ಕರ್ನಾಟಕ ಹೈಕೋರ್ಟ್ ಒಂದು ಗುಡ್‌ನ್ಯೂಸ್ ನೀಡಿದೆ. ಅದೇನೆಂದರೆ ಸೇವೆಯಿಂದ ವಜಾಗೊಂಡ ಉದ್ಯೋಗಿಯೂ ಕೂಡ, ವಿಶೇಷ ರಜೆಗಳ ನಗದೀಕರಣಕ್ಕೆ ಅರ್ಹತೆ ಹೊಂದಿರುತ್ತಾರೆ ಎಂದು, ಹೈಕೋರ್ಟ್ ತಿಳಿಸಿದೆ. ಅಂದರೆ ಕೆಲಸದಿಂದ ವಜಾಗೊಂಡ ಉದ್ಯೋಗಿಯೂ ಕೂಡ, ವಿಶೇಷ ರಜೆಗಳನ್ನು ಬಳಸಿಕೊಂಡು ಆ ರಜೆಯ ಸಂಬಳ ಪಡೆಯಲು ಅರ್ಹ ಎಂಬುದಾಗಿದೆ. ವಿಶೇಷ ರಜೆಗಳು ವಜಾಗೊಂಡಿರುವ ಉದ್ಯೋಗಿಗೂ ಅನ್ವಯವಾಗಲಿದ್ದು ಎಲ್ಲಾ ಉದ್ಯೋಗಿಗಳಂತೆ, ಆ ರಜೆಯ ಸಂಬಳವು ಸಿಗುತ್ತದೆ. ಈ ತೀರ್ಪು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಿಂದ ಹೊರ ಬಿದ್ದಿದೆ.

ಇನ್ನು ಈ ವಿಚಾರವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿಯಲ್ಲಿರುವ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮಾಜಿ ಸಹಾಯಕ ವ್ಯವಸ್ಥಾಪಕರಾದ ಜಿ. ಲಿಂಗನಗೌಡ ಎಂಬುವರು ಬ್ಯಾಂಕ್‌ನ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ.
ಇನ್ನು ಅರ್ಜಿದಾರ ಜಿ.ಲಿಂಗನಗೌಡ ಅವರು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ, ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗ 2012ರಲ್ಲಿ, ಅವರ ವಿರುದ್ಧ ದುಷ್ಕೃತ್ಯದ ಆರೋಪ ಕೇಳಿಬಂತು. ಕೊನೆಗೆ ಬ್ಯಾಂಕ್ ಆಡಳಿತ ಮಂಡಳಿ ಶಿಸ್ತು ಕ್ರಮಗಳನ್ನು ಜರುಗಿಸಿತು. ವಿಚಾರಣೆಯೂ ನಡೆಸಿದ ಬಳಿಕ 2014ರ ಡಿ.19ರಿಂದ ಅವರನ್ನು ಕೆಲಸದಿಂದ ತೆಗೆಯಲಾಯಿತು. ಅಂದರೆ ಅವಧಿಯವರೆಗೂ ಕೆಲಸ ಮಾಡಿದ ವಿಶೇಷ ರಜೆಗಳ ನಗದು ಹಾಗೂ ವಜಾ ನಂತರದ ಸೇವಾ ಭತ್ಯೆಗಳನ್ನು ಪಾವತಿಸುವಂತೆ ಬ್ಯಾಂಕ್‌ಗೆ ಮನವಿ ಮಾಡಿದ್ದರು. ಅವರು ನಿರ್ದಿಷ್ಠವಾಗಿ ತಮ್ಮ ಸೇವಾ ಅವಧಿಯಲ್ಲಿ ಸಂಗ್ರಹವಾದ 220 ದಿನಗಳ ರಜೆಯ ನಗದೀಕರಣವನ್ನು ಕೋರಿದ್ದರು. ಆದರೆ ಬ್ಯಾಂಕ್ ಅದನ್ನು ನಿರಾಕರಿಸಿತು.
ಅಂದರೆ ವಿಶೇಷ ರಜೆ ನಗದೀಕರಣವನ್ನು ನಿರಾಕರಿಸಿದ ಬ್ಯಾಂಕ್‌ನ ಈ ಕ್ರಮ ಅವರಿಗೆ ಅಸಮಾಧಾನಕ್ಕೆ ಒಡ್ಡಿತು. ಅಲ್ಲದೇ ಈ 2027 ಡಿಸೆಂಬರ್ ಮತ್ತು 2024ರ ಅಕ್ಟೋಬರ್ 4ರಂದು ವಿಶೇಷ ರಜೆ ನಗದೀಕರಣ ನಿರಾಕರಣೆ ಬಗ್ಗೆ ಆದೇಶ ಹೊರಡಿಸಿತು. ಹೀಗಾಗಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ನಿಯಮ, 67 ಅನ್ನು ಉಲ್ಲೇಖಿಸಿ ಸೇವೆಯಿಂದ ವಜಾಗೊಳಿಸಲಾದ ಉದ್ಯೋಗಿಗೆ ರಜೆಯ ನಗದೀಕರಣ ಪಾವತಿಸಲು ಬ್ಯಾಂಕ್ ಒಪ್ಪುತ್ತಿಲ್ಲ ಎಂದು ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈಗ ಅರ್ಜಿದಾರರ ಪರವಾಗಿ ತೀರ್ಪು ನೀಡಿದೆ. ಅದೇನೆಂದರೆ ಅರ್ಜಿದಾರರು ತಮ್ಮ ಸೇವೆಯುದ್ದಕ್ಕೂ ಸಂಗ್ರಹವಾಗಿರುವ 220 ದಿನಗಳ ವಿಶೇಷ ರಜೆಗೆ ಅರ್ಹರು ಎಂದು ಘೋಷಣೆ ಮಾಡಿದೆ.
ಕೋರ್ಟ್ ಆದೇಶವೇನು..?
ಮುಂಬೈ ಮತ್ತು ಮಧ್ಯಪ್ರದೇಶ ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ಕರ್ನಾಟಕ ಹೈಕೋರ್ಟ್, ಬ್ಯಾಂಕಿನ ನಿಯಮ 61ರಡಿಯಲ್ಲಿ ಪ್ರತಿ ಉದ್ಯೋಗಿಗೂ ವಿಶೇಷ ರಜೆಯ ಹಕ್ಕಿದೆ. ಇದರ ಜೊತೆಗೆ ನಿಯಮ 67 ಅನುಸಾರ ಉದ್ಯೋಗಿಯ ವಿಶೇಷ ರಜೆಯನ್ನು ನಗದೀಕರಿಸುವ ಹಕ್ಕನ್ನು ಕಸಿದುಕೊಳ್ಳಲು ಯಾವುದೇ ಅವಕಾಶವಿಲ್ಲ. ಈ ಎರಡೂ ನ್ಯಾಯಾಲಯಗಳ ವಿಭಾಗೀಯ ಪೀಠದ ಆದೇಶ ಒಪ್ಪಿರುವ ಹೈಕೋರ್ಟ್, ಈ ತೀರ್ಪನ್ನು ಪ್ರಕಟಿಸಲಾಗಿದೆ.
ಅಲ್ಲದೇ ಹೈಕೋರ್ಟ್ ನ್ಯಾಯಪೀಠ ಸಂವಿಧಾನದ 300 'ಎ' ವಿಧಿಯನ್ನು ಉಲ್ಲೇಖಿಸಿ, ಉದ್ಯೋಗದಾತರು ಸೇವೆಯಿಂದ ವಜಾಗೊಳಿಸಿದ ಮೇಲೂ ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ಎಲ್ಲಾ ಪ್ರಯೋಜನಗಳನ್ನೂ ನೀಡಬೇಕು. ಅದನ್ನು ಕೂಡ ಕಸಿದುಕೊಳ್ಳುವಂತಿಲ್ಲ. ಮತ್ತು ಅಂತಹ ಪ್ರಯತ್ನವನ್ನು ಅನುಮೋದಿಸಲೂ ಆಗುವುದಿಲ್ಲ. ರಜೆಯ ನಗದೀಕರಣದ ಹಕ್ಕು ಕಾನೂನಿನಡಿಯಲ್ಲಿ ಮಾತ್ರವಲ್ಲದೆ ಸಂವಿಧಾನದ ಅಡಿಯಲ್ಲಿಯೂ ಇದೆ ಎಂದು ತಿಳಿಸಿದೆ.
ಈ ಮೂಲಕ ಕರ್ನಾಟಕ ಹೈಕೋರ್ಟ್ ತನ್ನ ಉದ್ಯೋಗಿಗಳಿಗೆ, ಒಂದು ಮಹತ್ವದ ಅನುಕೂಲವಾದ ತೀರ್ಪನ್ನು ನೀಡಿದೆ. ಈ ತೀರ್ಪಿನಿಂದ ಇನ್ನುಮುಂದೆ ವಜಾಗೊಂಡ ಉದ್ಯೋಗಿಯೂ ಕೂಡ ತನ್ನ ಸೇವಾ ಅವಧಿಯಲ್ಲಿ ಸಂಗ್ರಹವಾದ, ವಿಶೇಷ ರಜೆಯ ನಗದೀಕರಣಕ್ಕೆ ಅರ್ಹನಾಗಬಹುದು ಎನ್ನಲಾಗಿದೆ. ಇದನ್ನು ಉಪಯೋಗಿಸಿಕೊಂಡು ಉದ್ಯೋಗಿಗಳು ತಮ್ಮ ಹಕ್ಕನ್ನು ಪಡೆಯಬಹುದಾಗಿದೆ. ಅಲ್ಲದೇ ಈ ರೀತಿಯ ದಬ್ಬಾಳಿಕೆ ಯಾವ ಉದ್ಯೋಗಿಯ ಮೇಲೂ ನಡೆಯುವುದಿಲ್ಲ. ಯಾವ ಉದ್ಯೋಗಿಯ ದೌರ್ಬಲ್ಯ ಮತ್ತು ಅಸಹಾಯಕತೆ ದುರ್ಬಳಕೆಯಾಗುವುದಿಲ್ಲ. ಅಂತಹ ಚಟುವಟಿಕೆಗಳನ್ನು ತಡೆಯಲೆಂದೇ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ.


Click it and Unblock the Notifications