ಬೆಂಗಳೂರು, ಸೆಪ್ಟೆಂಬರ್ 18: ಮೆಟ್ರಿಕ್ ಬಳಿಕ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವ ಪರಿಶಿಷ್ಟ ಜಾತಿ (ಎಸ್‌ಸಿ)ಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತುಎಂಜಿನಿಯರಿಂಗ್ ನಂತಹ ವೃತ್ತಿಪರ ಕೋರ್ಸ್‌ಗಳಿಗೆ ಖಾಸಗಿ ಕಾಲೇಜುಗಳು ನಾನಾ ವಿಭಾಗದಡಿ ವಿಧಿಸುವ ಶುಲ್ಕವನ್ನು ಭರಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಈ ಹಿಂದೆ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಅಡಿಯಲ್ಲಿ, ಸಮಾಜ ಕಲ್ಯಾಣ ಇಲಾಖೆಯೂ ಕೋರ್ಸ್ ಶುಲ್ಕ, ಪರೀಕ್ಷಾ ಶುಲ್ಕ, ಗ್ರಂಥಾಲಯ ಮತ್ತು ಲ್ಯಾಬ್ ಶುಲ್ಕವನ್ನು ಸರ್ಕಾರ ಮರುಪಾವತಿ ಮಾಡುತ್ತಿತ್ತು. ಅದರೂ ಕೂಡಾ ಅನೇಕ ಖಾಸಗಿ ಕಾಲೇಜುಗಳು ಒಮ್ಮತದ ಒಪ್ಪಂದದ ಶುಲ್ಕವಾಗಿ ಸುಮಾರು 20,000 ರೂಪಾಯಿಂದ 50,000 ರೂ.ವರೆಗೆ ವಿಧಿಸುತ್ತಿದ್ದವು. ಹೀಗಾಗಿ ಎಸ್‌ಸಿ ಸಮುದಾಯದ ಅನೇಕ ವಿದ್ಯಾರ್ಥಿಗಳಿಗೆ ಇದನ್ನು ಪಾವತಿಸುವುದು ಕಷ್ಟವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಈ ಪ್ರಮುಖ ಕ್ರಮ ಕೈಗೊಂಡಿದೆ.

"ಇಂತಹ ಶುಲ್ಕವನ್ನು ಪಾವತಿಸಲು ಸಾಧ್ಯವಾಗದೆ ಅನೇಕ ವಿದ್ಯಾರ್ಥಿಗಳು ಅಧ್ಯಯನವನ್ನು ನಿಲ್ಲಿಸಿದ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ಸರಕಾರ ನೀಡುತ್ತಿದ್ದ ಸ್ಕಾಲರ್ ಶಿಪ್ ವ್ಯರ್ಥವಾಗುತ್ತಿತ್ತು. ಈ ಸಮಸ್ಯೆಯನ್ನು ಸರಿಪಡಿಸಲು, ಈ ಅರ್ಹ ಎಸ್‌ಸಿ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಈಗ ಖಾಸಗಿ ಕಾಲೇಜುಗಳು ವಿಧಿಸುವ ಎಲ್ಲಾ ಶುಲ್ಕವನ್ನು ಮರುಪಾವತಿಸಲು ನಿರ್ಧರಿಸಿದ್ದೇವೆ" ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಹೇಳಿದ್ದಾರೆ.
ಇನ್ನು ಈ ಕುರಿತು ರಾಜ್ಯ ಸರ್ಕಾರವು ಸೆಪ್ಟೆಂಬರ್ 13 ರಂದು ಆದೇಶವನ್ನು ಹೊರಡಿಸಿದ್ದು, ಈ ಆದೇಶದ ಪ್ರಕಾರ 2024-25 ಸಾಲಿನಿಂದ ಕೆಇಎ ಅಥವಾ ಇತರ ಕೇಂದ್ರೀಕೃತ ಪ್ರಾಧಿಕಾರಗಳ ಮೂಲಕ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಾ, ಆಯುಷ್, ಎಂಸಿಎ, ಎಂಬಿಎ, ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ಸೀಟುಗಳನ್ನು ಬಯಸುವ ಎಲ್ಲಾ ಎಸ್‌ಸಿ ಸಮುದಾಯದ ವಿದ್ಯಾರ್ಥಿಗಳು,
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಶುಲ್ಕ ಮರುಪಾವತಿಸುವ ಯೋಜನೆ ಅಡಿಯಲ್ಲಿ ಅರ್ಹರಾಗಿರುತ್ತಾರೆ.
ಯಾರು ಅರ್ಹರು:
ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳ ಎಸ್‌ಸಿ ವಿದ್ಯಾರ್ಥಿಗಳು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಥವಾ ಅಂತಹುದೇ ಏಜೆನ್ಸಿ ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಸೀಟುಗಳನ್ನು ಪಡೆಯುವವರು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಿಸಲು ಖಾಸಗಿ ಕಾಲೇಜುಗಳಿಗೆ ರಾಜ್ಯವು ಅನುಮತಿ ನೀಡಿದ ಸಮಯದಲ್ಲಿ ರಾಜ್ಯ ಸರ್ಕಾರದ ಈ ಮಹತ್ವದ ಕ್ರಮ ಕೈಗೊಡಿದೆ.
ಶುಲ್ಕ ಹೆಚ್ಚಳ:
2024-25ರ ಶೈಕ್ಷಣಿಕ ವರ್ಷಕ್ಕೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಲು ಖಾಸಗಿ ಕಾಲೇಜುಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ, ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗೆ ವಾರ್ಷಿಕ ಶುಲ್ಕವು ಸಿಇಟಿ ಸೀಟುಗಳಿಗೆ 76,135 ರೂ.ನಿಂದ 84,595 ರೂ.ವರೆಗೆ ಮತ್ತು ಕಾಮೆಡ್-ಕೆ ಸೀಟುಗಳಿಗೆ 1.86 ಲಕ್ಷ ರೂ.ಯಿಂದ 2.61 ಲಕ್ಷ ರೂ.ವರೆಗೆ ಹೆಚ್ಚಳವಾಗಳಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳಿಗೆ ವಾರ್ಷಿಕ 1.4 ಲಕ್ಷ ರೂ. ವೆಚ್ಚವಾದರೆ, ಖಾಸಗಿ ಕಾಲೇಜಿನ ಖಾಸಗಿ ಸೀಟಿಗೆ 11.88 ಲಕ್ಷ ರೂ. ವೆಚ್ಚವಾಗುತ್ತದೆ.
ಕಳೆದು ವರ್ಷ ಸರ್ಕಾರಿ ಕೋಟಾದ ಇಂಜಿನಿಯರಿಂಗ್ ಪ್ರವೇಶದ ಶುಲ್ಕ ಹೆಚ್ಚಳವಾಗಿತ್ತು. ಈ ಸಲ 15% ಶುಲ್ಕ ಹೆಚ್ಚಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿತ್ತು. ಆದರೆ ಸರ್ಕಾರ ಹಾವು ಸಾಯಬಾರದು, ಕೋಲೂ ಮುರಿಯಬಾರದೆಂಬ ಉದ್ದೇಶದಿಂದ ಶೇ. 10 ರಷ್ಟು ಹೆಚ್ಚಿಸಿತ್ತು.


Click it and Unblock the Notifications