ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ನಮ್ಮ ಬಜೆಟ್ ಮೇಲೆ ಟೊಮೆಟೊ ದರವು ಹೆಚ್ಚಿನ ಪ್ರಭಾವವನ್ನು ಉಂಟು ಮಾಡುತ್ತದೆ. ನಮ್ಮ ದಿನನಿತ್ಯದ ಅಡುಗೆಗೆ ಅಗತ್ಯವಾದ ಟೊಮೆಟೊ ಬೆಲೆ ಹೆಚ್ಚಾದಂತೆ ಜನರು ದಿನನಿತ್ಯದ ಖರ್ಚಿಗೂ ಕಷ್ಟಪಡುವಂತಾಗಿದೆ. ಆದರೆ ಹಲವಾರು ರೈತರುಗಳು ಟೊಮೆಟೊ ಮಾರಾಟದಿಂದಲೇ ಸಾಕಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.
ಟೊಮೆಟೊ ಬೆಲೆ ಏರಿಕೆಯಿಂದ ಸಾಮಾನ್ಯ ವ್ಯಕ್ತಿಯ ಜೇಬು ಖಾಲಿಯಾಗುತ್ತಿದೆ. ಟೊಮೆಟೊ ದರವು ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳು ಇಲ್ಲ. ಕೆಲವೆಡೆ ಸಾರ್ವಕಾಲಿಕ ಗರಿಷ್ಠ ಮಟ್ಟ 200 ರೂಪಾಯಿಗೆ ತಲುಪಿದೆ. ಈ ನಡುವೆ ಕರ್ನಾಟಕದ ವಿಜಯಪುರ ಜಿಲ್ಲೆಯ ರೈತರೊಬ್ಬರು ಟೊಮೆಟೊ ಮಾರಾಟ ಮಾಡಿಯೇ ಶ್ರೀಮಂತರಾಗಿದ್ದಾರೆ.

ಟೊಮೆಟೊ ಮಾರಿ ಶ್ರೀಮಂತರಾದ ರೈತ
ರಾಜ್ಯದಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದ ನಂತರ ಭೀಮು ಬಾವಸಿಂಗ್ ಲಮಾಣಿ 45 ದಿನಗಳಲ್ಲಿ ಒಟ್ಟು 50 ಲಕ್ಷ ರೂಪಾಯಿ ಆದಾಯವನ್ನು ಗಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ರೈತ ತನ್ನ ನಾಲ್ಕು ಎಕರೆ ಒಣ ಭೂಮಿಯಲ್ಲಿ ಟೊಮೆಟೊ ಬೆಳೆದಿದ್ದು, ಈಗಿನ ಬೆಲೆ ಇನ್ನೂ ಮೂರು ವಾರ ಇದ್ದರೆ 50 ಲಕ್ಷ ರೂಪಾಯಿ ಹೆಚ್ಚುವರಿ ಲಾಭ ಗಳಿಸಬಹುದು ಎಂದು ರೈತ ಅಂದಾಜಿಸಿದ್ದಾರೆ.
40 ವರ್ಷದ ರೈತ ಈ ಹಿಂದೆ ಜೋಳ, ದ್ರಾಕ್ಷಿ, ಕಬ್ಬು ಮುಂತಾದ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿದ್ದರು. ಆದರೆ ಟೊಮೆಟೊಗೆ ಏಕಾಏಕಿ ಬೇಡಿಕೆ ಹೆಚ್ಚಿದ್ದರಿಂದ ಕೇವಲ 45 ದಿನದಲ್ಲಿ 50 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದಾರೆ ಎಂದು ಲಮಾಣಿ ಹೇಳಿಕೊಂಡಿದ್ದಾರೆ. ಇನ್ನು ಈ ಹಿಂದೆ ಕಟಾವಿನ ಸಮಯದಲ್ಲಿ ತಾನು ಕೇವಲ 1 ಲಕ್ಷ ರೂಪಾಯಿಗಳವರೆಗೆ ಆದಾಯವನ್ನು ಪಡೆಯುತ್ತಿದ್ದೆ ಎಂದು ಲಮಾಣಿ ಹೇಳಿದ್ದಾರೆ.
ಈ ಹಿಂದೆ ಒಟ್ಟಾಗಿ ಒಂದು ಲಕ್ಷ ರೂಪಾಯಿವರೆಗೆ ಪಡೆಯುತ್ತಿದ್ದವರು ಈಗ ಟೊಮೆಟೊ ಕೃಷಿ ಮಾಡುತ್ತಿರುವಾಗ ಪ್ರತಿ ದಿನ ಸಾವಿರಾರು ರೂಪಾಯಿ ಪಡೆಯುತ್ತಿದ್ದಾರೆ. ತನ್ನಂತೆ ಟೊಮೆಟೊ ಮಾರಾಟ ಮಾಡಿ ಇತರೆ ರೈತರು ಹಣ ಗಳಿಸುತ್ತಿದ್ದಾರೆ ಎಂದು ಲಮಾಣಿ ಹೇಳಿಕೊಂಡಿದ್ದಾರೆ. ವಿಜಯಪುರದ ಕೃಷಿ ಉತ್ಪನ್ನ ಮಾರುಕಟ್ಟೆ ನಿಗಮಕ್ಕೆ 150 ಟ್ರೇ ಟೊಮೆಟೊಗಳನ್ನು ತಲುಪಿಸಿ ಲಕ್ಷಗಟ್ಟಲೆ ಲಾಭ ಗಳಿಸಿರುವುದಾಗಿ ತಿಳಿಸಿದ್ದಾರೆ.
ಎಷ್ಟು ಟೊಮೆಟೊ, ಎಷ್ಟು ರೂಪಾಯಿಗೆ ಮಾರಾಟ ನೋಡಿ
ಈ ಹಿಂದೆ 25 ಕೆಜಿ ಟೊಮೆಟೊದ ಟ್ರೇನಲ್ಲಿ ರೈತ ಭೀಮು ಬಾವಸಿಂಗ್ ಲಮಾಣಿ ಪಡೆಯುತ್ತಿದ್ದ ಲಾಭವು 800 ರೂಪಾಯಿಯಿಂದ 1,000 ರೂಪಾಯಿ ಆಗಿತ್ತು. ಆದರೆ ಈಗ ಈ ಲಾಭವು 2,500 ರೂಪಾಯಿಯಿಂದ 3,000 ರೂಪಾಯಿ ಆಗಿದೆ ಎಂದು ಲಮಾಣಿ ಹೇಳುತ್ತಾರೆ. ಇನ್ನ ಲಮಾಣಿಯ ಪತ್ನಿಯು ಕೂಡಾ ಜೊತೆಯಾಗಿ ಕೆಲಸ ಮಾಡುತ್ತಾರೆ. ಪ್ರತಿ ರೈತ ಕಾರ್ಮಿಕರಿಗೆ ದಿನಗೂಲಿ 400 ರೂಪಾಯಿ ಆಗಿದೆ.
ಕರ್ನಾಟಕದ ಕಿತ್ತೂರಿನ ಬೆಳಗಾವಿ, ಬಾಗಲಕೋಟೆ ಮತ್ತು ಚಿಕ್ಕೋಡಿ ಒಣ ಕೃಷಿ ಭೂಮಿಯಿಂದಾಗಿ ಜನಪ್ರಿಯವಾಗಿದೆ. ಭೂಮಿಯ ಪರಿಸ್ಥಿತಿ ಮತ್ತು ಕಡಿಮೆ ಕೊಯ್ಲು ಸಮಯದಿಂದಾಗಿ ಈ ಪ್ರದೇಶಗಳಲ್ಲಿನ ರೈತರು ಈಗ ಟೊಮೆಟೊಗಳನ್ನು ಬೆಳೆಯುವ ಆಯ್ಕೆಯನ್ನು ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹಿಂದೂಸ್ತಾನ್ ಟೈಮ್ಸ್‌ಗೆ ವಿವರಿಸಿದ್ದಾರೆ.
ಟೊಮೆಟೊ ಮಾರಿ 3 ಕೋಟಿ ಗಳಿಕೆ
ಮಹಾರಾಷ್ಟ್ರದ ಪುಣೆಯ ರೈತರೊಬ್ಬರು ಹಲವು ಸವಾಲುಗಳನ್ನು ಮೆಟ್ಟಿನಿಂತು ಕೇವಲ ಒಂದು ತಿಂಗಳ ಅವಧಿಯಲ್ಲಿ ಟೊಮೆಟೊ ಮಾರಾಟ ಮಾಡಿ 3 ಕೋಟಿ ರೂಪಾಯಿ ಸಂಪಾದನೆ ಮಾಡಿ ಈಗ ಕೋಟ್ಯಾಧಿಪತಿಯಾಗಿದ್ದಾರೆ. ಪುಣೆ ಜಿಲ್ಲೆಯ ಜುನ್ನಾರ್ ತೆಹಸಿಲ್‌ನ ಪಚ್‌ಘರ್ ಗ್ರಾಮದ 36 ವರ್ಷದ ರೈತ ಈಶ್ವರ್ ಗೇಕರ್ ಮೇ ತಿಂಗಳಲ್ಲಿ ಕಡಿಮೆ ಬೆಲೆಯಿಂದಾಗಿ ಹೆಚ್ಚಿನ ಪ್ರಮಾಣದ ಟೊಮೆಟೊವನ್ನು ರಸ್ತೆಗೆ ಸುರಿಯುವ ಪರಿಸ್ಥಿತಿಗೆ ಬಂದಿದ್ದರು. ಆದರೆ ಈ ಹಿನ್ನಡೆಯಿಂದ ವಿಚಲಿತರಾಗದೆ ಮತ್ತೆ ಟೊಮೆಟೊವನ್ನು ತಮ್ಮ 12 ಎಕರೆ ಜಮೀನಿನಲ್ಲಿ ಬೆಳೆದಿದ್ದಾರೆ.
ಇದೀಗ ಟೊಮೆಟೊ ಬೆಲೆ ಗಗನಕ್ಕೇರಿರುವಾಗ ಜೂನ್ 11ರಿಂದ ಜುಲೈ 18ರ ನಡುವೆ ತಮ್ಮ ಟೊಮೆಟೊ ಬೆಳೆ ಮಾರಾಟದ ಮೂಲಕ ಮೂರು ಕೋಟಿ ರೂಪಾಯಿ ಗಳಿಸಿದ್ದಾರೆ. 18,000 ಕ್ರೇಟ್ ಟೊಮೆಟೊಗಳನ್ನು (ಪ್ರತಿ ಕ್ರೇಟ್ 20 ಕೆಜಿ ಟೊಮೆಟೊ) ಮೂರು ಕೋಟಿ ರೂಪಾಯಿಗೆ ಮಾರಾಟ ಮಾಡಿರುವುದಾಗಿ ಅವರು ಹೇಳಿದ್ದಾರೆ.


Click it and Unblock the Notifications