ಬೆಂಗಳೂರು ಪಕ್ಕದಲ್ಲೇ ಇರುವ ತುಮಕೂರು ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಆದರೆ ತುಮಕೂರು ಜಿಲ್ಲೆಯಲ್ಲಿರುವ ಕೆಲವು ತಾಲೂಕುಗಳಲ್ಲಿ, ಇನ್ನೂ ಅಭಿವೃದ್ಧಿಯ ಛಾಯೆ ಬಂದಿರಲಿಲ್ಲ. ಆದರೆ ಈಗ ಸರ್ಕಾರದ ಒಂದು ಹೆಜ್ಜೆ ಮುಂದೆ ಹೋಗಿ ತುಮಕೂರು ಜಿಲ್ಲೆ ಜನರಿಗೆ ಗುಡ್‌ನ್ಯೂಸ್ ನೀಡಿದೆ. ಅದೇನೆಂದರೆ ಶಿರಾ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಉಕ್ಕು ಉತ್ಪನ್ನಗಳ ಉತ್ಪಾದನಾ ಘಟಕ ಸ್ಥಾಪಿಸುವ ಬಗ್ಗೆ ಮಾತು ಕೇಳಿ ಬರುತ್ತಿದೆ.

ಹೌದು, ಶಿರಾ ಕೈಗಾರಿಕಾ ಪ್ರದೇಶದಲ್ಲಿ ಸ್ಟೀಲ್ ಪ್ಲಾಂಟ್ (ಉಕ್ಕು ಉತ್ಪಾದನಾ ಘಟಕ) ಸ್ಥಾಪಿಸಲು, ಕ್ರಿಸೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ 138 ಕೋಟಿ ರೂ. ಹೂಡಿಕೆ ಪ್ರಸ್ತಾವನೆಗೆ ತಾತ್ವಿಕ ಅನುಮೋದನೆ ನೀಡಿದೆ ಎನ್ನಲಾಗುತ್ತಿದೆ. ಈ ವ್ಯವಸ್ಥಿತ ಹೂಡಿಕೆ ಯೋಜನೆ ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಮತ್ತೊಂದು ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಹೊಸ ಸ್ಟೀಲ್ ಪ್ಲಾಂಟ್ ಮುಖ್ಯಾಂಶಗಳು:
ಉತ್ಪಾದನೆ:
ಹೊಸ ಸ್ಟೀಲ್ ಪ್ಲಾಂಟ್ (ಉಕ್ಕು ಉತ್ಪಾದನಾ ಘಟಕ)ದಲ್ಲಿ ಥರ್ಮೋ-ಮೆಕ್ಯಾನಿಕಲಿ ಟ್ರೀಟಡ್ (TMT) ಬಾರ್‌ಗಳು, ರಾಡ್‌ಗಳು ಮತ್ತು ಉಕ್ಕು ಸಂಬಂಧಿತ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
ಭೂಮಿ ಮಂಜೂರು:
ಹೊಸ ಉಕ್ಕು ಉತ್ಪಾದನಾ ಘಟಕ ಸ್ಥಾಪಿಸಲು ಸರಿಯಾದ ಸ್ಥಳ ಬೇಕು. ಹೀಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೇ (KIADB) ಈ ಯೋಜನೆಗಾಗಿ 12 ಎಕರೆ ಭೂಮಿಯನ್ನು ಮಂಜೂರು ಮಾಡಲಿದೆ ಎನ್ನಲಾಗುತ್ತಿದೆ
ಉದ್ಯೋಗ ಸೃಷ್ಟಿ:
ಈ ನೂತನ ಯೋಜನೆಯಿಂದ ತುಮಕೂರು ಜಿಲ್ಲೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಅಂದರೆ ಸುಮಾರು 160 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಇದರಿಂದ ಜಿಲ್ಲೆಯ ಆರ್ಥಿಕತೆಯೂ ಪ್ರಗತಿಯಾಗುತ್ತದೆ. ಹಿಂದುಳಿದಿರುವ ತಾಲೂಕುಗಳು ಉನ್ನತ ಮಟ್ಟದಲ್ಲಿ ಬೆಳವಣಿಗೆ ಸಾಧಿಸಲಿವೆ.
ಸ್ಥಳೀಯ ಆರ್ಥಿಕತೆ ಮೇಲೆ ಪ್ರಭಾವ:
ಒಂದು ವಾಣಿಜ್ಯ ವ್ಯವಹಾರ ಶುರುವಾಯ್ತು ಎಂದರೆ, ಆ ಪ್ರದೇಶದ ಆರ್ಥಿಕ ಸ್ಥಿತಿಯೂ ಉನ್ನತೀಕರಣಗೊಳ್ಳುತ್ತದೆ. ಹಾಗೆಯೇ ಶಿರಾದಲ್ಲಿ ಸ್ಟೀಲ್ ಪ್ಲಾಂಟ್ ನಿರ್ಮಾಣವಾದರೆ ಕೈಗಾರಿಕಾ ವಲಯದ ಬೆಳವಣಿಗೆಯಿಂದ ಶಿರಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ. ಇದು ಮುಂದಿನ ದಿನಗಳಲ್ಲಿ ಹೂಡಿಕೆದಾರರ ಗಮನವನ್ನು ತನ್ನತ್ತ ಸೆಳೆದು, ಮತ್ತಷ್ಟು ಅಭಿವೃದ್ಧಿ ಸಾಧಿಸಲು ಸಹಾಯಕವಾಗುತ್ತದೆ. ಅಲ್ಲದೇ ದಿನೇ ದಿನೇ ಜಿಲ್ಲೆಯ ಆರ್ಥಿಕ ಸ್ಥಿತಿ ಪ್ರಗತಿಯಾಗುವುದಲ್ಲದೇ, ಆ ಪ್ರದೇಶದ ಜನರ ಉತ್ಪನ್ನಗಳು, ಆಸ್ತಿ-ಪಾಸ್ತಿ ಮೇಲೂ ಬೇಡಿಕೆ ಹೆಚ್ಚಾಗುತ್ತದೆ.
ಕೈಗಾರಿಕಾ ಬೆಳವಣಿಗೆ ಮತ್ತು ಆರ್ಥಿಕ ಪರಿಣಾಮ:
ಶಿರಾ ಕೈಗಾರಿಕಾ ಪ್ರದೇಶವು ಪ್ರಸ್ತುತ ಕೃಷಿ ಆಧಾರಿತ ಆರ್ಥಿಕತೆಯನ್ನು ಹೊಂದಿದ್ದು, ಈ ಹೊಸ ಹೂಡಿಕೆ ಪ್ರಾದೇಶಿಕ ಕೈಗಾರಿಕಾ ವಿಸ್ತರಣೆಗೆ ಪ್ರೇರಣೆ ನೀಡಬಹುದು. ಉಕ್ಕು ಉತ್ಪಾದನಾ ಘಟಕ ಹೊಸ ಹೂಡಿಕೆದಾರರನ್ನು ಆಕರ್ಷಿಸುವುದರೊಂದಿಗೆ ರಾಜ್ಯದ ಕೈಗಾರಿಕಾ ಪರಿಸರವನ್ನು ವಿಸ್ತರಿಸಲು ಸಹಾಯ ಮಾಡಲಿದೆ. ಈ ಘಟಕ ಕಟ್ಟಡ ನಿರ್ಮಾಣ, ಯಾಂತ್ರಿಕ, ಪೂರೈಕೆ ಸರಪಳಿ ಮತ್ತು ತಾಂತ್ರಿಕ ಉತ್ಪನ್ನಗಳ ತಯಾರಿಕಾ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಸರ್ಕಾರದ ನೀತಿಗಳು ಮತ್ತು ಪ್ರೋತ್ಸಾಹ:
ಕರ್ನಾಟಕ ಸರ್ಕಾರ "ಮೇಕ್ ಇನ್ ಇಂಡಿಯಾ" ಮತ್ತು "ಮೇಕ್ ಇನ್ ಕರ್ನಾಟಕ" ಯೋಜನೆಗಳ ಭಾಗವಾಗಿ, ಹೊಸ ಹೂಡಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅಂದರೆ ಕೈಗಾರಿಕಾ ಬೆಳವಣಿಗೆಗೆ ರಾಜ್ಯ ಸರ್ಕಾರ ಭೂಮಿ ನೀಡುವುದು, ತೆರಿಗೆ ರಿಯಾಯಿತಿ ಮತ್ತು ಮೂಲಸೌಕರ್ಯ ಬೆಂಬಲ ಸೇರಿದಂತೆ ಹಲವು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಈ ಹೊಸ ಘಟಕವು ರಾಜ್ಯದ ಕೈಗಾರಿಕಾ ಸಮತೋಲನ ಸಾಧಿಸಲು ಸಹಾಯ ಮಾಡಲಿದ್ದು, ಬೃಹತ್ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ.
ಹೊಸ ಸ್ಟೀಲ್ ಪ್ಲಾಂಟ್‌ನಿಂದಾಗುವ ಲಾಭ:
ಶಿರಾ ಕೈಗಾರಿಕಾ ಪ್ರದೇಶದಲ್ಲಿ ಹೊಸ ಸ್ಟೀಲ್ ಪ್ಲಾಂಟ್ ಶುರುವಾದರೆ, ರಾಜ್ಯದ ಕೈಗಾರಿಕಾ ವೃದ್ಧಿಗೆ ಪ್ರೇರಣೆ ಸಿಗುತ್ತದೆ. ಹಾಗೂ ಸ್ಥಳೀಯ ಉದ್ಯೋಗಾವಕಾಶಗಳ ಹೆಚ್ಚಳವಾಗಿ, ಕನ್ನಡಿಗರಿಗೂ ಉದ್ಯೋಗ ಸಿಗುತ್ತದೆ. ಶಿರಾ ಮತ್ತು ತುಮಕೂರು ಪ್ರದೇಶಗಳ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಉಕ್ಕು ಉತ್ಪನ್ನಗಳ ದಾರಿದೀಪವಾಗಿ ರಾಜ್ಯದ ಕೈಗಾರಿಕಾ ವಲಯಕ್ಕೆ ಬೆಂಬಲ ಸಿಗುತ್ತದೆ.
ಇನ್ನು ಈ ಹೊಸ ಉಕ್ಕು ಉತ್ಪಾದನ ಘಟಕ, ಕೈಗಾರಿಕಾ ಕ್ಷೇತ್ರಕ್ಕೆ ತುಮಕೂರು ಜಿಲ್ಲೆ ಇಡುತ್ತಿರುವ ದೊಡ್ಡ ಹೆಜ್ಜೆಯಾಗಿರುತ್ತದೆ. ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಹೊಸ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಸಹಾಯ ಮಾಡಲಿದ್ದು, ಇದು "ಮೇಕ್ ಇನ್ ಕರ್ನಾಟಕ" ಯೋಜನೆಯನ್ನು ಬಲಪಡಿಸಲಿದೆ.


Click it and Unblock the Notifications