ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶವನ್ನು ನೀಡುವ ಶಕ್ತಿ ಯೋಜನೆ ಆರಂಭವಾದ ಬಳಿಕ ಬಸ್‌ಗಳ ಕೊರತೆಯು ಕಾಡುತ್ತಿದೆ. ಎಲ್ಲ ಬಸ್‌ಗಳು ಕೂಡಾ ತುಂಬಿರುವುದನ್ನು ನಾವು ನೋಡಬಹುದಾಗಿದೆ. ಅದರಲ್ಲೂ ಮುಖ್ಯವಾಗಿ ಬೆಳ್ಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಬಸ್ ತುಂಬಿರುತ್ತದೆ. ಆದರೆ ಇಲ್ಲಿದೆ ನಿಮಗೊಂದು ಸಿಹಿಸುದ್ದಿ.
ರಸ್ತೆ ಸಾರಿಗೆ ನಿಗಮಗಳು (ಆರ್‌ಟಿಸಿ) ನಡೆಸುವ ಬಸ್‌ಗಳ ಕೊರತೆಯನ್ನು ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸರ್ಕಾರವು 5,500 ಹೊಸ ಬಸ್‌ಗಳನ್ನು ಖರೀದಿಸಿ ಕಂಡಕ್ಟರ್-ಕಮ್-ಡ್ರೈವರ್‌ಗಳು ಮತ್ತು ತಂತ್ರಜ್ಞರು ಸೇರಿದಂತೆ 9,000 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ. ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಬಸ್ ಸೇವೆಗಳ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಬುಧವಾರ ಕೌನ್ಸಿಲ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. "2018ರಲ್ಲಿ ಇದೇ ಸಚಿವರಾಗಿ ಕಚೇರಿಗೆ ತೆರಳಿದಾಗ ಆರ್‌ಟಿಸಿ ಬಳಿ ಸುಮಾರು 24,000 ಬಸ್‌ಗಳಿದ್ದು, ಈಗ ಅದು 23,000ಕ್ಕೆ ಇಳಿದಿದೆ," ಎಂದು ಮಾಹಿತಿ ನೀಡಿದ್ದಾರೆ.\
"ಕೋವಿಡ್ ಸಾಂಕ್ರಾಮಿಕದ ಸಂರ್ಭದಲ್ಲಿ 3,800 ಬಸ್ ಶೆಡ್ಯೂಲ್‌ಗಳನ್ನು ರದ್ದುಗೊಳಿಸಲಾಗಿದೆ. ಆದರೆ ಅವುಗಳ ಸೇವೆಯನ್ನು ಪುನರಾರಂಭಿಸಲಾಗಿಲ್ಲ," ಎಂದು ರಾಮಲಿಂಗಾ ರೆಡ್ಡಿ ಹೇಳಿದರು. "ಹಾಗೆಯೇ ಶಕ್ತಿ ಯೋಜನೆಯ ಅನುಷ್ಠಾನದ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಜಿಗಿತವಾಗಿದೆ," ಎಂದರು.
"ಪ್ರಯಾಣಿಕರ ಪ್ರಮಾಣ ಅಧಿಕವಾದಂತೆ ಹೆಚ್ಚಿನ ಬಸ್‌ಗಳು ಮತ್ತು ಮಾರ್ಗಗಳಿಗೆ ಬೇಡಿಕೆ ಬೆಳೆಯುತ್ತಿದೆ. ಆದ್ದರಿಂದ ಸರ್ಕಾರವು 5,500 ಬಸ್‌ಗಳನ್ನು ಖರೀದಿಸುತ್ತಿದೆ. ಅದನ್ನು ಮುಂದಿನ ಎರಡು ತಿಂಗಳುಗಳಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವಂತೆ ಮಾಡಲಾಗುವುದು," ಎಂದು ಹೇಳಿದರು.
ಯಶಸ್ವಿ ಯೋಜನೆ ಶಕ್ತಿ
ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸುವ ಶಕ್ತಿ ಯೋಜನೆಯು ಕರ್ನಾಟಕದಲ್ಲಿ ಜುಲೈ 11 ರಂದು ಪ್ರಾರಂಭವಾಗಿದೆ. ಈ ಯೋಜನೆ ಆರಂಭವಾದ ಬಳಿಕ ನಿರಂತರವಾಗಿ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆಯು ಅಧಿಕವಾಗುತ್ತಾ ಸಾಗಿದೆ. ಅಂದರೆ ಇದೊಂದು ಯಶಸ್ವಿ ಯೋಜನೆ ಎಂದರೆ ತಪ್ಪಾಗಲಾರದು.
ಮಹಿಳೆಯರು ಮತ್ತು ಪುರುಷರು ಸೇರಿದಂತೆ ಬಸ್ ಪ್ರಯಾಣಿಕರ ಹೆಚ್ಚಳವು ಅಸ್ತಿತ್ವದಲ್ಲಿರುವ ಬಸ್ ಮೂಲಸೌಕರ್ಯವನ್ನು ಅತೀ ಕಡಿಮೆ ಎನಿಸಿದೆ. ಬಸ್ ನಿಲ್ದಾಣಗಳಲ್ಲಿ ಪ್ರಸ್ತುತ ನಿರಂತರವಾಗಿ ದಟ್ಟಣೆ ಕಾಣುತ್ತಿದೆ. ಇದು ಸರ್ಕಾರಕ್ಕೆ ಮತ್ತೊಂದು ಸವಾಲು ಎಂದರೂ ತಪ್ಪಾಗಲಾರದು.
ಶಕ್ತಿ ಯೋಜನೆಯ ಪ್ರಭಾವದಿಂದಾಗಿ ಪ್ರಯಾಣಿಕರ ಸಂಖ್ಯೆಯೇನೋ ಅಧಿಕವಾಗಿದೆ. ಆದರೆ ಬಸ್‌ಗಳ ಸಂಖ್ಯೆ ಮಾತ್ರ ಅಧಿಕವಾಗಿಲ್ಲ. ಈ ಯೋಜನೆ ಆರಂಭವಾದ ಬಳಿಕ ಹೆಚ್ಚಿನ ಮಹಿಳೆಯರು ಧಾರ್ಮಿಕ ಕೇಂದ್ರಗಳು, ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
ಇದು ಕುಟುಂಬ ಪ್ರವಾಸಗಳಿಗೂ ಕಾರಣವಾಗಿದೆ. ಮದುವೆ ಸೇರಿದಂತೆ ಕೌಟುಂಬಿಕ ಕಾರ್ಯಕ್ರಮಗಳಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಇರುವ ಕಾರಣ ಪುರುಷರು ಕೂಡಾ ಬಸ್ ಪ್ರಯಾಣದ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಬಸ್‌ನಲ್ಲಿ ಮಹಿಳೆಯರ ಜೊತೆಗೆ ಪುರುಷರ ಪ್ರಯಾಣ ಪ್ರಮಾಣವು ಕೂಡಾ ಅಧಿಕವಾಗಿದೆ.


Click it and Unblock the Notifications