ಬೆಂಗಳೂರು: ಗೂಗಲ್ ಇಂಡಿಯಾಗೆ ಇದೊಂದು ಶಾಕಿಂಗ್ ನ್ಯೂಸ್ ಅನ್ನಬಹುದು. ಅದೇನೆಂದರೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ, ಜಾರಿ ನಿರ್ದೇಶನಾಲಯ ದಂಡವನ್ನು ಬೃಹತ್ ವಿಧಿಸಿತ್ತು. ಇದೀಗ ಕರ್ನಾಟಕ ಹೈಕೋರ್ಟ್ ಗೂಗಲ್‌ಗೆ ಒಂದು ಮಹತ್ವದ ಆದೇಶವನ್ನು ನೀಡಿದೆ. ಅದೇನೆಂದರೆ ಗೂಗಲ್ ಇಂಡಿಯಾ ಮತ್ತು ಅದರ ಮೂವರು ಹಿರಿಯ ಅಧಿಕಾರಿಗಳಿಗೆ ವಿಧಿಸಿದ್ದ ದಂಡದ ಅರ್ಧ ಮೊತ್ತವನ್ನು ಬ್ಯಾಂಕ್ ಗ್ಯಾರಂಟಿಯಾಗಿ ಠೇವಣಿ ಇಡುವಂತೆ ಕರ್ನಾಟಕ ಹೈಕೋರ್ಟ್ ಇದೀಗ ನಿರ್ದೇಶನ ನೀಡಿದೆ. ಹೈಕೋರ್ಟ್ ನೀಡಿರುವ ಈ ತೀರ್ಪು ಈಗ ಸಾರ್ವಜನಿಕರವಾಗಿದ್ದು, ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ED ವಿಧಿಸಿದ ದಂಡಗಳ ವಿವರ:
ED ಅಧಿಕಾರಿಗಳು ಗೂಗಲ್ ಇಂಡಿಯಾಕ್ಕೆ ₹5 ಕೋಟಿ ಮತ್ತು ಅದರ ಮೂವರು ಪ್ರಮುಖ ಅಧಿಕಾರಿಗಳಿಗೆ ಒಟ್ಟಾರೆ ₹25 ಲಕ್ಷ ದಂಡ ವಿಧಿಸಿದ್ದರು. ಈ ಮೂವರು ಅಧಿಕಾರಿಗಳು ಹರಿ ರಾಜು ಮಹಾದೇವು , ಲಾಯ್ಡ್ ಹಾರ್ಟ್ಲಿ ಮಾರ್ಟಿನ್ ಮತ್ತು ಕೆನ್ ವಾಕರ್ ಎಂದು ಗುರುತಿಸಲಾಗಿದೆ. ಇವರಿಗೆ ವಿಧಿಸಿರುವ ದಂಡವನ್ನು ಅರ್ಧದಷ್ಟು ಬ್ಯಾಂಕ್ ಠೇವಣಿಯಾಗಿ ಇಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ಹೈಕೋರ್ಟ್ ವಿಭಾಗೀಯ ಪೀಠದ ನಿರ್ಧಾರ:
ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ ರಾವ್ ಮತ್ತು ಎಸ್. ರಾಚಯ್ಯ ನೇತೃತ್ವದ ವಿಭಾಗೀಯ ಪೀಠ, ದೆಹಲಿ ಫೆಮಾ ಮೇಲ್ಮನವಿ ನ್ಯಾಯಮಂಡಳಿಯ 2019ರ ಜನವರಿಯ ತಾತ್ಕಾಲಿಕ ನಿರ್ಧಾರವನ್ನು ರದ್ದುಗೊಳಿಸಿದೆ. ಹೈಕೋರ್ಟ್ ತೀರ್ಪಿನಲ್ಲಿ, ನ್ಯಾಯಮಂಡಳಿಯಲ್ಲಿ ಮೇಲ್ಮನವಿಗಳ ಅಂತಿಮ ತೀರ್ಪು ಬರುವವರೆಗೆ, ಗೂಗಲ್ ಇಂಡಿಯಾ ಮತ್ತು ಸಂಬಂಧಿತ ಅಧಿಕಾರಿಗಳು ಬ್ಯಾಂಕ್ ಗ್ಯಾರಂಟಿಗಳನ್ನು ಜೀವಂತವಾಗಿರಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಹಾಗೆಯೇ, ಈ ಗ್ಯಾರಂಟಿಗಳ ಪಾವತಿ ಫಲಿತಾಂಶ ನ್ಯಾಯಮಂಡಳಿಯ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
FEMA ಉಲ್ಲಂಘನೆ ಆರೋಪಗಳ ಹಿನ್ನೆಲೆ:
ED ಈ ಪ್ರಕರಣದಲ್ಲಿ ಗೂಗಲ್ ಇಂಡಿಯಾ ಮತ್ತು ಅದರ ಅಧಿಕಾರಿಗಳು, ₹363.79 ಕೋಟಿ ಮತ್ತು ₹1.08 ಕೋಟಿ ಮೌಲ್ಯದ ಎರಡು ವಿದೇಶಿ ವಹಿವಾಟುಗಳಲ್ಲಿ FEMA ಸೆಕ್ಷನ್ 6(3)(d) ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದೆ. ಈ ವ್ಯವಹಾರಗಳಲ್ಲಿ ಗೂಗಲ್ ಇಂಡಿಯಾ, ಗೂಗಲ್ ಐರ್ಲೆಂಡ್ ಮತ್ತು ಗೂಗಲ್ ಯುಎಸ್ ನಡುವೆ ಆದ ಹಣದ ವರ್ಗಾವಣೆಗಳು ಸೇರಿವೆ.
ಮೊದಲನೆಯ ವ್ಯವಹಾರದಲ್ಲಿ, 'ಆಡ್ ವರ್ಡ್ಸ್ ಪ್ರೋಗ್ರಾಂ' ಅಡಿಯಲ್ಲಿ ಗೂಗಲ್ ಐರ್ಲೆಂಡ್, ಗೂಗಲ್ ಇಂಡಿಯಾಗೆ ವಿತರಣಾ ಹಕ್ಕು ನೀಡಿದ್ದು, ಭಾರತದಲ್ಲಿನ ಜಾಹೀರಾತುದಾರರಿಗೆ ಆನ್‌ಲೈನ್ ಜಾಹೀರಾತು ಸ್ಥಳ ನೀಡಲು ಅವಕಾಶ ಮಾಡಿಕೊಟ್ಟಿತ್ತು. ಇದರ ಬದಲಾವಣೆಯಲ್ಲಿ ಗೂಗಲ್ ಇಂಡಿಯಾ, ಗೂಗಲ್ ಐರ್ಲೆಂಡ್‌ಗೆ ಶುಲ್ಕ ಪಾವತಿಸಬೇಕಾಗಿತ್ತು. ಎರಡನೇ ವ್ಯವಹಾರದಲ್ಲಿ, ಗೂಗಲ್ ಇಂಡಿಯಾ ತನ್ನ ಪೋಷಕ ಸಂಸ್ಥೆ ಗೂಗಲ್ ಯುಎಸ್ ನೊಂದಿಗೆ ಉಪಕರಣಗಳ ಖರೀದಿಯಲ್ಲಿ ತೊಡಗಿಸಿತ್ತು.
ED ಅಡಿಯಲ್ಲಿ ECB ವ್ಯಾಖ್ಯಾನ ವಿವಾದ:
ED ಆರೋಪಗಳ ಪ್ರಕಾರ, ಗೂಗಲ್ ಐರ್ಲೆಂಡ್‌ಗೆ ಪಾವತಿಸಲಾದ ವಿತರಣಾ ಶುಲ್ಕವು ಬಾಹ್ಯ ವಾಣಿಜ್ಯ ಸಾಲ (ECB) ಎಂದು ಪರಿಗಣಿಸಲಾಗಿದೆ. ಆದರೆ ಗೂಗಲ್ ಇಂಡಿಯಾ ಈ ಅಂಶವನ್ನು ಪ್ರಶ್ನಿಸಿದೆ. ಈ ವ್ಯವಹಾರಗಳಲ್ಲಿ ಯಾವುದೇ ಡ್ರಾಡೌನ್ ಅಥವಾ ಮರುಪಾವತಿ ವೇಳಾಪಟ್ಟಿ ಇರುವ ಸಾಲ ಒಪ್ಪಂದಗಳಿಲ್ಲ ಮತ್ತು ಸ್ಪಷ್ಟ ವ್ಯಾಖ್ಯಾನಗಳು ಇಲ್ಲ ಎಂದು ಕಂಪನಿ ನ್ಯಾಯಾಲಯದ ಮುಂದೆ ವಾದಿಸಿದೆ.
ED VS ಗೂಗಲ್:
ED ತನ್ನ ವಾದದಲ್ಲಿ, ಗೂಗಲ್ ಐರ್ಲೆಂಡ್‌ಗೆ ಪಾವತಿಸಬೇಕಾದ ₹363 ಕೋಟಿ ರೂ. 2014ರ ಮೇವರೆಗೆ ನಾಲ್ಕು ವರ್ಷಗಳಿಂದ ಬಾಕಿ ಇದ್ದವು ಎಂದು ಹೇಳಿದೆ. ಹಾಗೆಯೇ, ಗೂಗಲ್ ಯುಎಸ್‌ನಿಂದ ಖರೀದಿಸಿದ ಉಪಕರಣಗಳಿಗೆ ಪಾವತಿಸಬೇಕಾದ ₹1 ಕೋಟಿ ರೂ. 2014ರ ಜನವರಿವರೆಗೆ ಏಳು ವರ್ಷಗಳಿಂದ ಪಾವತಿಯಾಗಿರಲಿಲ್ಲ ಎಂಬುದು ಇಡಿಯ ಮತ್ತೊಂದು ಪ್ರಮುಖ ಅಂಕಿ-ಅಂಶ.
ಈ ವಹಿವಾಟುಗಳನ್ನು RBI ಯ ನಿಯಮಾವಳಿಗಳ ಪ್ರಕಾರ ವಾಣಿಜ್ಯ ಸಾಲಗಳೆಂದು ಪರಿಗಣಿಸಲಾಗಿತ್ತು. ಆದ್ದರಿಂದ ಈ ವ್ಯವಹಾರಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಪೂರ್ವಾನುಮತಿ ಅಗತ್ಯವಿತ್ತು ಎಂದು ಇಡಿ ಅಭಿಪ್ರಾಯಪಟ್ಟಿದೆ. ಇದಕ್ಕೆ ಪ್ರತಿಯಾಗಿ, ಗೂಗಲ್ ಇಂಡಿಯಾ, RBI 2014ರ ಜುಲೈ 1ರಂದು ಹೊರಡಿಸಿದ್ದ ಸುತ್ತೋಲೆಯನ್ನು ಪಾಲಿಸಲಾಗಿದೆ ಎಂಬುದನ್ನು ನ್ಯಾಯಾಲಯದ ಮುಂದೆ ಮಂಡಿಸಿದೆ.
2019ರ ಜನವರಿ 11ರಂದು ಫೆಮಾ ಮೇಲ್ಮನವಿ ನ್ಯಾಯಮಂಡಳಿ, ಗೂಗಲ್ ಇಂಡಿಯಾ ಸಲ್ಲಿಸಿದ್ದ ಮೇಲ್ಮನವಿಯಲ್ಲಿ, ದಂಡಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ತಾತ್ಕಾಲಿಕ ತೀರ್ಪಿನಲ್ಲಿ, ಈ ಮೇಲ್ಮನವಿಯ ಯಶಸ್ಸಿನ ಸಾಧ್ಯತೆಗಳು ಹೆಚ್ಚು ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿತ್ತು. ಈ ತೀರ್ಪಿನ ವಿರುದ್ಧ ಇಡಿ ಮೇಲ್ಮನವಿ ಸಲ್ಲಿಸಿದ್ದು, ಇದೀಗ ಕರ್ನಾಟಕ ಹೈಕೋರ್ಟ್ ಅದನ್ನು ಪರಿಗಣಿಸಿ ತಾತ್ಕಾಲಿಕ ಆದೇಶವನ್ನು ಬದ್ಲಾಯಿಸಿದೆ. ಇನ್ನು ಈ ತೀರ್ಪಿಗೆ ಸಂಬಂಧಿಸಿದಂತೆ ಗೂಗಲ್ ಇಂಡಿಯಾ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ.


Click it and Unblock the Notifications