ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಅಥವಾ ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಜುಲೈ 21ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರ ಜೊತೆ ಸಭೆ ನಡೆಸಿದ್ದು, ಕೊನೆಗೂ ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಒಪ್ಪಿಗೆ ಪಡೆದುಕೊಂಡಿದೆ. ನಂದಿನ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂಪಾಯಿಯಂತೆ ಏರಿಕೆ ಮಾಡುವ ಪ್ರಸ್ತಾಪವನ್ನು ಕೆಎಂಎಫ್ ಇಟ್ಟಿದೆ. ಆದರೆ ಸರ್ಕಾರ ಅದಕ್ಕೆ ಒಪ್ಪದೆ, 3 ರೂಪಾಯಿ ಮಾತ್ರ ಹೆಚ್ಚಿಸಲು ಅವಕಾಶ ನೀಡಿದೆ.
ಈ ಹಿಂದೆ ಹಲವಾರು ಬಾರಿ ನಂದಿನಿ ಹಾಲಿನ ದರವನ್ನು ಏರಿಕೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದ ಕೆಎಂಎಫ್ ನಿನ್ನೆ ಮುಖ್ಯಮಂತ್ರಿಯ ಮುಂದೆ ಹಾಲಿನ ದರ ಏರಿಕೆಯ ಪ್ರಸ್ತಾಪವನ್ನು ಮಾಡಿದೆ. ಚೇರ್‌ಮನ್ ಬೀಮಾ ನಾಯ್ಕ್‌ರನ್ನು ಒಳಗೊಂಡ ಕೆಎಂಎಫ್‌ನ ನಿಯೋಗವು ಸಂಜೆ ಸುಮಾರು 6 ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿಯಾಗಿದೆ.

ಇನ್ನು ನೂತನ ಹಾಲಿನ ದರವು ಆಗಸ್ಟ್ ಒಂದರಿಂದ ಜಾರಿಗೆ ಬರಲಿದೆ. ಇನ್ನು ಹಾಲು ಮಾತ್ರವಲ್ಲದೆ ನಂದಿನಿ ಮೊಸರಿನ ದರವು ಕೂಡಾ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಲಿದೆ. ಈ ನೂತನ ದರವು ಮುಂದಿನ ತಿಂಗಳಿನಿಂದ ಜಾರಿಗೆ ಬರುವ ಕಾರಣದಿಂದಾಗಿ ನಿಮ್ಮ ಬಜೆಟ್‌ನಲ್ಲಿ ಕೊಂಚ ವ್ಯತ್ಯಯ ಉಂಟಾಗುವುದು ಖಂಡಿತ. ನೀವು ಹಾಲಿನ ವೆಚ್ಚಕ್ಕಾಗಿ ಕೊಂಚ ಅಧಿಕ ಮೊತ್ತ ವ್ಯಯಿಸಬೇಕಾಗುತ್ತದೆ. ಇನ್ನು ಹಾಲಿನ ದರ ಏರಿಕೆ ಬಳಿಕ ದರ ಎಷ್ಟಿದೆ ಎಂದು ತಿಳಿಯೋಣ ಮುಂದೆ ಓದಿ....
ಪ್ರಸ್ತುತ ಹಾಲಿನ ದರ ಎಷ್ಟಿದೆ?
ಟೋನ್ಡ್ ಹಾಲು: 39
ಹೋಮೋಜಿನೈಸ್ಡ್ ಹಾಲು: 40
ಹೋಮೋಜಿನೈಸ್ಡ್ ಹಸುವಿನ ಹಾಲು: 44
ಸ್ಪೆಷಲ್ ಹಾಲು: 45
ಶುಭಂ ಹಾಲು: 45
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು: 46
ಸಮೃದ್ಧಿ ಹಾಲು: 50
ಸಂತೃಪ್ತಿ ಹಾಲು: 52
ಡಬಲ್ಡ್ ಟೋನ್ಡ್ ಹಾಲು: 38
ಮೊಸರು ಪ್ರತಿ ಕೆ.ಜಿಗೆ: 47
3 ರೂಪಾಯಿ ದರ ಏರಿಕೆ ಬಳಿಕ ಎಷ್ಟಾಗಲಿದೆ? (ಪ್ರತಿ ಲೀಟರ್)
ಟೋನ್ಡ್ ಹಾಲು: 42
ಹೋಮೋಜಿನೈಸ್ಡ್ ಹಾಲು: 43
ಹೋಮೋಜಿನೈಸ್ಡ್ ಹಸುವಿನ ಹಾಲು: 47
ಸ್ಪೆಷಲ್ ಹಾಲು: 48
ಶುಭಂ ಹಾಲು: 48
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು: 49
ಸಮೃದ್ಧಿ ಹಾಲು: 53
ಸಂತೃಪ್ತಿ ಹಾಲು: 55
ಡಬಲ್ಡ್ ಟೋನ್ಡ್ ಹಾಲು: 41
ಮೊಸರು ಪ್ರತಿ ಲೀಟರ್‌ಗೆ: 50
ಈ ಹಿಂದೆ 2 ರೂಪಾಯಿ ದರ ಏರಿಕೆ
ಈ ಹಿಂದೆ ನವೆಂಬರ್ 14ರಂದು ಪ್ರತಿ ಲೀಟರ್ ಹಾಲಿಗೆ ಹಾಗೂ ಪ್ರತಿ ಲೀಟರ್ ಮೊಸರಿನ ಬೆಲೆಯಲ್ಲಿ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಆದರೆ ನಿರ್ಧಾರ ಘೋಷಣೆ ಮಾಡಿದ ದಿನವೇ ಬೆಲೆ ಏರಿಕೆಯನ್ನು ಹಿಂಪಡೆಯಲಾಗಿತ್ತು. ಆದರೆ ನವೆಂಬರ್ 23ರಂದು ನಂದಿನಿ ಹಾಲಿನ ಹಾಗೂ ಮೊಸರಿನ ದರವನ್ನು ಕೆಎಂಎಫ್ ಹೆಚ್ಚಳ ಮಾಡಿದ. ಪ್ರತಿ ಲೀಟರ್ ಹಾಲಿಗೆ ಹಾಗೂ ಪ್ರತಿ ಲೀಟರ್ ಮೊಸರಿಗೆ ತಲಾ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈಗ ಮತ್ತೆ 3 ರೂಪಾಯಿ ಏರಿಸಲಾಗಿದೆ.
ಇನ್ನು ಹಾಲಿನ ದರ ಏರಿಕೆ ಬಳಿಕ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, "ಇಂದು ಸಭೆಯಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು ಮೂರು ರೂಪಾಯಿ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಮುಂದಿನ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಅಂತಿಮವಾಗಿ ತೀರ್ಮಾನ ಮಾಡಲಾಗುತ್ತದೆ. ಮೂರು ರೂಪಾಯಿ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸುತ್ತದೆ ಎಂಬ ವಿಶ್ವಾಸವಿದೆ. ಮೂರು ರೂಪಾಯಿ ರೈತರಿಗೆ ನೀಡಲೂ ನಿರ್ಧಾರ ಮಾಡಲಾಗಿದೆ. ಸಿಎಂ ಸಿದ್ಧರಾಮಯ್ಯ ಮತ್ತು ಎಲ್ಲ ಸಚಿವರಿಗೆ ನಾನು ರೈತರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ," ಎಂದು ತಿಳಿಸಿದ್ದಾರೆ.


Click it and Unblock the Notifications