ಸ್ಟಾರ್ಟಪ್ ಜಗತ್ತಿನಲ್ಲಿ ಹೊಸ ಹೆಜ್ಜೆ ಇಡಲು ಕರ್ನಾಟಕ ಒಂದು ಬೃಹತ್ ನಿರ್ಧಾರ ತೆಗೆದುಕೊಂಡಿದೆ. ಅದೇನಂದ್ರೆ ನವದೆಹಲಿಯಲ್ಲಿ ನಡೆದಂತಹ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ, ಅಂತರರಾಷ್ಟ್ರೀಯ ಸಹಕಾರಕ್ಕೆ ಮುಂದಾಗಿರೋದು ನಿಜಕ್ಕೂ ದೊಡ್ಡ ಮಟ್ಟದ ಖುಷಿ ಸುದ್ದಿಯೇ ಎನ್ನಬಹುದು. ಅಂದರೆ ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಫ್ರಾನ್ಸ್ ಮತ್ತು ಪೋಲೆಂಡ್ ದೇಶಗಳ ಪಾಲುದಾರರೊಂದಿಗೆ ಎರಡು ಆಶಯ ಪತ್ರಗಳಿಗೆ ಸಹಿ ಹಾಕಿದೆ.

ಹೌದು, ಈ ಕ್ರಮವು ಕರ್ನಾಟಕದ ಸ್ಟಾರ್ಟ್ಅಪ್ ಮತ್ತು ಆವಿಷ್ಕಾರ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ಹೆಜ್ಜೆಯಾಗಿದೆ.
ಯೂರೋಪಿನ ಪ್ರಸಿದ್ಧ ಸ್ಟಾರ್ಟ್ಅಪ್ ಮತ್ತು ತಂತ್ರಜ್ಞಾನ ಕಾರ್ಯಕ್ರಮವಾದ ವಿವಾ ಟೆಕ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಮೂಲಕ ಬೆಂಗಳೂರು ಟೆಕ್ ಶೃಂಗಸಭೆಯ ನೇತೃತ್ವದಲ್ಲಿ ಯುರೋಪ್-ಭಾರತ ಸ್ಟಾರ್ಟ್ಅಪ್ ಹಾಗೂ ಆವಿಷ್ಕಾರ ಕಾರಿಡಾರ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಕೃತಕ ಬುದ್ಧಿಮತ್ತೆ, ಡೀಪ್ಟೆಕ್, ಗೇಮಿಂಗ್ ಮತ್ತು ಇಮ್ಮರ್ಸಿವ್ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ಸಹಯೋಗ ಹೆಚ್ಚಿಸುವ ಉದ್ದೇಶ ಹೊಂದಿದೆ. ಇದರಿಂದ ರಾಜ್ಯದ ಸ್ಟಾರ್ಟ್ಅಪ್ಗಳಿಗೆ ಯುರೋಪಿನ ಮಾರುಕಟ್ಟೆ ಪ್ರವೇಶಿಸಲು ಹೊಸ ಅವಕಾಶಗಳು ದೊರೆಯಲಿವೆ.
ಇದರ ಜೊತೆಗೆ ಪೋಲೆಂಡ್ನ ಕ್ಯಾಟೋವೈಸ್ ವಾಣಿಜ್ಯ ಮಂಡಳಿ ಹಾಗೂ ಕ್ಯಾಟೋ ಹಬ್ ಸಂಸ್ಥೆಯೊಂದಿಗೆ ಸಹ ಆಶಯ ಪತ್ರಕ್ಕೆ ಸಹಿ ಮಾಡಲಾಗಿದೆ. ಈ ಒಪ್ಪಂದವು ಎರಡೂ ಪ್ರದೇಶಗಳ ಸ್ಟಾರ್ಟ್ಅಪ್ಗಳ ನಡುವೆ ವಿನಿಮಯ ಮತ್ತು ಸಹಕಾರವನ್ನು ಉತ್ತೇಜಿಸಲು ಸಹಾಯ ಮಾಡಲಿದೆ. ಕಳೆದ ವರ್ಷ ನಡೆದ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಆರಂಭವಾದ ಚರ್ಚೆಗಳ ಮುಂದುವರಿದ ಭಾಗವಾಗಿ ಈ ಒಪ್ಪಂದಕ್ಕೆ ಅಧಿಕೃತ ರೂಪ ನೀಡಲಾಗಿದೆ.
ಎರಡೂ ಒಪ್ಪಂದಗಳಡಿಯಲ್ಲಿ ಜಂಟಿ ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ. ಈ ಕಾರ್ಯಪಡೆ ಪೈಲಟ್ ಯೋಜನೆಗಳನ್ನು ಗುರುತಿಸಿ, ಅವುಗಳನ್ನು ಜಾರಿಗೆ ತರಲು ಮಾರ್ಗಸೂಚಿ ಸಿದ್ಧಪಡಿಸಲಿದೆ. ಜೊತೆಗೆ, ಕರ್ನಾಟಕದ ಸ್ಟಾರ್ಟ್ಅಪ್ಗಳಿಗೆ ಮಾರುಕಟ್ಟೆ ಪ್ರವೇಶ, ಹೂಡಿಕೆದಾರರ ಸಂಪರ್ಕ ಮತ್ತು ಉದ್ಯಮ ಪಾಲುದಾರಿಕೆಗಳನ್ನು ವಿಸ್ತರಿಸುವ ದಿಸೆಯಲ್ಲಿ ಸಹಕಾರ ಒದಗಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ, ಕ್ಲೈಮೇಟ್ ಟೆಕ್, ಡೀಪ್ಟೆಕ್, ಗೇಮಿಂಗ್ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಸಚಿವರು ಈ ಸಹಕಾರವನ್ನು ರಾಜ್ಯದ ಸ್ಟಾರ್ಟ್ಅಪ್ ಪರಿಸರಕ್ಕೆ ದೊಡ್ಡ ಅವಕಾಶ ಎಂದು ತಿಳಿಸಿದ್ದಾರೆ. ಜಾಗತಿಕ ಸಂಪರ್ಕಗಳು ಹೆಚ್ಚಿದಂತೆ ಸ್ಥಳೀಯ ಸಂಸ್ಥೆಗಳಿಗೆ ಬೆಳವಣಿಗೆಗೆ ಹೊಸ ದಾರಿಗಳು ತೆರೆದಿಡುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇಲಾಖೆಯ ಅಧಿಕಾರಿಗಳ ಪ್ರಕಾರ, ಕರ್ನಾಟಕವು ಮುಂದಿನ ತಲೆಮಾರಿನ ತಂತ್ರಜ್ಞಾನಗಳಲ್ಲಿ ಬಲವಾದ ಮತ್ತು ಫಲಿತಾಂಶ ನೀಡುವ ಅಂತರರಾಷ್ಟ್ರೀಯ ಸಂಬಂಧಗಳನ್ನು ನಿರ್ಮಿಸಲು ಬದ್ಧವಾಗಿದೆ.
ಈ ಹೊಸ ಒಪ್ಪಂದಗಳು ಕರ್ನಾಟಕವನ್ನು ಜಾಗತಿಕ ಆವಿಷ್ಕಾರ ನಕ್ಷೆಯಲ್ಲಿ ಮತ್ತಷ್ಟು ಬಲವಾಗಿ ಸ್ಥಾಪಿಸುವ ನಿರೀಕ್ಷೆ ಮೂಡಿಸಿದೆ. ರಾಜ್ಯದ ಯುವ ಉದ್ಯಮಿಗಳಿಗೆ ಇದರಿಂದ ವಿಶ್ವ ಮಟ್ಟದ ಅವಕಾಶಗಳು ಲಭ್ಯವಾಗಲಿದ್ದು, ಸ್ಟಾರ್ಟ್ಅಪ್ ಕ್ಷೇತ್ರದ ಬೆಳವಣಿಗೆಗೆ ಇದು ಹೊಸ ಚೈತನ್ಯ ನೀಡಲಿದೆ.


Click it and Unblock the Notifications