಸರ್ಕಾರ ಅದನ್ನು ಜಾರಿಗೊಳಿಸಲು ಮುಂದಾಗಿದೆ. ಪಿಂಚಣಿ ಮತ್ತು ಗ್ರಾಚ್ಯುಟಿ ನೆಪದಲ್ಲಿ 36 ಪೈಸೆ ಹೆಚ್ಚಳ ಮಾಡಿದ್ದರಿಂದ, ಒಂದು ಮನೆಗೆ ಅಂದಾಜು 90 ರೂ. ವಿದ್ಯುತ್ ಬಿಲ್ ಹೆಚ್ಚಳವಾಗುವ ಸಾಧ್ಯತೆಯಿದೆ.
ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯೂ, ರಾಜ್ಯ ಸರ್ಕಾರ ಬೆಲೆ ಏರಿಕೆ ಒಂದೊಂದಾಗಿಯೇ ಅನುಷ್ಠಾನ ಮಾಡುತ್ತಿದೆ. ಈಗಾಗಲೇ ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಒಂದು ಕಡೆ ಜನರಿಗೆ ಫ್ರೀ ವಿದ್ಯುತ್ ಎಂದು ಹೇಳುತ್ತಾರೆ ಮತ್ತೊಂದು ಕಡೆ ವಸೂಲಿ ಮಾಡಲು ಹೊರಡುತ್ತಾರೆ. ಮುಂದೆ ಪಾರ್ಕ್, ಗಾಳಿ ಸೇವನೆಗೂ ದರ ವಿಧಿಸಬಹುದು. ಸರ್ಕಾರದ ಮೇಲೆ ಹೊರೆ ಜಾಸ್ತಿ ಆಗುತ್ತಿದೆ. ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ದರ ಏರಿಕೆ ಮಾಡಿದ್ದಾರೆ. ಇದರ ವಿರುದ್ಧ ಸದನದಲ್ಲಿ ಹೋರಾಟ ಮಾಡುವುದು ನಿಶ್ಚಿತ ಎಂದು ಹೇಳಿದೆ


Click it and Unblock the Notifications