ಟೋಲ್ ಸಂಗ್ರಹಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡ ಪ್ರಮುಖ ಕ್ರಮಗಳಲ್ಲಿ ಫಾಸ್ಟ್ಯಾಗ್ (FASTag) ಕೂಡಾ ಒಂದು. ಟೋಲ್ ಪ್ಲಾಜಾದಲ್ಲಿ ಈ ಸ್ಟಿಕ್ಕರ್ ಮೂಲಕ ಸ್ವಯಂ ಚಾಲಿತವಾಗಿ ಟೋಲ್ ಶುಲ್ಕ ಕಟ್ (Toll Fees) ಆಗುತ್ತದೆ. ಆದ್ದರಿಂದ ದೇಶದ ಎಲ್ಲಾ ನಾಲ್ಕು ಚಕ್ರದ ವಾಹನಗಳಲ್ಲಿ ಫಾಸ್ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದೆ. ಇದೀಗ ಫಾಸ್ಟ್ಯಾಗ್ ದಂಡ ಸಂಗ್ರಹದ ಬಗ್ಗೆ ಅಧಿಕೃತ ಮಾಹಿತಿ ವರದಿಯಾಗಿದ್ದು, ಭಾರೀ ಅಚ್ಚರಿ ಮೂಡಿಸಿದೆ.

ಅಗ್ರಸ್ಥಾನದಲ್ಲಿ ಕರ್ನಾಟಕ!
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಇದೀಗ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2024-25ರ ಆರ್ಥಿಕ ವರ್ಷದಲ್ಲಿ ಮಾನ್ಯ ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಚಾಲಕರಿಗೆ ದಂಡ ವಿಧಿಸುವುದರಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ.
ಸಂಗ್ರಹವಾದ ಟೋಲ್ ದಂಡ ಎಷ್ಟು?
ಕರ್ನಾಟಕ ರಾಜ್ಯವು ಟೋಲ್ ಪ್ಲಾಜಾಗಳಲ್ಲಿ ಮಾನ್ಯವಲ್ಲದ, ಹಾನಿಗೊಳಗಾದ ಅಥವಾ ಕಾರ್ಯನಿರ್ವಹಿಸದ ಫಾಸ್ಟ್‌ಟ್ಯಾಗ್‌ಗಳನ್ನು ಬಳಸಿದ ಚಾಲಕರಿಂದ ಒಟ್ಟು ₹129.91 ಕೋಟಿ ದಂಡ ಸಂಗ್ರಹಿಸಿದೆ ಎಂದು ವರದಿಯಾಗಿದೆ. ಈ ದೊಡ್ಡ ಮೊತ್ತದಲ್ಲಿ ದಂಡ ಸಂಗ್ರಹಿಸುವ ಮೂಲಕ, ಕರ್ನಾಟಕವು ರಾಷ್ಟ್ರೀಯ ಪಟ್ಟಿಯಲ್ಲಿ ಉಳಿದ ರಾಜ್ಯಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ.
ಪ್ರಸ್ತುತ ಟೋಲ್ ನಿಯಮಗಳ ಪ್ರಕಾರ, 2021ರ ಫೆಬ್ರವರಿ 15ರ ಮಧ್ಯರಾತ್ರಿಯಿಂದ ದೇಶಾದ್ಯಂತ ಎಲ್ಲಾ ಟೋಲ್ ಲೇನ್‌ಗಳು ಫಾಸ್ಟ್ಯಾಗ್‌ಗಳಿಂದ ದಂಡ ಸಂಗ್ರಹಿಸಲು ಮುಂದಾಗಿದೆ. ಆದರೆ ಮಾನ್ಯ ಮತ್ತು ಕಾರ್ಯನಿರ್ವಹಿಸುವ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಪ್ಲಾಜಾಗೆ ಯಾವುದೇ ವಾಹನ ಪ್ರವೇಶಿಸಿದ್ರೆ, ಟೋಲ್ ಶುಲ್ಕದ ದುಪ್ಪಟ್ಟು ದಂಡ ಪಾವತಿಸಬೇಕು.
ದಂಡ ಮತ್ತು ಅನಾವಶ್ಯಕ ವಿಳಂಬಗಳನ್ನು ತಪ್ಪಿಸಲು, ಹೆದ್ದಾರಿ ಬಳಕೆದಾರರು ತಮ್ಮ ಫಾಸ್ಟ್‌ಟ್ಯಾಗ್ ಸಕ್ರಿಯವಾಗಿದೆ, ವಾಹನದ ವಿಂಡ್‌ಸ್ಕ್ರೀನ್‌ಗೆ ಸರಿಯಾಗಿ ಅಂಟಿಸಲಾಗಿದೆ ಮತ್ತು ಟೋಲ್ ಪ್ಲಾಜಾಗಳಿಗೆ ತಲುಪುವ ಮೊದಲು ಸಾಕಷ್ಟು ರೀಚಾರ್ಜ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಪುನರಾವರ್ತಿತವಾಗಿ ಸಲಹೆ ನೀಡಿದ್ದಾರೆ.
ದಂಡ ಸಂಗ್ರಹದಲ್ಲಿ ಟಾಪ್ 5 ಸ್ಥಾನದಲ್ಲಿರುವ ರಾಜ್ಯಗಳು!
2024-25ರ ಆರ್ಥಿಕ ವರ್ಷದಲ್ಲಿ ಫಾಸ್ಟ್‌ಟ್ಯಾಗ್ ದಂಡ ಸಂಗ್ರಹಣೆಯಲ್ಲಿ ಟಾಪ್ 5 ರಾಜ್ಯಗಳ ಪಟ್ಟಿ ಇಲ್ಲಿದೆ:
- ಕರ್ನಾಟಕ - ₹129,91,72,480
- ಮಹಾರಾಷ್ಟ್ರ - ₹110,64,69,570
- ಉತ್ತರ ಪ್ರದೇಶ - ₹81,06,66,655
- ಗುಜರಾತ್ - ₹78,58,99,385
- ತಮಿಳುನಾಡು - ₹71,82,33,400
ಫಾಸ್ಟ್ಯಾಗ್ ಕಡ್ಡಾಯವೇ?
ಹೌದು! ನಾಲ್ಕು ಚಕ್ರದ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಬೇಕೆಂದರೆ ಫಾಸ್ಟ್ಯಾಗ್ ಕಡ್ಡಾಯ. ಒಂದು ವೇಳೆ ಇಲ್ಲದಿದ್ದರೆ ಡಬಲ್ ಟೋಲ್ ಶುಲ್ಕ ಪಾವತಿ ಮಾಡಲೇಬೇಕು.
ಫಾಸ್ಟ್ಯಾಗ್ ಖರೀದಿಸುವುದು ಮತ್ತು ರೀಚಾರ್ಜ್ ಮಾಡುವುದು ಹೇಗೆ?
- ಬ್ಯಾಂಕ್ ಮೂಲಕ (SBI, ICICI, HDFC, Axis, ಇತರ), ಟೋಲ್ ಪ್ಲಾಜಾ, ಪೆಟ್ರೋಲ್ ಬಂಕ್ ಅಥವಾ ಆನ್‌ಲೈನ್ ಮೂಲಕ ಖರೀದಿ ಮಾಡಬಹುದು.
- ದಾಖಲೆಗಳು: ವಾಹನದ ಆರ್‌ಸಿ (RC), KYC ದಾಖಲೆಗಳನ್ನು ಸಲ್ಲಿಸಬೇಕು.
- ರೀಚಾರ್ಜ್ ಮಾಡುವುದು ಹೇಗೆ: My FASTag ಆಪ್, ಯುಪಿಐ, ಬ್ಯಾಂಕ್ ಆಪ್ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು.
ಸದ್ಯ ಕರ್ನಾಟಕದಲ್ಲಿ ಫಾಸ್ಟ್ಯಾಗ್ ಬಳಸದೇ, ಕಾರ್ಯನಿರ್ವಹಿಸದೇ ಇರುವ ಫಾಸ್ಟ್ಯಾಗ್‌ನಿಂದಾಗಿ ಸದ್ಯ ಕೋಟಿಗಟ್ಟಲೆ ದಂಡ ಸಂಗ್ರಹಿಸಲಾಗಿದೆ. ಆದ್ದರಿಂದ ಫಾಸ್ಟ್ಯಾಗ್ ದಂಡ ಸಂಗ್ರಹದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.


Click it and Unblock the Notifications