ಅಯ್ಯಯ್ಯೋ, ಚಳಿ.. ಚಳಿ.. ರಾಜ್ಯದಲ್ಲಿ ದಿನ ಹೋದಂತೆ ತಾಪಮಾನ ಕಮ್ಮಿಯೇ ಆಗುತ್ತಿದೆ. ಈಗಾಗಲೇ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿರುವುದರಿಂದ ಅಲ್ಲಲ್ಲಿ ಮೋಡ ಕವಿದ ವಾತಾವರಣವೂ ಇದೆ. ಆದರೆ ನಿನ್ನೆ ಎಲ್ಲೂ ಮಳೆಯಾಗಿಲ್ಲ. ಮೋಡ ಕವಿದ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಆರ್ದ್ರತೆಯ ಮಟ್ಟ ಕೂಡಾ ಶೇ.35 ರಿಂದ ಶೇ. 85 ರವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (IMD) ನೀಡಿದೆ. ಬೆಂಗಳೂರು ಸೇರಿ, ಹಲವು ಜಿಲ್ಲೆಗಳಲ್ಲಿ ತಾಪಮಾನ ಇಳಿಕೆ ಕಂಡಿದ್ದು, ವಿಪರೀತ ಚಳಿ ವಾತಾವರಣ ಕಂಡುಬಂದಿದೆ.

ಕರ್ನಾಟಕದಲ್ಲಿ (Karnataka) ಕಳೆದ ಒಂದು ವಾರ ಸ್ವಲ್ಪ ಮಟ್ಟಿಗೆ ಬಿಸಿ ವಾತಾವರಣವಿತ್ತು. ಆದ್ರೆ ಇಂದು ರಾಜ್ಯದ ಕೆಲ ಜಿಲ್ಲೆಗಳಿಗೆ ವರುಣನ ಆಗಮನವಾಗುವ ನಿರೀಕ್ಷೆಯಿದೆ. ಅಲ್ಲದೇ ವಿಪರೀತ ಚಳಿಯ ಪರಿಣಾಮ, ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಕರ್ನಾಟಕದಲ್ಲಿ ಇನ್ನೆರಡು ದಿನ ಸಣ್ಣ ಪ್ರಮಾಣದಲ್ಲಿ ಮಳೆಯಾಗಬಹುದು ಎಂದು ಹೇಳಿದೆ.
ಮೈಕೊರೆಯುವ ಚಳಿಯಲ್ಲಿ 7 ಜಿಲ್ಲೆಗಳು!
ಇನ್ನು ರಾಜ್ಯದ 7 ಜಿಲ್ಲೆಗಳಲ್ಲಿ ಇಂದು ತಾಪಮಾನ ಮತ್ತಷ್ಟು ಇಳಿಕೆ ಕಾಣಲಿದೆ. ಆ ಹಿನ್ನೆಲೆ ದಾವಣಗೆರೆ, ಹಾವೇರಿ, ಬಾಗಲಕೋಟೆ, ಗದಗ, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಶೀತದಲೆಯ ಪ್ರಮಾಣ ಹೆಚ್ಚಾಗಲಿದೆ. ಅದೇ ಕಾರಣದಿಂದ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಮಳೆಯಾಗುವ ಜಿಲ್ಲೆಗಳು:
ದಕ್ಷಿಣ ಒಳನಾಡಿನ ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮಂಡ್ಯ, ರಾಮನಗರ ಸೇರಿ ಕೆಲವು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆ ಇದೆ. ಇನ್ನು ಬಳ್ಳಾರಿ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ, ಶಿವಮೊಗ್ಗ, ವಿಜಯನಗರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಹೇಗಿರಲಿದೆ ಹವಾಮಾನ?
ಇನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ಗದಗ, ಕಲಬುರಗಿ, ಬಳ್ಳಾರಿ, ಯಾದಗಿರಿ, ಬೆಳಗಾವಿ, ವಿಜಯಪುರ, ಹಾವೇರಿ, ಧಾರವಾಡ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲೂ ಒಣ ಹವೆ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ.
ಬೆಂಗಳೂರಿನ ಹವಾಮಾನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ದಿನೇ ದಿನೇ ಚಳಿ ಹೆಚ್ಚಾಗುತ್ತಲೇ ಇದೆ. ಚಳಿಯ ತೀವ್ರತೆಯಿಂದಾಗಿ, ರಸ್ತೆಗಳೆಲ್ಲಾ ಮಂಜಿನಿಂದ ಆವೃತವಾಗಿದೆ. ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಕಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜನರಿಗೆ ಸಲಹೆ:
ಚಳಿ ಹೆಚ್ಚಾಗುತ್ತಿರುವ ಹಿನ್ನೆಲೆ, ಜನರೂ ಎಚ್ಚರಿಕೆಯಿಂದ ಇರಬೇಕು. ಬೆಚ್ಚಗಿನ ಆಹಾರ ಧರಿಸುವುದು, ಆರೋಗ್ಯಕರ ಆಹಾರ, ಬಿಸಿ ಬಿಸಿ ನೀರು, ಹೀಗೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೆ ಉತ್ತಮ.


Click it and Unblock the Notifications