ಬೇಸಿಗೆಯಲ್ಲೇ ತುಂಗಭದ್ರಾ ಜಲಾಶಯದಲ್ಲಿ ನೀರು ವ್ಯರ್ಥವಾಗುತ್ತಿದೆ. ಅಂದರೆ ತುಂಗಭದ್ರಾ ಡ್ಯಾಂನಲ್ಲಿ ಹೂಳು ತುಂಬಿ ಸುಮಾರು 27 ಟಿಎಂಸಿ ಅಡಿ ನೀರು ವ್ಯರ್ಥವಾಗುತ್ತಿದೆ. ಸದ್ಯ ಈ ಬಗ್ಗೆ ಸರ್ಕಾರ ಗಮನಹರಿಸಿದೆ. ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸೂಕ್ತ ಕ್ರಮ ಕೂಡ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು, ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಜಲಸಂಪತ್ತಿನ ಸಚಿವರಾದ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಅಲ್ಲದೇ ಸಮಾನಾಂತರ ಜಲಾಶಯ ಹಾಗೂ ಪಂಪಿಂಗ್ ಮೂಲಕ ನೀರನ್ನು ಬಳಸಿಕೊಳ್ಳುವ ಪರ್ಯಾಯ ಯೋಜನೆಗಳನ್ನು ಸರ್ಕಾರ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ.

ಇನ್ನು ಈ ಕುರಿತ ಚರ್ಚೆಯೊಂದು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಭುಗಿಲೆದ್ದಿತ್ತು. ಎಂಎಲ್‌ಸಿ ಬಸನಗೌಡ ಬಾದರ್ಲಿ ಈ ಕುರಿತು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸಮತೋಲಿತ ಅಣೆಕಟ್ಟು ನಿರ್ಮಾಣದ ಬದಲಿಗೆ ಅಧಿಕಾರಿಗಳು ನೀಡಿದ ಪರ್ಯಾಯ ಯೋಜನೆಗಳನ್ನು ಸರ್ಕಾರ ಪರಿಗಣಿಸುತ್ತಿರುವುದಾಗಿ ತಿಳಿಸಿದರು. ಅಲ್ಲದೇ ಕರ್ನಾಟಕದ ಪಾಲಿಗೆ ಬರುವ ನೀರನ್ನು ಪಂಪ್ ಮಾಡುವ ಮೂಲಕ ಅದನ್ನು ಸಮರ್ಪಕವಾಗಿ ಬಳಸುತ್ತೇವೆ ಎಂದಿದ್ದಾರೆ.
ಇನ್ನು ಈ ನೀರಿನ ಪ್ರಯೋಜನ ಯಾವ್ಯಾವ ರಾಜ್ಯಗಳಿಗೆ ಇದೆ ಎಂಬುದನ್ನೂ ಡಿಸಿಎಂ ಡಿಕೆಶಿ ತಿಳಿಸಿದರು. ಅಂದರೆ ಈ ನೀರಿನ ಪ್ರಯೋಜನ ಮೂರು ರಾಜ್ಯಗಳಿಗೆ ತಲುಪಿಸುವ ಉದ್ದೇಶವಿದೆ. ಅದರಲ್ಲಿ ನೀರಿನ ಶೇ. 65 ಅನ್ನು ನಾವು ಬಳಸಿಕೊಳ್ಳುತ್ತೇವೆ ಮತ್ತು ಉಳಿದ ಶೇ. 35 ಅನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಮೀಸಲಾಗಿಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದರು. ಜೊತೆಗೆ ಸರ್ಕಾರ ಈ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಇನ್ನು ಪೆನ್ನಾರ್ ನದಿಯಲ್ಲಿ ಉಲ್ಬಣವಾಗಿರುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಬೇಕಿದೆ. ಅದಕ್ಕಾಗಿ ಕೇಂದ್ರ ಜಲಶಕ್ತಿ ಸಚಿವರು ಸಭೆ ಕೂಡ ಕರೆದಿದ್ದಾರೆ. ಆ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜೊತೆಗೆ ಸಭೆಯಲ್ಲಿ ನವಲಿ ಅಣೆಕಟ್ಟು ನಿರ್ಮಾಣದ ಬಗ್ಗೆ ಹಾಗೂ ಪರ್ಯಾಯ ಪರಿಹಾರಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ. ಇಷ್ಟೇ ಅಲ್ಲದೇ ಈ ಸಂಬಂಧ, ಉಪಮುಖ್ಯಮಂತ್ರಿ ಶಿವಕುಮಾರ್ ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಯನ್ನು ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಈ ಯೋಜನೆಗೆ ಸಂಬಂಧಿಸಿದಂತೆ ಡಿಸಿಎಂ ಡಿಕೆಶಿ ಪತ್ರವನ್ನು ಕೂಡ ರವಾನಿಸಿದ್ದಾರೆ. ಉದಯಪುರದಲ್ಲಿ ನಡೆದ ಜಲಸಂಪತ್ತಿ ಕುರಿತ ಸಮ್ಮೇಳನದಲ್ಲಿ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜಲಸಂಪತ್ತಿ ಸಚಿವರೊಂದಿಗೆ ಈ ಯೋಜನೆಯ ಕುರಿತು ಚರ್ಚೆ ನಡೆಸಲಾಗಿದೆ. ಹಾಗೆಯೇ ಈ ಯೋಜನೆ ಬಗ್ಗೆ ಆಂಧ್ರಪ್ರದೇಶದ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೂ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಅವರ ಅನುಮತಿ ಸಿಕ್ಕ ಕೂಡಲೇ ನವಲಿ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು. ಬಳಿಕ ಈ ಯೋಜನೆ ಕುರಿತಂತೆ ತುಂಗಭದ್ರಾ ಮಂಡಳಿಗೆ ವರದಿ ಸಲ್ಲಿಸಲಾಗುವುದು ಎಂದರು. ಅಲ್ಲದೇ ಈ ಹೊತ್ತಿಗೇ, ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ, ಸುಮಾರು 25-30 ಟಿಎಂಸಿ ಅಡಿ ನೀರು ವ್ಯರ್ಥವಾಗುತ್ತಿದೆ. ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಸುಮಾರು 15,000 ಎಕರೆ ಭೂಮಿ ಅಗತ್ಯವಿದೆ. ಈ ಸಂಬಂಧ ತಾಂತ್ರಿಕ ವರದಿ ಹಾಗೂ ಡಿಪಿಆರ್ ಈಗಾಗಲೇ ಸಿದ್ಧಪಡಿಸಲಾಗಿದ್ದು, ಇದನ್ನು ತುಂಗಭದ್ರಾ ಮಂಡಳಿ ಹಾಗೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ವರ್ಷಕ್ಕೆ 25-30 ಟಿಎಂಸಿ ಅಡಿ ನೀರು ವ್ಯರ್ಥವಾಗುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಲು, ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕಾಗಿ 15,000 ಎಕರೆ ಭೂಮಿ ಅಗತ್ಯವಿದೆ. ಈ ಸಂಬಂಧ ತಾಂತ್ರಿಕ ವರದಿ ಹಾಗೂ ಡಿಪಿಆರ್ ಈಗಾಗಲೇ ಸಿದ್ಧಗೊಂಡಿದ್ದು, ತುಂಗಭದ್ರಾ ಮಂಡಳಿ ಹಾಗೂ ಆಂಧ್ರಪ್ರದೇಶ, ತೆಲಂಗಾಣ ಸರ್ಕಾರಗಳಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.


Click it and Unblock the Notifications