ಕರ್ನಾಟಕದಲ್ಲಿ ಎಂಥದ್ದೇ ಸಂಚಾರ ನಿಯಮ ಜಾರಿಗೆ ತಂದರೂ ಉಲ್ಲಂಘನೆಯಾಗುವುದು ಮಾತ್ರ ತಪ್ಪಲ್ಲ. ಎಷ್ಟೇ ಕಠಿಣವಾಗಿದ್ರೂ ವಾಹನ ಸವಾರರು ಡೋಂಟ್ ಕೇರ್ ಎಂಬಂತೆ ವರ್ತಿಸುತ್ತಾರೆ. ಅವರ ವರ್ತನೆಗೆ ಕಡಿವಾಣ ಹಾಕಲೆಂದೇ ಸಂಚಾರ ನಿಯಂತ್ರಣಕ್ಕಾಗಿ ಅಧಿಕಾರಿಗಳಿರುತ್ತಾರೆ. ಆದರೆ ಈಗ ವರದಿಯೊಂದರ ಪ್ರಕಾರ ವಾಹನ ಸವಾರರ ಲೈಸೆನ್ಸ್ ರದ್ದಾಗಿರುವ ಸಂಖ್ಯೆ ನೋಡಿದರೆ, ಕರ್ನಾಟಕದಲ್ಲಿ ಸಂಚಾರ ನಿಯಂತ್ರಣ ಇನ್ನೆಷ್ಟು ಪರಿಣಾಮಕಾರಿಯಾಗಿದೆ ಎಂಬ ಪ್ರಶ್ನೆ ಮೂಡುತ್ತದೆ. ಅಂದರೆ ಕರ್ನಾಟಕದಲ್ಲಾಗುವ ಸಂಚಾರ ನಿಯಮ ಉಲ್ಲಂಘನೆಗೆ ಹೋಲಿಸಿದರೆ, ಸಾವಿರಾರು ಡ್ರೈವಿಂಗ್ ಲೈಸೆನ್ಸ್‌ಗಳು ರದ್ದಾಗಬೇಕಿತ್ತು. ಆದರೆ ಇಲ್ಲಿ ರದ್ದಾಗಿರುವುದು ಐದು ವರ್ಷದಲ್ಲಿ ಬೆರಳೆಣಿಕೆಷ್ಟು ಲೈಸೆನ್ಸ್‌ಗಳು ಮಾತ್ರ.

ಹೌದು, ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂದ, ಕೇವಲ 16 ಡ್ರೈವಿಂಗ್ ಲೈಸೆನ್ಸ್‌ನ ರದ್ದು ಮಾಡಲಾಗಿದೆ. ಇದನ್ನು ಗಮನಿಸಿದರೆ ಸಂಚಾರ ನಿಯಂತ್ರಣ ಇನ್ನೆಷ್ಟು ಪರಿಣಾಮಕಾರಿಯಾಗಿದೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಏಕೆಂದರೆ ಅದೇ ಸಮಯದಲ್ಲಿ ಬೆಂಗಳೂರು ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಒಟ್ಟು 7,395 ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸಿದೆ. ಹೀಗಿರುವಾಗ ಇಡೀ ರಾಜ್ಯದಲ್ಲಿ ರದ್ದಾದ ಲೈಸೆನ್ಸ್‌ಗಳ ಸಂಖ್ಯೆ ಹೇಗೆ 16 ಆಗುತ್ತದೆ ಎಂಬ ಪ್ರಶ್ನಗೆ ಗುರಿಯಾಗಿದೆ.
ಸರ್ಕಾರದ ವರದಿ ಏನು ಹೇಳುತ್ತದೆ..?
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಕರ್ನಾಟಕದಲ್ಲಿ ಚಾಲನಾ ಪರವಾನಗಿಗಳ ವಿರುದ್ಧ ಕ್ರಮ ಕೈಗೊಳ್ಳುವುದೇ ಕಡಿಮೆ ಎನ್ನಲಾಗಿದೆ. ಅಂದರೆ 2020 ರಿಂದ 2024 ರ ಅವಧಿಯಲ್ಲಿ, ಭಾರತದಾದ್ಯಂತ ಒಟ್ಟು 1,525 ಚಾಲನಾ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ, ಆದರೆ ಕರ್ನಾಟಕದಲ್ಲಿ ಕೇವಲ 16 ಮಾತ್ರ ರದ್ದುಗೊಂಡಿವೆ ಎಂಬುದನ್ನು ಒತ್ತಿ ಹೇಳುತ್ತಿದೆ.
ಇನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದೇನೆಂದರೆ, ಕರ್ನಾಟಕದಲ್ಲಿ ಮಾನ್ಯವಾದ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಿದ ಕಾರಣದಿಂದ 2 ಪರವಾನಗಿಗಳನ್ನು ರದ್ದುಒಗೊಳಿಸಲಾಗಿದೆ. ಅದು ಬಿಟ್ಟರೆ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ 14 ಪರವಾನಗಿಗಳನ್ನು ಮಾತ್ರ ರದ್ದುಗೊಳಿಸಲಾಗಿದೆ ಎಂಬುದಾಗಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ, ರಾಜ್ಯದಲ್ಲಿ ಪ್ರತಿವರ್ಷ ಸಾವಿರಾರು ಸಂಚಾರ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದರೂ, ಪರವಾನಗಿ ರದ್ದತಿ ಪ್ರಮಾಣ ಕಡಿಮೆಯಾಗಿರುವುದರಿಂದ ನಿಯಮ ಜಾರಿಯ ದುರ್ಬಲತೆ ತೋರಿಸುತ್ತದೆ.
ಇನ್ನು ಬೆಂಗಳೂರಿನಲ್ಲಿ ಏನಿಲ್ಲವೆಂದರೂ ವರ್ಷಕ್ಕೆ ಸಾವಿರಾರು ಮಂದಿ ಕುಡಿದು ವಾಹನ ಚಲಿಸುತ್ತಿರುವ ಪ್ರಕರಣ ದಾಖಲಾಗುತ್ತಿವೆ. 2024ರಲ್ಲೇ 23,620 ಕುಡಿದು ವಾಹನ ಚಲಾಯಿಸುವ ಪ್ರಕರಣಗಳು ದಾಖಲಾಗಿವೆ, ಆದರೆ ಪರವಾನಗಿ ರದ್ದುಗೊಂಡವರ ಸಂಖ್ಯೆ ಕೇವಲ ಒಂದೇ ಅಂಕೆಯಲ್ಲಿ ಉಳಿದಿದೆ. ಇದು ಸರ್ಕಾರದ ಆಡಳಿತವನ್ನು ಎತ್ತಿ ತೋರಿಸುತ್ತಿದೆ. ಹಾಗೂ ಸರ್ಕಾರದ ಜಾರಿ ಕ್ರಮಗಳಲ್ಲಿನ ಅಂತರವನ್ನು ತೋರಿಸುತ್ತದೆ.
ಇದಕ್ಕೆ ಕಾರಣ ಏನು..?
ಸಂಚಾರ ಪರವಾನಗಿ ಸಂಖ್ಯೆ ಕೇವಲ 16ಕ್ಕೆ ಉಳಿಯಲು, ಒಂದಷ್ಟು ಮಹತ್ವದ ಕಾರಣಗಳಿವೆ ಎಂದು ಸಂಚಾರ ತಜ್ಞರು ತಿಳಿಸಿದ್ದಾರೆ. ಕೆಲವರು ಅಪೀಲ್ ಸಲ್ಲಿಸಿ ತಮ್ಮ ಪರವಾನಗಿಗಳನ್ನು ಉಳಿಸಿಕೊಳ್ಳುತ್ತಾರೆ. ಕೆಲವು ಚಾಲಕರು ಪೊಲೀಸರ ಒತ್ತಡದಿಂದ ತಪ್ಪಿಸಿಕೊಳ್ಳಲು ಕಾನೂನು ದೋಷಗಳನ್ನು ಬಳಸುತ್ತಾರೆ. ಹಾಗೆಯೇ ಬೆಂಗಳೂರು ಸಂಚಾರ ಪೊಲೀಸರು RTO ಗೆ 7,395 ಪರವಾನಗಿಗಳನ್ನು ಅಮಾನತುಗೊಳಿಸಲು ಶಿಫಾರಸು ಮಾಡಿದ್ದು, ಆದರೆ RTO ಕಚೇರಿಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆಯಿಂದ ಪ್ರಕರಣಗಳನ್ನು ವೇಗವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಮಹತ್ವದ ಕಾಎಣವಾಗಿದೆ.
ಇನ್ನು ಈ ಸಂಖ್ಯೆ ಕರ್ನಾಟಕದಲ್ಲಿ ಕಾನೂನು ಜಾರಿಯಲ್ಲಿನ ಅಸಮಾಧಾನಕಾರಿ ಪರಿಸ್ಥಿತಿಯನ್ನು ಗಂಭೀರವಾಗಿ ಎತ್ತಿ ತೋರಿಸುತ್ತದೆ. ಹೀಗಾಗಿ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದು ಅತ್ಯಗತ್ಯ. ಹೀಗಾಗಿ ಸಂಚಾರ ತಜ್ಞರು ಮತ್ತು ಸಾರ್ವಜನಿಕರು ಸಂಚಾರ ನಿಯಂತ್ರಣ ಕ್ರಮಗಳನ್ನು ಬಲಪಡಿಸಲು ಸರ್ಕಾರದ ಜವಾಬ್ದಾರಿಯನ್ನು ಒತ್ತಿಹೇಳುತ್ತಿದ್ದಾರೆ. ಸಮರ್ಪಕ ನಿಯಂತ್ರಣ ಇಲ್ಲದಿದ್ದರೆ, ಸಂಚಾರ ಅಪಘಾತಗಳು ಮತ್ತು ಅಜಾಗರೂಕ ಚಾಲನೆ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ಚಾಲನಾ ಪರವಾನಗಿ ರದ್ದತಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಮಾತ್ರ ಜನರು ಸಂಚಾರ ನಿಯಮಗಳನ್ನು ಪಾಲಿಸಲು ಪ್ರೇರಿತರಾಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications