ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೆ ಹೆಚ್ಚಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಳೆರಾಯ ಯಾವಾಗ ಬರುತ್ತಾನೋ ಎಂಬ ನಿರೀಕ್ಷೆಯೂ ಹೆಚ್ಚಾಗುತ್ತಿದೆ. ಬಿಸಿಲಿನಿಂದ ಧಗೆ ಹೆಚ್ಚಾಗುತ್ತಿದೆ, ಮೈ ಸುಡುವಂತ ಅನುಭವವಾಗುತ್ತಿದೆ.ಇದರ ನಡುವೆ ಭಾರತೀಯ ಹವಾಮಾನ ಇಲಾಖೆಯಿಂದ ನಿಟ್ಟುಸಿರು ಬಿಡುವಂತಹ ಸುದ್ದಿ ಸಿಕ್ಕಿದೆ. ಅದೇನೆಂದರೆ ಕರ್ನಾಟಕದ ಮೂರು ಪ್ರಮುಖ ಜಿಲ್ಲೆಗಳಾದ ಉತ್ತರ ಕನ್ನಡ, ಧಾರವಾಡ ಮತ್ತು ಶಿವಮೊಗ್ಗ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

ಮಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಮಳೆಯ ಸಂಭವನೀಯತೆ 41% ಆಗಿದೆ. ಗುಡುಗು ಸಹಿತ ಮಳೆಯ ಸಂಭವ 25% ಇದೆ. ಮಳೆಯ ಒಟ್ಟು ಪ್ರಮಾಣ 1.3 ಮಿ.ಮೀ ಆಗಿರಬಹುದು ಮತ್ತು ಮಳೆ ಸುರಿಯುವ ಒಟ್ಟು ಅವಧಿ ಸುಮಾರು 1 ಗಂಟೆ ಇರಬಹುದು.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮಾರ್ಚ್ 28 ರವರೆಗೆ ಹವಾಮಾನ ಅಸ್ಥಿರವಾಗಿರುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಮುಂದಿನ ಕೆಲವು ದಿನಗಳವರೆಗೆ ಕರ್ನಾಟಕದ ಹಲವೆಡೆ ಗುಡುಗು-ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ರೈತರು, ಮೀನುಗಾರರು ಮತ್ತು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಈ ಭಾರಿ ಪ್ರಮಾಣದ ಮಳೆ ನಿರೀಕ್ಷೆ ಹಿನ್ನೆಲೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ರೆಡ್ ಅಲರ್ಟ್ ಎಂದರೆ ಆ ಭಾಗದಲ್ಲಿ ತೀವ್ರ ಹವಾಮಾನ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ನಾಗರಿಕರು ಮತ್ತು ಸಂಬಂಧಿತ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಸೂಚಿಸುತ್ತದೆ. ಮಳೆಯ ಪ್ರಭಾವದಿಂದ ಗಂಟೆಗೆ 41-61 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದಾಗಿ ಜನರು ಸುರಕ್ಷಿತ ಸ್ಥಳಗಳಲ್ಲಿ ಉಳಿಯಲು, ಬಿರುಕು ಬಿಟ್ಟ ಕಟ್ಟಡಗಳಿಂದ ದೂರವಿರಲು ಮತ್ತು ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಲು ಸಲಹೆ ನೀಡಲಾಗಿದೆ. ಇನ್ನು ಗುಡುಗು ಸಹಿತ ಮಳೆ ಸುರಿಯುವ ಹೊತ್ತಿನಲ್ಲಿ, ಹೊರಗೆ ನಿಲ್ಲುವುದು ಅಪಾಯಕಾರಿಯಾಗಬಹುದು, ವಿಶೇಷವಾಗಿ ಮುಂಚಿತವಾಗಿ ಮುನ್ಸೂಚನೆ ನೀಡಿರುವ ಪ್ರದೇಶಗಳಲ್ಲಿ ಈ ಬಗ್ಗೆ ಗಮನ ಹರಿಸಬೇಕು.
ಇನ್ನು ಮಳೆಯ ಹಿನ್ನೆಲೆ ರಾಜ್ಯದ ಹಲವೆಡೆ ಹವಾಮಾನ ಪರಿಸ್ಥಿತಿ ಕೂಡ ತೀವ್ರವಾಗಿದೆ. ಅದರಲ್ಲೂ ಕೊಡಗು ಜಿಲ್ಲೆಯ ಯೆಮ್ಮೆಯಾಡು ಬಳಿ ಇರುವ ಪಡಿಯಾಣಿ ಎಂಬ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ. ಅಲ್ಲಿನ ನಿವಾಸಿಗಳು ನೆಲಕ್ಕೆ ಬಿದ್ದ ಹಿಮದ ತುಣುಕುಗಳನ್ನು ಸಂಗ್ರಹಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದು ಬಹುತೇಕ ಚಳಿಗಾಲದ ದೇಶಗಳಲ್ಲಿ ಕಂಡುಬರುವ ಪರಿಸ್ಥಿತಿಯಂತೆಯೇ ಕಾಣಿಸಿಕೊಂಡಿತು. ಹಲವರು ಈ ಹಿಮದ ತುಣುಕುಗಳನ್ನು ಹಿಡಿದು ಉಲ್ಲಾಸ ವ್ಯಕ್ತಪಡಿಸುತ್ತಿರುವ ವೀಡಿಯೋಗಳು ಸಹ ಪ್ರಚಲಿತದಲ್ಲಿವೆ.
ಇತ್ತ ಗದಗದಲ್ಲಿ ಕೂಡ ಮೊನ್ನೆ ದಾಖಲೆಯ ಪ್ರಮಾಣದ ಮಳೆಯಾಗಿದೆ. 17.6 ಮಿ.ಮೀ ಮಳೆಯಾಗಿದ್ದು ಇದು ರಾಜ್ಯದಲ್ಲಿ ಮಳೆಯ ಅತಿ ಹೆಚ್ಚು ಪ್ರಮಾಣ ದಾಖಲಾಗಿರುವ ಪ್ರದೇಶವಾಗಿದೆ. ಧಾರವಾಡದಲ್ಲಿ 8.4 ಮಿ.ಮೀ, ದಾವಣಗೆರೆಯಲ್ಲಿ 3.0 ಮಿ.ಮೀ, ಕಾರವಾರದಲ್ಲಿ 0.2 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಕೆಲವೊಂದು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿದ್ದರೂ, ಕೆಲವು ಪ್ರದೇಶಗಳಲ್ಲಿ ಮಾತ್ರಸಾಲು ಮಳೆಯಾಗಿದೆ ಎಂದು ಹೇಳಬಹುದು.
ಇನ್ನು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರದಂದು ಗರಿಷ್ಠ ತಾಪಮಾನದಲ್ಲಿ ವ್ಯತ್ಯಾಸ ಕಂಡುಬಂದಿತು. ಕೊಡಗಿನಲ್ಲಿ 31.9°C ತಾಪಮಾನ ಕಂಡುಬಂದರೆ, ಕಲಬುರಗಿಯಲ್ಲಿ ಅತ್ಯಧಿಕವಾಗಿ 38.6°C ತಲುಪಿತು, ಇತ್ತ ಬೆಂಗಳೂರಿನಲ್ಲಿ ಮುಂದಿನ 12 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನ 33°C ಆಗಿದ್ದು, ಕನಿಷ್ಟ 22°C ಇರಲಿದೆ.
ಒಟ್ಟಿನಲ್ಲಿ ರಾಜ್ಯದ ಹವಾಮಾನ ಸ್ಥಿತಿ ದಿನೇ ದಿನೆ ಬದಲಾಗುತ್ತಿದೆ. ಉತ್ತರ ಕನ್ನಡ, ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಾಗಿದ್ದು, ವೀಡಿಯೊಗಳು ವೈರಲ್ ಆಗುತ್ತಿವೆ. ಹಾಗೆಯೇ ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು 17.6 ಮಿ.ಮೀ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ, ಗರಿಷ್ಠ ತಾಪಮಾನ 33°C ತಲುಪುವ ನಿರೀಕ್ಷೆ.
ಮಾರ್ಚ್ 28 ರವರೆಗೆ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಜನರು ಎಚ್ಚರಿಕೆಯಿಂದ ಇರುವುದು ಉತ್ತಮ.


Click it and Unblock the Notifications