ಕರ್ನಾಟಕವು ತನ್ನ ವಿಮಾನಯಾನ ಸಾಮರ್ಥ್ಯವನ್ನು ವಿಸ್ತರಿಸಲು ಮಹತ್ವದ ಹೆಜ್ಜೆ ಇಡುತ್ತಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಹೊಸ ವಿಮಾನ ನಿಲ್ದಾಣ ಯೋಜನೆಗಳು ಚುರುಕುಗೊಳ್ಳುತ್ತಿವೆ. ಹಳೆಯ ವಿಮಾನ ನಿಲ್ದಾಣಗಳಿಗೂ ಈಗ ಹೊಸ ಜೀವ ಕೊಡಲಾಗುತ್ತಿದೆ.

ಬೆಂಗಳೂರಿಗೆ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ:
ಬೆಂಗಳೂರು ಈಗಾಗಲೇ ದೇಶದ ಅತ್ಯಂತ ಜನ ತುಂಬಿರುವ ವಿಮಾನ ನಿಲ್ದಾಣಗಳಲ್ಲೊಂದಾಗಿದೆ. ಈ ಕಾರಣದಿಂದಾಗಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯ ಹೆಚ್ಚಾಗಿದೆ. ಮೂರು ಸ್ಥಳಗಳನ್ನು ಈಗಾಗಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಶಾರ್ಟ್‌ಲಿಸ್ಟ್ ಮಾಡಿದ್ದು, ಅಂತಿಮ ತೀರ್ಮಾನಕ್ಕಾಗಿ ಕೇಂದ್ರ ಸರ್ಕಾರದ ಒಪ್ಪಿಗೆ ನಿರೀಕ್ಷೆಯಲ್ಲಿದೆ.
ಈ ಸಂಬಂಧ ನವದೆಹಲಿಗೆ ಭೇಟಿ ನೀಡಿದ ರಾಜ್ಯ ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರೊಂದಿಗೆ ಸಭೆ ನಡೆಸಿ ತ್ವರಿತ ನಿರ್ಧಾರಕ್ಕೆ ಒತ್ತಾಯಿಸಿದರು.
ಹುಬ್ಬಳ್ಳಿ, ಬೆಳಗಾವಿಗೆ ವಿಮಾನ ನಿಲ್ದಾಣಗಳು:
ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳು ಈಗಾಗಲೇ ಸಾಕಷ್ಟು ಮೂಲಸೌಕರ್ಯ ಹೊಂದಿವೆ. ಇವುಗಳಲ್ಲಿ ಗಂಟೆಗೆ 2,400 ಪ್ರಯಾಣಿಕರಿಗೆ ಸೇವೆ ನೀಡುವ ಟರ್ಮಿನಲ್, ರಾತ್ರಿ ಇಳಿಯುವ ವಿಮಾನಗಳಿಗೆ ಅಗತ್ಯವಿರುವ ನವೀಕರಿತ ಲೈಟಿಂಗ್ ವ್ಯವಸ್ಥೆ, ಏರ್ ಬಸ್ A320, A321 ಮಾದರಿಯ ವಿಮಾನಗಳಿಗೆ ಸೂಕ್ತ ರನ್‌ವೇ ಸೇರಿವೆ. ಈ ಹಿನ್ನೆಲೆಗಳಲ್ಲಿ, ಈ ಎರಡೂ ನಿಲ್ದಾಣಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಿದರೆ ಉತ್ತರ ಕರ್ನಾಟಕ ಮತ್ತು ಸುತ್ತಲಿನ ಪ್ರದೇಶಗಳಿಗೆ ವಾಯು ಸಂಪರ್ಕದಲ್ಲಿ ಭಾರೀ ಬದಲಾವಣೆ ಸಾದ್ಯ.
ವಿಜಯಪುರ ವಿಮಾನ ನಿಲ್ದಾಣ:
ವಿಜಯಪುರದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ ಈಗಾಗಲೇ ಪೂರ್ಣಗೊಂಡಿದ್ದು, ಕಾರ್ಯಾಚರಣೆಗೆ ತಯಾರಾಗಿದೆ. ಆದರೆ ಪರಿಸರ ಸಚಿವಾಲಯದಿಂದ ಅಂತಿಮ ಅನುಮೋದನೆ ಸಿಕ್ಕಿಲ್ಲದ ಕಾರಣ ಸೇವೆ ಆರಂಭವಾಗಿಲ್ಲ. ಈ ಬಗ್ಗೆ ಕೂಡ ಕೇಂದ್ರ ಸರ್ಕಾರದ ಗಮನ ಸೆಳೆದಿರುವ ಸಚಿವ ಪಾಟೀಲ್, ಸಾಧ್ಯವಾದಷ್ಟು ಬೇಗ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರಯಾಣಿಕ ದಟ್ಟಣೆಯಲ್ಲೂ ವ್ಯತ್ಯಾಸ:
ಅಕ್ಟೋಬರ್ 2025ರವರೆಗೆ ಲಭ್ಯವಿರುವ ಡೇಟಾ ಪ್ರಕಾರ, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶೇ. 37.1 ರಷ್ಟು ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಈ ಏರಿಕೆಗೆ ಕಾರಣಗಳೆಂದರೆ ನಿರಂತರ ವಿಮಾನ ಸೇವೆ, ಉತ್ತಮ ಸಂಪರ್ಕ, ಪ್ರಯಾಣಿಕರಿಗೆ ಅನುಕೂಲಕರ ಸಮಯಗಳು ಎನ್ನಬಹುದು.
ಆದರೆ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಶೇ. 12 ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಸ್ಟಾರ್ ಏರ್ ಸಂಸ್ಥೆ ಸೇವಾ ನಿಲುಗೊಳಿಸಿದದು, UDAN ಯೋಜನೆಯ ಅಡಿಯಲ್ಲಿ ವಿಮಾನಗಳ ಕಡಿತ ಎನ್ನಬಹುದು.
ಹುಬ್ಬಳ್ಳಿ ವಿಮಾನ ನಿಲ್ದಾಣ:
ಸೇವೆಯ ಗುಣಮಟ್ಟ ಮತ್ತು ತಂತ್ರಜ್ಞಾನದ ಸರಿಯಾದ ಬಳಕೆ ಇದ್ದರೆ ಪ್ರಯಾಣಿಕರನ್ನು ಸೆಳೆಯುವುದು ಸುಲಭ ಎಂದು ಸಲಹಾ ಸಮಿತಿಯ ಸದಸ್ಯ ಕೌಸ್ತುಭ್ ಸಂಶಿಕರ್ ತಿಳಿಸಿದ್ದಾರೆ. ಹುಬ್ಬಳ್ಳಿ ನಿಲ್ದಾಣವು ಇದರ ಅತ್ಯುತ್ತಮ ಉದಾಹರಣೆ.
ರಾಜ್ಯವು ಮೂರು ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಯೋಜನೆ, ಹಳೆಯ ನಿಲ್ದಾಣಗಳ ಅಭಿವೃದ್ಧಿ ಹಾಗೂ ಹೊಸ ಸಂಪರ್ಕ ಮಾರ್ಗಗಳೊಂದಿಗೆ ತೀವ್ರ ವಾಯುಯಾನ ವಿಸ್ತರಣೆಯ ಹಾದಿಯಲ್ಲಿ ಇದೆ. ಈ ಬೆಳವಣಿಗೆಗಳು ಮುಂಬರುವ ತಿಂಗಳುಗಳಲ್ಲಿ ರಾಜ್ಯದ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗ ಸಾದ್ಯತೆಗಳಿಗೆ ಬಲ ನೀಡಲಿವೆ.


Click it and Unblock the Notifications