ಕರ್ನಾಟಕ ರಾಜ್ಯ ಸರ್ಕಾರವು ಪೊಲೀಸ್ ಸಿಬ್ಬಂದಿಗಳ ವೈಯಕ್ತಿಕ ಜೀವನಕ್ಕೂ ಮಹತ್ವ ನೀಡುವ ಉದ್ದೇಶದಿಂದ ಮಹತ್ವದ ಹಾಗೂ ಮಾನವೀಯ ನಿರ್ಧಾರವೊಂದನ್ನು ಜಾರಿಗೊಳಿಸಿದೆ. ಸಾರ್ವಜನಿಕರ ರಕ್ಷಣೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ಜವಾಬ್ದಾರಿಯನ್ನು ಹೊತ್ತು ಹಗಲಿರುಳು ದುಡಿಯುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ನು ಮುಂದೆ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನಗಳಲ್ಲಿ ಸಾಂದರ್ಭಿಕ ರಜೆ ಪಡೆಯಬಹುದಾಗಿದೆ. ಈ ನಿರ್ಧಾರವು ರಾಜ್ಯದ ಪೊಲೀಸ್ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದೆ.

ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಆರಕ್ಷಕ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಅವರು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳು ತಮ್ಮ ಹುಟ್ಟುಹಬ್ಬ ಅಥವಾ ಮದುವೆ ವಾರ್ಷಿಕೋತ್ಸವದ ದಿನಗಳಲ್ಲಿ ರಜೆ ಕೋರಿ ಅರ್ಜಿ ಸಲ್ಲಿಸಿದರೆ, ಯಾವುದೇ ಅಡಚಣೆ ಇಲ್ಲದೆ ಅದನ್ನು ಮಂಜೂರು ಮಾಡುವಂತೆ ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಆದೇಶವನ್ನು ಎಲ್ಲ ಜಿಲ್ಲೆಗಳು ಮತ್ತು ಘಟಕಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕೆಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪೊಲೀಸ್ ಸಿಬ್ಬಂದಿಗಳ ಕೆಲಸ ಅತ್ಯಂತ ಸವಾಲಿನ ಮತ್ತು ಒತ್ತಡಪೂರ್ಣವಾಗಿದೆ. ಹಬ್ಬಗಳು, ರಜೆ ದಿನಗಳು, ಕುಟುಂಬದ ಕಾರ್ಯಕ್ರಮಗಳು ಹಾಗೂ ವೈಯಕ್ತಿಕ ಸಂತಸದ ಕ್ಷಣಗಳಲ್ಲೂ ಸಹ ಅವರು ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಸಮಾಜದ ಸುರಕ್ಷತೆಗಾಗಿ ತಮ್ಮ ವೈಯಕ್ತಿಕ ಜೀವನವನ್ನು ಬದಿಗೊತ್ತಿ ಸೇವೆ ಸಲ್ಲಿಸುವ ಪೊಲೀಸರು ಬಹುಸಾರ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದನ್ನು ಇಲಾಖೆ ಗಮನಿಸಿದೆ.
ಈ ಹಿನ್ನೆಲೆಯಲ್ಲೇ, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂತಹ ಮಹತ್ವದ ದಿನಗಳಲ್ಲಿ ರಜೆ ನೀಡುವ ಮೂಲಕ ಸಿಬ್ಬಂದಿಗೆ ಮನಸ್ಸಿನ ವಿಶ್ರಾಂತಿ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ರಜೆಗಳಿಂದ ಪೊಲೀಸ್ ಸಿಬ್ಬಂದಿಗೆ ಕುಟುಂಬದೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲು ಅವಕಾಶ ಸಿಗುತ್ತದೆ. ಇದರಿಂದ ಅವರು ಭಾವನಾತ್ಮಕವಾಗಿ ಬಲಿಷ್ಠರಾಗುವುದರ ಜೊತೆಗೆ ಕೆಲಸದ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.
ಈ ನಿರ್ಧಾರವು ಪೊಲೀಸ್ ಸಿಬ್ಬಂದಿಯ ಮನೋಬಲವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನ ಸಾಧಿಸಲು ಇದು ಸಹಕಾರಿಯಾಗುತ್ತದೆ. ಸಿಬ್ಬಂದಿಯಲ್ಲಿ ತೃಪ್ತಿ ಹೆಚ್ಚಾಗಿ, ಸೇವೆಯ ಗುಣಮಟ್ಟ ಮತ್ತು ಕಾರ್ಯಕ್ಷಮತೆಯಲ್ಲೂ ಉತ್ತಮ ಪರಿಣಾಮ ಬೀರುವ ನಿರೀಕ್ಷೆಯಿದೆ. ಪೊಲೀಸ್ ಸಿಬ್ಬಂದಿಯ ತ್ಯಾಗ, ನಿಷ್ಠೆ ಮತ್ತು ಪರಿಶ್ರಮವನ್ನು ಗುರುತಿಸುವ ಈ ಮಾನವೀಯ ಕ್ರಮವು ಇಲಾಖೆಯ ಒಳಗಿನ ವಿಶ್ವಾಸ ಮತ್ತು ಬದ್ಧತೆಯನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications