ಕರ್ನಾಟಕದಲ್ಲಿ ಬೇಸಿಗೆ ಬಂತು ಎಂದರೆ ಯಾವಾಗ ಮುಗಿಯುತ್ತಪ್ಪ ಅನ್ನೋ ಹಾಗಿರುತ್ತೆ. ಬೆಂಕಿಯಂತೆ ಸುಡುವ ಬಿಸಿಲು, ತಾಪಮಾನದ ತೀವ್ರತೆ, ದೇಹದಲ್ಲಿ ಉಷ್ಣಾಂಶ ಹೆಚ್ಚಳ, ಧಗೆ ಇದೆಲ್ಲದರ ಪರಿಣಾಮವಾಗಿ ಹೀಟ್ ಸ್ಟ್ರೋಕ್ ಆಗುವುದು. ಎಲ್ಲಾ ವಿಚಾರದಲ್ಲೂ ಬೇಸಿಗೆ ಅಂದ್ರೆ ಭಯ ಆಗುತ್ತದೆ. ದೇಹದ ಉಷ್ಣಾಂಶವು ಅಪಾಯಕಾರಿ ಮಟ್ಟಕ್ಕೆ ಏರಿದಾಗ ಹೀಟ್ ಸ್ಟ್ರೋಕ್ ಸಂಭವಿಸುತ್ತದೆ. ಇಂಥಾ ಸಮಯದಲ್ಲಿ ಇದಕ್ಕೆ ತಕ್ಷಣ ಚಿಕಿತ್ಸೆಯನ್ನ ಪಡೆಯಲೇಬೇಕು.

ಇನ್ನು ಈಗಾಗಲೇ ಕರ್ನಾಟಕದಲ್ಲಿ ಬಿಸಿಗಾಳಿ ಬೀಸುತ್ತಿರುವುದರಿಂದ, ಈ ಬಗ್ಗೆ ಎಚ್ಚರಿಕೆಯಿಂದ ಇರಲೇಬೇಕಾಗಿದೆ. ಹೀಗಾಗಿ ಕರ್ನಾಟಕ ಆರೋಗ್ಯ ಇಲಾಖೆ ಶಾಖದ ಹೊಡೆತ ಮತ್ತು ಇತರ ಶಾಖ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ಸಲಹೆ ನೀಡಿದೆ. ಅಂದ್ರೆ ಸಾಮಾನ್ಯವಾಗಿ ಮಾನವರ ದೇಹದಲ್ಲಿ 36.4 ಡಿಗ್ರಿ ಸೆಲ್ಸಿಯಸ್‌ನಿಂದ 37.2 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ಇರುತ್ತದೆ. ಇದು ಹೆಚ್ಚಾಗಿ ಹೊರಾಂಗಣ ಮತ್ತು ಒಳಾಂಗಣದಲ್ಲಿ ಉಂಟಾಗುವ ತಾಪಮಾನಕ್ಕೆ ಒಡ್ಡಿಕೊಳ್ಳುವುದರಿಂದ, ಶಾಖದ ಒತ್ತಡ ಹೆಚ್ಚಾಗುತ್ತದೆ. ಈ ಮೂಲಕ ಶಾಖ ಸಂಬಂಧಿತ ಕಾಯಿಲೆಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಹೀಟ್‌ಸ್ಟ್ರೋಕ್‌ನ ಲಕ್ಷಣಗಳು:
ಇನ್ನು ಈ ಹೀಟ್‌ಸ್ಟ್ರೋಕ್‌ನ ಲಕ್ಷಣಗಳೇನು ಸಾಮಾನ್ಯವಾಗಿ ತಲೆನೋವಿನಿಂದ ಶುರುವಾಗುತ್ತದೆ. ಅಂದರೆ ತೀವ್ರವಾದ ತಲೆನೋವನ್ನು ಎದುರಿಸಿದರೆ ಅದು ಹೀಟ್‌ಸ್ಟ್ರೋಕ್ ಎಂದು ಗುರುತಿಸಬಹುದಾಗಿದೆ. ಇದಲ್ಲದೇ ಇನ್ನೂ ಹಲವು ಹೀಟ್‌ಸ್ಟ್ರೋಕ್ ಲಕ್ಷಣಗಳಿವೆ. ದೇಹದಲ್ಲಿ ಉಷ್ಣಾಂಶ 40°C (104°F)ಕ್ಕಿಂತ ಹೆಚ್ಚಾಗುವುದು, ಅತಿಯಾದ ದಾಹ ಹಾಗೂ ಮೂರ್ಛೆ ಬರುವಂತಾಗುವುದು, ಹೃದಯ ವೀಕ್ಷಣೆ ಅತಿ ವೇಗದಲ್ಲಿ ಹೆಚ್ಚಾಗುವುದು, ಆಗಾಗ ಹೆಚ್ಚಾಗಿ ಬೆವರುವುದು ಇಲ್ಲವೆಂದರೆ ಸ್ವಲ್ಪವೂ ಬೆವರದೇ ಇರುವುದು, ಶಾಖದ ದದ್ದಾಗುವುದು, ಕೈಗಳು-ಪಾದಗಳು ಮತ್ತು ಕಣಕಾಲುಗಳ ಊತ, ಅಸಾಮಾನ್ಯವಾಗಿ ಗಾಢ ಹಳದಿ ಮೂತ್ರದೊಂದಿಗೆ ಮೂತ್ರ ವಿಸರ್ಜನೆ ಕಡಿಮೆಯಾಗುವುದು.. ಇಂಥ ಸುಮಾರು ಲಕ್ಷಣಗಳಿವೆ. ಈ ಯಾವುದಾದರೂ ಒಂದು ಲಕ್ಷಣ ಎದುರಿಸುತ್ತಿದ್ದರೂ ಅದು ಹೀಟ್‌ಸ್ಟ್ರೋಕ್ ಎನ್ನಲಾಗಿದೆ.
ಹೀಟ್‌ಸ್ಟ್ರೋಕ್‌ಗೆ ಕಾರಣಗಳೇನು..?
ಇನ್ನು ಈ ಹೀಟ್‌ಸ್ಟ್ರೋಕ್‌ಗೆ ಹಲವಾರು ಕಾರಣಗಳಿವೆ. ಮಾನವ ತಾಪಮಾನ ಹೆಚ್ಚಾಗಿರುವ ಸ್ಥಳದಲ್ಲಿ ಹೆಚ್ಚು ಸಮಯ ಕಳೆದರೂ ಹೀಟ್‌ಸ್ಟ್ರೋಕ್ ಎದುರಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಇದರ ಜೊತೆಗೆ ಶರೀರಕ್ಕೆ ಅಗತ್ಯವಾಗಿರುವ ನೀರು ಕುಡಿಯದೇ ಇರುವುದು, ಲವಣಾಂಶ ಕಡಿಮೆ ಸೇವನೆ ಮಾಡುವುದು, ಹಗಲಿನ ಬಿಸಿಲಿನಲ್ಲಿ ಹೆಚ್ಚು ಕೆಲಸ ಮಾಡುವುದು, ಸೂಕ್ತವಾದ ಉಡುಪು ಧರಿಸದೆ ಬಿಸಿಲಿಗೆ ಥಳಿಸುವುದು ಇಂತಹ ಎಷ್ಟೋ ಕಾರಣಗಳಿಂದ ಹೀಟ್‌ಸ್ಟ್ರೋಕ್ ಎದುರಿಸಬೇಕಾಗುತ್ತದೆ.
ಹೀಟ್‌ಸ್ಟ್ರೋಕ್ ತಡೆಗಟ್ಟುವ ಮಾರ್ಗಗಳು:
ಈ ಹೀಟ್‌ಸ್ಟ್ರೋಕ್ ಮಾನವರ ದೇಹಕ್ಕೆ ಕೆಟ್ಟದ್ದೇ ಆಗಿದ್ದರೂ, ತಡೆಗಟ್ಟಲು ಸಾಧ್ಯವಾಗದಷ್ಟು ಕಠಿಣವಾದ ಕಾಯಿಲೆ ಏನಲ್ಲ. ಇದನ್ನು ತ್ವರಿತವಾಗಿಯೇ ತಡೆಗಟ್ಟಬಹುದು. ದೇಹಕ್ಕೆ ನೀರು ಅಗತ್ಯ. ನೀರನ್ನು ಹೆಚ್ಚಾಗಿ ಕುಡಿಯುವುದು, ನೀರಿನ ಅಂಶವಿರುವ ತಂಪು ಪಾನೀಯಗಳಾದ ORS, ಮೊಸರು ಮಜ್ಜಿಗೆ, ನಿಂಬೆ ಹಣ್ಣಿನ ಶರಬತ್ ಸೇವಿಸುವುದು, ನೆರಳಿನಲ್ಲಿ ವಿಶ್ರಾಂತಿ ಪಡೆಯುವುದು, ಬಿಸಿಲಿನ ಸಮಯದಲ್ಲಿ ಹೊರಗಡೆ ಹೋಗುವುದನ್ನು ತಪ್ಪಿಸುವುದು, ಸಡಿಲವಾದ ಕಾಟನ್ ಬಟ್ಟೆಗಳನ್ನು ಧರಿಸುವುದು, ಅದರಲ್ಲೂ ಕಪ್ಪು ಬಟ್ಟೆಗಳ ಧರಿಸುವಿಕೆಗೆ ಸ್ವಲ್ಪ ದಿನಗಳ ಕಾಲ ಕಡಿವಾಣ ಹಾಕುವುದು..ಹೀಗೆ ಮಾನವರ ದೈನಂದಿನ ಬದುಕಿನಲ್ಲೇ ಬದಲಾವಣೆ ಮಾಡಿಕೊಂಡು ಹೀಟ್‌ಸ್ಟ್ರೋಕ್‌ನ ತಡೆಯಬಹುದು. ಇದು ತುಂಬಾ ಅಪಾಯಕಾರಿಯಾಗಿದ್ದು ಇದನ್ನು ಮಾನವರೇ ತಡೆಗಟ್ಟಬೇಕು. ಇದು ಮಿತಿ ಮೀರಿದರೆ ವೈದ್ಯಕೀಯ ಚಿಕಿತ್ಸೆಯೇ ಅಗತ್ಯ.
ಎಚ್ಚರಿಕೆ:
ಪ್ರಮುಖವಾಗಿ ವಾಹನ ನಿಲ್ಲಿಸಿದ ಸ್ಥಳಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಲೇಬಾರದು. ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಲೇಬೇಕು. ಏಕೆಂದರೆ ತಾಪಮಾನದಲ್ಲಿ ನಿಂತು ಬೆಂಡಾಗುವ ವಾಹನಗಳು ಕೆಲವೊಮ್ಮೆ, ಇಂಜಿನ್ ಬಿಸಿಯಾಗಿ ಬ್ಲಾಸ್ಟ್ ಆಗುವ ಸಾಧ್ಯತೆಯೂ ಇರುತ್ತದೆ. ಇಂತಹ ಸಮಯದಲ್ಲಿ ಮಕ್ಕಳನ್ನು ಬಿಡದೇ ಇರುವುದು ಉತ್ತಮ.
ಇನ್ನು ಮಾನವರು ಹೊರಾಂಗಣ ಚಟುವಟಿಕೆಗಳಿಗೆ ನಿಯಂತ್ರಣ ಹಾಕುವುದು ಇನ್ನೂ ಉತ್ತಮ. ಅಷ್ಟೂ ಸಾಧ್ಯವಾಗದಿದ್ದರೆ ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗೆ ಹೊರಾಂಗಣ ಚಟುವಟಿಕೆಗಳನ್ನು ಪೂರ್ಣಗೊಳಿಸಿದರೆ ಉತ್ತಮ. ಅಥವಾ ಸಂಜೆ ನಾಲ್ಕು ಗಂಟೆಯ ನಂತರ ಹೊರಗಡೆಯ ಚಟುವಟಿಕೆಗಳನ್ನೂ ಮಾಡಿಕೊಳ್ಳಬಹುದು. ಆದರೆ ಮಧ್ಯಾಹ್ನದ ಉರಿ ಬಿಸಿಲಿನಿಂದ ಸ್ವಲ್ಪ ದೂರವೇ ಇರಬೇಕು. ತಂಪಾದ ವಾತಾವರಣದಿಂದ ಬಿಸಿ ವಾತಾವರಣಕ್ಕೆ ಬರುವ ಜನರು ತಮ್ಮ ದೇಹವು ಶಾಖಕ್ಕೆ ಒಗ್ಗಿಕೊಳ್ಳಲು ಒಂದು ವಾರದ ಸಮಯವನ್ನು ನೀಡಬೇಕು.
ಇನ್ನು ಕರ್ನಾಟಕದ ಕೆಲವು ಭಾಗಗಳಲ್ಲಿ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗಲಿದೆ. ಹೀಗಾಗಿ ಹೀಟ್‌ವೇವ್ ಕೂಡ ಹೆಚ್ಚಾಗಲಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ ಹೊರಡಿಸಿದ ಬೇಸಿಗೆಯ ಹವಾಮಾನ ಮುನ್ಸೂಚನೆಯ ಪ್ರಕಾರ, ಕರ್ನಾಟಕದ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಇರಲಿದೆ ಎಂದು ಮುನ್ಸೂಚನೆ ಹೊರಬಿದ್ದಿದೆ.
ಇತ್ತ ಬೆಂಗಳೂರು ಮತ್ತು ಮಲೆನಾಡು ಪ್ರದೇಶ ಸೇರಿ ದಕ್ಷಿಣ ಒಳನಾಡಿನಲ್ಲಿರುವ ಹೆಚ್ಚಿನ ಪ್ರದೇಶಗಳಲ್ಲಿ, ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎನ್ನಲಾಗಿದೆ. ಅನೇಕ ಭಾಗಗಳಲ್ಲಿ ಎರಡರಿಂದ 14 ದಿನಗಳವರೆಗೆ ಬಿಸಿಗಾಳಿ ಬೀಸುವ ನಿರೀಕ್ಷೆಯಿದ್ದು, ಉತ್ತರ ಒಳನಾಡಿನ ಒಣ ಜಿಲ್ಲೆಗಳಲ್ಲಿ ಇದರ ಪರಿಣಾಮಗಳು ಹೆಚ್ಚಾಗುತ್ತವೆ. ಹಾಗೆಯೇ ಮಾರ್ಚ್‌ನಲ್ಲಿ ಹಲವು ಭಾಗಗಳಲ್ಲಿ ಉಷ್ಣಗಾಳಿ ಆರಂಭವಾಗುವ ನಿರೀಕ್ಷೆಯಿದೆ. ಎರಡರಿಂದ ಐದು ದಿನಗಳ ಕಾಲ ಅಂತಹ ಭಾಗಗಳಲ್ಲಿ ಉಷ್ಣಗಾಳಿ ಬೀಸುವ ಸಾಧ್ಯತೆ ಇದೆ.


Click it and Unblock the Notifications