ಕರ್ನಾಟಕದಲ್ಲಿ ವನ್ಯಜೀವಿ ಸಫಾರಿ (Karnataka Safari) ಬಹಳ ವರ್ಷಗಳಿಂದಲೂ ಜಾರಿಯಲ್ಲಿದೆ. ರಾಜ್ಯದಲ್ಲಿ ಹಲವು ರಾಷ್ಟ್ರೀಯ ಉದ್ಯಾನವನಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಇನ್ನು ಈ ಉದ್ಯಾನವನಗಳಲ್ಲಿ ಹುಲಿ, ಆನೆ, ಚಿರತೆ ಹೀಗೆ ಹಲವು ಜಾತಿಯ ಪ್ರಾಣಿ-ಪಕ್ಷಿಗಳನ್ನು ನೋಡುವ ಅವಕಾಶವಿರುತ್ತದೆ. ಆದ್ರೆ ಇತ್ತೀಚೆಗೆ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಸಫಾರಿಯನ್ನು ನಿಲ್ಲಿಸಲಾಗಿತ್ತು. ಆದ್ರೆ ಇದೀಗ ಸಫಾರಿ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.

ಕರ್ನಾಟಕದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ಸೇವೆಗಳು ಇಂದಿನಿಂದ (ಫೆ.19) ಮತ್ತೆ ಆರಂಭವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕಳೆದ ನವೆಂಬರ್ 7, 2025 ರಿಂದ ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷದಿಂದಾಗಿ, ಅದರಲ್ಲೂ ವಿಶೇಷವಾಗಿ ಹುಲಿ ದಾಳಿಗಳ ಪ್ರಕರಣ ಹೆಚ್ಚಾಗಿದ್ದರಿಂದ ಸಫಾರಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಈ ಪರಿಣಾಮ ಸುಮಾರು 100 ದಿನಗಳಿಗಿಂತಲೂ ಹೆಚ್ಚು ಕಾಲ ಸಫಾರಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಭಾರೀ ಹೊಡೆತ ಬಿದ್ದಿತ್ತು. ಇದೀಗ ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ಮತ್ತೆ ಸಫಾರಿ ಆರಂಭಿಸಲು ನಿರ್ಧರಿಸಲಾಗಿದೆ.
ವಿಶೇಷ ಸಮಿತಿಯಿಂದ ನಿರ್ಧಾರ!
ಸರ್ಕಾರ ಕೂಡಾ ಸಫಾರಿ ನಿಷೇಧದ ಬೆನ್ನಲ್ಲೇ, ಅದಕ್ಕಾಗಿ ವಿಶೇಷ ತಜ್ಞರ ತಾಂತ್ರಿಕ ಸಮಿತಿಯನ್ನು ರಚಿಸಿ ಅಧ್ಯಯನ ನಡೆಸಿತ್ತು. ಇದೀಗ ಈ ಸಮಿತಿಯ ಮಧ್ಯಂತರ ವರದಿಯ ಆಧಾರದ ಮೇಲೆ ಸುರಕ್ಷತೆ, ಸ್ಥಳೀಯ ಆರ್ಥಿಕ ಬೆಳವಣಿಗೆಗಳನ್ನೆಲ್ಲಾ ಪರಿಗಣಿಸಿ, ಇದೀಗ ಮತ್ತೆ ಹಂತ ಹಂತವಾಗಿ ಸಫಾರಿ ಪುನರಾರಂಭ ಮಾಡಲು ನಿರ್ಧರಿಸಲಾಗಿದೆ.
ಪ್ರಥಮ ಹಂತದ ನಿಯಮಗಳು:
- ಸದ್ಯ ಸಫಾರಿಗೆ ಶೇ.50% ರಷ್ಟು ಮಾತ್ರ ಅವಕಾಶ ನೀಡಲಾಗಿದೆ.
- ದಿನಕ್ಕೆ ಗರಿಷ್ಠ 50 ಸಫಾರಿ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
- ಸದ್ಯ ಬಸ್ ಸಫಾರಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಜೀಪ್ ಸಫಾದಿಗೆ ಇನ್ನೂ ಪ್ರಾರಂಭವಾಗಿಲ್ಲ.
- ಸಫಾರಿ ಅವಧಿಯಲ್ಲೂ ಇಳಿಕೆ ಮಾಡಲಾಗಿದೆ.
ಸಫಾರಿ ಅವಧಿಯಲ್ಲೂ ಇಳಿಕೆ
ಈ ಮೊದಲು ಸಫಾರಿಗೆ 8 ಗಂಟೆಗಳ ಕಾಲ ಸಫಾರಿ ಮಾಡಲು ಅವಕಾಶ ನೀಡಲಾಗಿತ್ತು. ಆದ್ರೆ ಇದೀಗ ಈ ಅವಧಿಯನ್ನು ಇಳಿಸಲಾಗಿದ್ದು, ಬಂಡೀಪುರದಲ್ಲಿ 5 ಗಂಟೆಗೆ ಇಳಿಸಲಾಗಿದ್ದು, ಸುಂಕದಕಟ್ಟೆಯಲ್ಲಿ 6 ಗಂಟೆ ಮತ್ತು ನಾಗರಹೊಳೆಯಲ್ಲಿ 4 ಗಂಟೆಗಳ ಕಾಲ ಮಾತ್ರ ಸಫಾರಿ ನಡೆಸಲು ಪ್ರಥಮ ಹಂತದಲ್ಲಿ ಅವಕಾಶ ನೀಡಲಾಗಿದೆ. ಈ ಮಧ್ಯೆ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಕ್ಯಾಂಪ್ ಫೈರ್‌ಗಳನ್ನು ನಿರ್ಬಂಧಿಸಲಾಗಿದೆ.
ಪ್ರಸ್ತುತ ಆರಂಭಿಸಿರುವ ಸಫಾರಿ ಕಾರ್ಯ, ಪ್ರಾಯೋಗಿಕ ಹಂತವಾಗಿದ್ದು, ಸಂಪೂರ್ಣ ವರದಿ ಬಂದ ನಂತರ ಎಲ್ಲಾ ಕಡೆಗಳಲ್ಲು ಸಂಪೂರ್ಣವಾಗಿ ಸಫಾರಿ ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಸರ್ಕಾರದ ಈ ನಿರ್ಧಾರದಿಂದ ಪ್ರವಾಸಿಗರು ಸಂತಸಗೊಂಡಿದ್ದು, ಸ್ಥಳೀಯ ಪ್ರವಾಸೋದ್ಯಮ, ರೆಸಾರ್ಟ್ ಮತ್ತು ಸ್ಥಳೀಯರ ಜೀವನೋಪಾಯಕ್ಕೂ ಆಧಾರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications