ರಾಜ್ಯದ ಹಲವು ಭಾಗಗಳಲ್ಲಿ ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನರು ಬಿಸಿಲಿನಿಂದ ತತ್ತರಿಸಿದ್ದಾರೆ. ಆದರೆ ಈ ನಡುವೆ ಜನತೆಗೆ ಸ್ವಲ್ಪ ನೆಮ್ಮದಿ ನೀಡುವಂತಹ ಸುದ್ದಿ ಲಭ್ಯವಾಗಿದೆ. ಭಾರತೀಯ ಹವಾಮಾನ ಇಲಾಖೆ ತಿಳಿಸಿರುವಂತೆ, ಮಾರ್ಚ್ 15ರಿಂದ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಕೆಲವು ಭಾಗಗಳಲ್ಲಿ ತಾಪಮಾನ ಸ್ವಲ್ಪ ಮಟ್ಟಿಗೆ ಇಳಿಕೆಯಾಗುವ ನಿರೀಕ್ಷೆ ಇದೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಇನ್ನೂ ಹೆಚ್ಚಾಗಿದೆ. ಕಲಬುರಗಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 37ರಿಂದ 40 ಡಿಗ್ರಿ ಸೆಲ್ಸಿಯಸ್ ನಡುವೆಯೇ ದಾಖಲಾಗುತ್ತಿದೆ. ಇತ್ತೀಚಿನ ಹವಾಮಾನ ಮಾಹಿತಿಯ ಪ್ರಕಾರ ಕಲಬುರಗಿಯಲ್ಲಿ ಸುಮಾರು 39 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಈ ಭಾಗಗಳಲ್ಲಿ ಇನ್ನೂ ಕೆಲವು ದಿನಗಳ ಕಾಲ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಆದ್ದರಿಂದ ಮಧ್ಯಾಹ್ನ ಸಮಯದಲ್ಲಿ ಅನಿವಾರ್ಯವಲ್ಲದಿದ್ದರೆ ಹೊರಗೆ ಹೋಗಬಾರದು ಎಂದು ತಜ್ಞರು ಜನರಿಗೆ ಸಲಹೆ ನೀಡಿದ್ದಾರೆ.
ಇನ್ನೊಂದೆಡೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹವಾಮಾನದಲ್ಲಿ ಸ್ವಲ್ಪ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಮುದ್ರದಿಂದ ತೇವಾಂಶಯುಕ್ತ ಗಾಳಿ ಬೀಸುತ್ತಿರುವುದರಿಂದ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಬಹುದು.
ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ ತಾಪಮಾನ ಸುಮಾರು 33ರಿಂದ 34 ಡಿಗ್ರಿ ಸೆಲ್ಸಿಯಸ್ ಇರಬಹುದು. ಕನಿಷ್ಠ ತಾಪಮಾನ ಸುಮಾರು 19ರಿಂದ 20 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ನಗರದಲ್ಲಿ ವಾಹನ ಸಂಚಾರ ಮತ್ತು ಕಾಂಕ್ರೀಟ್ ಕಟ್ಟಡಗಳ ಪರಿಣಾಮವಾಗಿ ಸೆಕೆಯ ಅನುಭವ ಹೆಚ್ಚು ಕಾಣಿಸಬಹುದು. ಆದರೆ ಮಾರ್ಚ್ 16ರ ನಂತರ ಬೆಂಗಳೂರು ಸೇರಿದಂತೆ ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆಲವೆಡೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಮಳೆಯ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ರೈತರು ತಮ್ಮ ಕಟಾವು ಮಾಡಿದ ಬೆಳೆಗಳು ಹಾಗೂ ಒಣಗಲು ಹಾಕಿರುವ ಕಾಫಿ, ಅಡಿಕೆ ಮತ್ತು ಧಾನ್ಯಗಳನ್ನು ಸುರಕ್ಷಿತ ಸ್ಥಳಕ್ಕೆ ಹಾಕಿಕೊಳ್ಳುವುದು ಉತ್ತಮ. ಅದೇ ವೇಳೆ ಉತ್ತರ ಕರ್ನಾಟಕದಲ್ಲಿ ತೀವ್ರ ಬಿಸಿಲು ಇರುವುದರಿಂದ ಜಾನುವಾರುಗಳಿಗೆ ಸಾಕಷ್ಟು ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ. ಸಾರ್ವಜನಿಕರು ಹೆಚ್ಚಾಗಿ ನೀರು, ಮಜ್ಜಿಗೆ ಮತ್ತು ಎಳನೀರು ಸೇವಿಸುವ ಮೂಲಕ ದೇಹವನ್ನು ತಂಪಾಗಿಟ್ಟುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.


Click it and Unblock the Notifications