ರಾಜ್ಯದಲ್ಲಿ ವರುಣಾರ್ಭಟ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ, ಕರ್ನಾಟಕದ ಹಲವು ಭಾಗಗಳಲ್ಲಿ ಹವಾಮಾನ ಇಲಾಖೆ ಭಾರಿ ಎಚ್ಚರಿಕೆ ನೀಡಿದೆ. ಅದೇನೆಂದರೆ ಮುಂದಿನ ಐದು ದಿನಗಳವರೆಗೆ ಧಾರಾಕಾರ ಮಳೆಯ ಮುನ್ಸೂಚನೆ ನೀಡಲಾಗಿದೆ. ಅಂದರೆ ಆಗಸ್ಟ್ 24ರ ವರೆಗೂ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಜನರಿಗೆ ಹೆಚ್ಚು ಎಚ್ಚರಿಕೆಯಿಂದಿರಲು ಸಲಹೆ ನೀಡಲಾಗಿದೆ.

ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್:
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜೊತೆಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಬೆಂಗಳೂರಿನಲ್ಲಿ 3 ದಿನ ತಪ್ಪದ ಮಳೆಯಾರ್ಭಟ:
ಬೆಂಗಳೂರಿನಲ್ಲಿ ಮೂರು ದಿನಗಳವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಶಾಲೆಗಳು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಾಲೆಗಳ ಜೊತೆಗೆ ಪಿಯುಸಿ ಮತ್ತು ಪದವಿ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
ರಸ್ತೆ ಸಂಪರ್ಕ ಕಟ್:
ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮರಗಳು, ವಿದ್ಯುತ್ ಕಂಬಗಳು ಕುಸಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಬೀದರ್ ಜಿಲ್ಲೆಯ ಬುಧೇರಾ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಗಳು ನೀರಿನಲ್ಲಿ ಮುಳುಗಿವೆ. ಸೋಯಾ, ಕಬ್ಬು, ಉದ್ದು, ತೊಗರಿ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿವೆ. ರೈತರು ಪ್ರತೀ ಬಾರಿ ಮಳೆಗೆ ಇದೇ ಸ್ಥಿತಿ ನಿರ್ಮಾಣವಾಗುತ್ತಿದ್ದು, ಅಧಿಕಾರಿಗಳ ಸ್ಪಂದನೆ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಲಾಶಯ ಭರ್ತಿ:
ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಬೆಣ್ಣೆತೋರಾ ಜಲಾಶಯ ತುಂಬಿಕೊಂಡಿದೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಬಿಡಲಾಗಿದ್ದು, ನದಿತಟದ ಜಮೀನುಗಳಲ್ಲಿ ಬೆಳೆದ ಹೆಸರು, ಎಳ್ಳು ಮತ್ತು ತೊಗರಿ ಬೆಳೆಗಳು ನಷ್ಟವಾಗಿವೆ. ರೈತರು ಬೆಳೆ ನಷ್ಟ ಪರಿಶೀಲನೆಗೆ ಅಧಿಕಾರಿಗಳು ಭೇಟಿ ನೀಡದಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುಡ್ಡ ಕುಸಿತ, ರಸ್ತೆ ಸಂಪರ್ಕ ಬಂದ್:
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲೂ ಭಾರಿ ಮಳೆಯ ಅಬ್ಬರ ಮುಂದುವರೆದಿದೆ. ಸಕಲೇಶಪುರ ತಾಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆ ಇನ್ನೂ ಮುಂದುವರಿಯುತ್ತಿರುವುದರಿಂದ ಮತ್ತಷ್ಟು ಭೂಕುಸಿತ ಸಂಭವಿಸಬಹುದೆಂಬ ಆತಂಕ ಸ್ಥಳೀಯರಲ್ಲಿ ಹೆಚ್ಚಾಗಿದೆ.
ರಾಜ್ಯದ ಹಲವೆಡೆಗಳಲ್ಲಿ ನಿರಂತರ ಮಳೆಯ ಕಾರಣದಿಂದಾಗಿ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದ್ದು, ಜನರಿಗೆ ಹವಾಮಾನ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರಿದಿರುವುದರಿಂದ ಸಾಮಾನ್ಯ ಜನತೆ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯವಾಗಿದೆ. ಭಾರೀ ಮಳೆಯಿಂದಾಗಿ ಭೂಕುಸಿತ, ವಿದ್ಯುತ್ ವ್ಯತ್ಯಯ, ರಸ್ತೆ ಸಂಪರ್ಕ ಕಡಿತ, ಬೆಳೆ ನಷ್ಟ ಮುಂತಾದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಂಡು, ಸುರಕ್ಷಿತ ಸ್ಥಳಗಳಲ್ಲಿ ವಾಸಿಸಲು ಹಾಗೂ ಅನಗತ್ಯವಾಗಿ ಹೊರಗೆ ತೆರಳುವುದನ್ನು ತಪ್ಪಿಸಲು ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.


Click it and Unblock the Notifications