ಕರ್ನಾಟಕದ ಕೈಗಾರಿಕಾ ವಲಯಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಸೃಷ್ಟಿಯಾಗಲಿದೆ. ಈ ಕ್ಷೇತ್ರಕ್ಕೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಅವರು ಫೆಬ್ರವರಿ 24 ರಂದು ವಿವಿಧ ಕ್ಷೇತ್ರಗಳ ವಿಷನ್ ಗ್ರೂಪ್ ಸಭೆಗಳನ್ನು ನಡೆಸಿದ್ದಾರೆ. ಅಂದಹಾಗೆ ಈ ಸಭೆಯಲ್ಲಿ ಹಲವು ಪ್ರಮುಖ ತೀರ್ಮಾನಗಳನ್ನ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಒಂದು ಮಹತ್ವವಾದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಈ ಸಭೆಯಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ, ಯಂತ್ರೋಪಕರಣಗಳು, ಆಟೋ ಹಾಗೂ ಇವಿ ಮತ್ತು ಹಸಿರು ಇಂಧನ ಕ್ಷೇತ್ರಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯ, ನೀತಿ ಸಹಾಯ ಮತ್ತು ಭೂಮಿ ಲಭ್ಯತೆ ಬಗ್ಗೆ ಚರ್ಚೆ ನಡೆಯಿತು.
ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಕರ್ನಾಟಕ ಈಗಾಗಲೇ ಪ್ರಮುಖ ಸ್ಥಾನದಲ್ಲಿದೆ ಎಂದು ಸಚಿವರು ಹೇಳಿದರು. ಈ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಪರೀಕ್ಷಾ ಕೇಂದ್ರಗಳು ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು. ರಕ್ಷಣಾ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ರಾಜ್ಯವನ್ನು ಮುಂಚೂಣಿಗೆ ತರುವ ಉದ್ದೇಶದಿಂದ ದೊಡ್ಡ ಮಟ್ಟದ ಪಾರ್ಕ್ಗಳನ್ನು ಸ್ಥಾಪಿಸುವ ಯೋಜನೆ ಸರ್ಕಾರದ ಮುಂದಿದೆ. ಈ ಯೋಜನೆಗಳಿಗೆ ಬೇಕಾದ ಭೂಮಿ ಒದಗಿಸುವಲ್ಲಿ ಸರ್ಕಾರ ಸಹಕರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ವೈಮಾನಿಕ ಟ್ಯಾಕ್ಸಿ ಸೇವೆಗಳ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಯಿತು. ವಿದೇಶಗಳಲ್ಲಿ ಆರಂಭವಾಗುತ್ತಿರುವ ಈ ಸೇವೆಯನ್ನು ಕರ್ನಾಟಕದಲ್ಲೂ ಪರಿಚಯಿಸುವ ಸಾಧ್ಯತೆಗಳ ಬಗ್ಗೆ ಕೈಗಾರಿಕೋದ್ಯಮಿಗಳು ಸೂಚನೆ ನೀಡಿದರು. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸುವುದಾಗಿ ಸಚಿವರು ಹೇಳಿದರು. ರಾಜ್ಯದ ವಿವಿಧ ಭಾಗಗಳಲ್ಲಿ ರಕ್ಷಣಾ ಕಾರಿಡಾರ್ ಸ್ಥಾಪನೆ ಕುರಿತ ಪ್ರಸ್ತಾವನೆಯೂ ಕೇಂದ್ರ ಸರ್ಕಾರದ ಮುಂದಿದೆ.
ಯಂತ್ರೋಪಕರಣಗಳ ವಲಯವು ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಈ ಕ್ಷೇತ್ರದ ಬೆಳವಣಿಗೆಗಾಗಿ ತಂತ್ರಜ್ಞಾನಾಭಿವೃದ್ಧಿ ಮತ್ತು ಪರೀಕ್ಷಾ ಸೌಲಭ್ಯಗಳ ವಿಸ್ತರಣೆ ಅಗತ್ಯವಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಟ್ಟರು. ತುಮಕೂರಿನಲ್ಲಿ ಹೊಸ ಪರೀಕ್ಷಾ ಘಟಕ ಸ್ಥಾಪನೆ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ತರಬೇತಿ ಕೇಂದ್ರಗಳನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಿತು.
ಆಟೋ ಮತ್ತು ಇವಿ ವಲಯದಲ್ಲಿ ಡ್ರೈ ಪೋರ್ಟ್ಗಳ ಅಗತ್ಯವಿದೆ ಎಂದು ಸದಸ್ಯರು ಹೇಳಿದರು. ಇವಿ ವಾಹನಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದಾದ್ಯಂತ ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಇದೆ. ಧಾರವಾಡದಲ್ಲಿ ಇವಿ ಬಸ್ಗಳ ಉತ್ಪಾದನೆ ನಡೆಯುತ್ತಿರುವುದನ್ನು ಸಚಿವರು ಉಲ್ಲೇಖಿಸಿದರು. ದ್ವಿಚಕ್ರ ಇವಿ ವಾಹನಗಳಿಗೆ ಪರೀಕ್ಷಾ ಸೌಲಭ್ಯ ಒದಗಿಸುವ ಅಗತ್ಯವನ್ನೂ ಗಮನಕ್ಕೆ ತರಲಾಯಿತು.
ಹಸಿರು ಇಂಧನ ಕ್ಷೇತ್ರದಲ್ಲಿ ಬ್ಯಾಟರಿ ಆಧಾರಿತ ಇಂಧನ ಸಂಗ್ರಹಣೆಗೆ ಸ್ಪಷ್ಟ ನೀತಿ ಅಗತ್ಯವಿದೆ ಎಂದು ಕೈಗಾರಿಕೋದ್ಯಮಿಗಳು ಹೇಳಿದರು. ದತ್ತಾಂಶ ಕೇಂದ್ರಗಳ ಸ್ಥಾಪನೆಗೂ ರಾಜ್ಯದಲ್ಲಿ ಉತ್ತಮ ಅವಕಾಶಗಳಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕೈಗಾರಿಕಾ ಬೆಳವಣಿಗೆಗೆ ಬಂದ ಎಲ್ಲಾ ಸಲಹೆಗಳನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.


Click it and Unblock the Notifications