ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ಹೆಚ್ಚಾಗುತ್ತಲೇ ಇದೆ. ಮೆಟ್ರೋ ಟಿಕೆಟ್ ದರ, ಬಸ್ ಟಿಕೆಟ್ ದರ ಹೀಗೆ ಒಂದೊಂದೇ ಅಗತ್ಯತೆಗಳ ದರ ಹೆಚ್ಚಾಗುತ್ತಿದೆ. ಇದೀಗ ಹಾಲಿನ ಸರದಿ. ಹೌದು ಕಳೆದ ವರ್ಷವೂ ಹಾಲಿನ ದರವನ್ನು ಸರ್ಕಾರ ಹೆಚ್ಚಳ ಮಾಡಿತ್ತು. ಇದೀಗ ಮತ್ತದೇ ಸಂಪ್ರದಾಯ ಮುಂದುವರಿಸಿದೆ. ಅಂದರೆ ಕರ್ಣಾಟಕ ಸರ್ಕಾರವು ಹಾಲಿನ ಬೆಲೆಯನ್ನು ಲೀಟರ್‌ಗೆ 4 ರೂ. ಹೆಚ್ಚಿಸಲು ಅನುಮೋದನೆ ನೀಡಿದೆ.

ಇನ್ನು ರಾಜ್ಯ ಸರ್ಕಾರ ಹೇಳಿರುವ ಪ್ರಕಾರ ಹಾಲಿನ ದರ ಹೆಚ್ಚಳದಿಂದ ರೈತರಿಗೆ ಲಾಭವಾಗಲಿದೆ ಎಂಬುದಾಗಿದೆ. ಅಂದರೆ ಹೆಚ್ಚುವರಿ ಹಣವನ್ನು ಪೂರ್ತಿಯಾಗಿ ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ತಿಳಿಸಿದೆ. ಈ ನಿರ್ಧಾರವನ್ನು ನಿನ್ನೆ (ಮಾರ್ಚ್ 28) ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಇನ್ನು ಈ ದರ ಏರಿಕೆಗೆ ಕಾರಣ ರೈತ ಸಂಘಟನೆಗಳ ಬೇಡಿಕೆ ಎನ್ನಲಾಗಿದೆ. ಅಂದರೆ ರೈತರು, ಹಾಲು ಉತ್ಪಾದಕರು, ಪಶುಸಂಗೋಪನಾ ಇಲಾಖೆ, ರೈತ ಸಂಘಟನೆಗಳು ಹಾಲಿನ ದರ ಏರಿಸುವಂತೆ ಒತ್ತಾಯಿಸಿದ್ದವು. ಅವರ ಬೇಡಿಕೆಯಂತೆ ಹಾಲಿನ ದರ ಪ್ರತಿ ಲೀಟರ್‍ಗೆ 4 ರೂ.ಗೆ ಹೆಚ್ಚಳ ಮಾಡಲಾಗಿದೆ. ಹಾಲಿನ ದರ ಕಡಿಮೆ ಇರುವುದರಿಂದ ನಮಗೆ ನಷ್ಟ ಎದುರಾಗುತ್ತಿದೆ ಎಂದು ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ಹೀಗಾಗಿ ಈ ಬೆಳವಣಿಗೆಯಾಗಿದೆ ಎನ್ನಲಾಗುತ್ತಿದೆ.
ಇನ್ನು ಹವಾಮಾನ ಬದಲಾವಣೆ, ಪಶು ಆಹಾರ ವೆಚ್ಚ, ಸಾಗಣೆ ಮತ್ತು ಇಂಧನ ದರಗಳ ಹೆಚ್ಚಳದಿಂದ ಹಾಲಿನ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗಿದೆ. ವೆಚ್ಚ ಹೆಚ್ಚಾಗಿ ಕಡಿಮೆ ಆದಾಯದಲ್ಲಿ ಬದುಕಲು ಆಗುವುದಿಲ್ಲ ಹೀಗಾಗಿ ಬೆಲೆ ಏರಿಕೆ ಬೇಕು ಎಂದಿದ್ದರು. ಹಾಗೆಯೇ ಸರ್ಕಾರದಿಂದ ಹಾಲು ಉತ್ಪಾದಕರಿಗೆ ಲಭ್ಯವಿರುವ ಸಬ್ಸಿಡಿಗಳು ಮತ್ತು ಬೆಂಬಲ ದರ ಸಮರ್ಥವಾಗಿಲ್ಲ ಎಂಬ ಕಾರಣಕ್ಕೂ ಬೆಲೆ ಏರಿಕೆಗೆ ಒತ್ತಾಯ ಹೆಚ್ಚಾಗಿತ್ತು.
ಇನ್ನು ಆಗಲೇ ಹೇಳಿದಂತೆ ಹಾಲಿನ ದರದಿಂದ ಬಂದ ಹೆಚ್ಚುವರಿ ಹಣವನ್ನು, ಸಂಪೂರ್ಣವಾಗಿ ಹಾಲು ಉತ್ಪಾದಕರಿಗೇ ತಲುಪುವಂತೆ ಮಾಡಲಾಗುವುದು ಎಂಬುದು ಸರ್ಕಾರದ ನಿರ್ಧಾರವಾಗಿದೆ. ಅಲ್ಲದೇ ಪ್ರಾರಂಭದಲ್ಲಿ ಅವರು ಬೆಲೆ ಏರಿಕೆಗೆ ವಿರೋಧ ವ್ಯಕ್ತಪಡಿಸಿದರೂ, ರೈತರ ಒತ್ತಾಯದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಈ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.
ಅಂದಹಾಗೆ ಹಾಲು ಉತ್ಪಾದಕ ಒಕ್ಕೂಟಗಳು ಮತ್ತು ರೈತ ಸಂಘಟನೆಗಳ ಡಿಮ್ಯಾಂಡ್ ಜಾಸ್ತಿ ಇತ್ತು. ಅಂದರೆ ಪ್ರತಿ ಲೀಟರ್‍ಗೆ 5 ರೂ. ಆದರೂ ಏರಿಸಲೇಬೇಕು ಎಂದು ಒತ್ತಾಯಿಸಿದ್ದರು. ಆದರೆ ಸರ್ಕಾರ ನಮಗೂ ಬೇಡ ನಿಮಗೂ ಬೇಡ ಎಂಬಂದತೆ 4 ರೂ. ಹೆಚ್ಚಳವನ್ನು ಅನುಮೋದಿಸಿದೆ. ಈ ಹಣವನ್ನು ಸಮಗ್ರವಾಗಿ ಹಾಲು ಉತ್ಪಾದಕರಿಗೆ ಪಾವತಿಸಲಾಗುವುದು ಎಂಬುದನ್ನು ಸರ್ಕಾರ ಖಚಿತಪಡಿಸಿದೆ. ಇದರಿಂದ ಹಾಲು ಉತ್ಪಾದಕರಿಗೆ ಈ ನಿರ್ಧಾರ ಅರ್ಥಿಕ ಭದ್ರತೆ ಒದಗಿಸಬಹುದು, ಏಕೆಂದರೆ ರೈತರು ಹಾಲಿನ ಖರೀದಿ ಬೆಲೆಯ ಹೆಚ್ಚಳದಿಂದ ಲಾಭವಾಗುವ ನಿರೀಕ್ಷೆಯಿದೆ. ಇನ್ನು ಹಾಲು ಉತ್ಪಾದಕರು ಕೂಡ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ನಿರ್ಧಾರವು ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಸಹಕಾರಿಯಾಗಲಿದ ಎಂದಿದ್ದಾರೆ.
ಆದರೆ ಜನಸಾಮಾನ್ಯರು ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದ ಕಂಗಾಲಾಗಿ ಹೋಗಿದ್ದಾರೆ. ಕಡಿಮೆ ಆದಾಯದಲ್ಲಿ ಹೆಚ್ಚಿನ ಖರ್ಚುಗಳನ್ನು ನಿಭಾಯಿಸಲು ಒದ್ದಾಡುತ್ತಿದ್ದಾರೆ. ಹೀಗಾಗಿ ಹಾಲಿನ ದರ ಏರಿಕೆ ಅವರ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಹಾಲಿನ ಉಪ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಮೊಸರು, ಪೇಡೆಗಳು ಮುಂತಾದವುಗಳ ದರವೂ ಏರಿಕೆಯಾಗಬಹುದು ಎಂಬ ಭೀತಿ ಎದುರಾಗಿದೆ.
ಇನ್ನು 2024ರ ಜೂನ್ 25ರಂದು ರಾಜ್ಯ ಸರ್ಕಾರ, ಹಾಲಿನ ಬೆಲೆಯನ್ನು 2 ರೂ. ಹೆಚ್ಚಿಸಿತ್ತು ಮತ್ತು ಪ್ರತಿ ಪ್ಯಾಕೆಟ್‌ಗೆ 50 ಮಿಲಿ ಹೆಚ್ಚುವರಿ ಹಾಲು ನೀಡಲಾಗಿತ್ತು. ಈ ನಿರ್ಧಾರವನ್ನು ಕೆಲವರು ಟೀಕಿಸಿದರೂ, ರೈತರ ಪರವಾಗಿ ಒಳ್ಳೆಯ ಹೆಜ್ಜೆ ಎಂದು ಸರ್ಕಾರ ತಿಳಿಸಿತ್ತು.
ಇನ್ನು ಮುಂದಿನ ಕೆಲವು ತಿಂಗಳಲ್ಲಿ ಹಾಲಿನ ಬೇಡಿಕೆ ಹಾಗೂ ಸರಬರಾಜು ಸ್ಥಿತಿಯ ಆಧಾರದ ಮೇಲೆ ಮತ್ತಷ್ಟು ಪರಿಷ್ಕರಣೆಗಳ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರ ರೈತರಿಗೆ ಹೆಚ್ಚುವರಿ ಸಹಾಯಧನ ಒದಗಿಸಲು ಹೊಸ ಯೋಜನೆಗಳನ್ನು ಪರಿಗಣಿಸುವ ಸಾಧ್ಯತೆ ಇದೆ.


Click it and Unblock the Notifications