ಜನರಿಗೆ ಬೇಸಿಗೆ ಅನ್ನೋ ಪದ ಕೇಳಿದ್ರೇನೆ ಮೈಯಲ್ಲಿ ಬೆವರಿಳಿಯುತ್ತದೆ. ಇನ್ನು ಬೇಸಿಗೆ ಬಂತು ಅಂದರೆ ಕೇಳೋದೇ ಬೇಡ. ಒಂದು ಹೆಜ್ಜೆ ಮನೆಯಿಂದ ಹೊರಗೆ ಇಡೋದಕ್ಕೂ ಭಯ. ಮನೆಯಿಂದ ಹೊರಗೆ ಬಂದರೆ ಹಿಂತಿರುಗುವ ವೇಳೆಗೆ ಬೆವೆತು ಬೆಂದು ಹೋಗಿರುವಂತಾಗುತ್ತದೆ. ಯಾಕಂದ್ರೆ ರಾಜ್ಯದಲ್ಲಿ ಈ ಬಾರಿ ಹವಾಮಾನ ಅಷ್ಟೊಂದು ವಿಚಿತ್ರ ಸ್ವರೂಪದಲ್ಲಿ ಜನರನ್ನು ಕಾಡುತ್ತಿದೆ. ಬೇಸಿಗೆಯ ಧಗೆ ರಾಜ್ಯದ ಜನರಿಗೆ ಬಿಸಿ ಮುಟ್ಟಿಸುತ್ತಿದೆ. ಸೂರ್ಯನ ಕೆಂಗಣ್ಣಿಗೆ ಗುರಿಯಾಗುತ್ತಿರುವ ಜನರು ವರುಣನ ನಿರೀಕ್ಷೆಯಲ್ಲಿದ್ದಾರೆ.

ಹೌದು, ರಾಜ್ಯದಲ್ಲಿ ಈ ಬಾರಿಯ ಹವಾಮಾನ ಎಷ್ಟು ವಿಚಿತ್ರವಾಗಿದೆ ಎಂದರೆ, ಬೇಸಿಗೆ ಯಾವಾಗ ಮುಗಿಯುತ್ತೋ ಎನ್ನುವಂತಾಗಿದೆ. ಒಂದು ಕಡೆ ಬಿಸಿಲಿನ ತಾಪ ಹೆಚ್ಚಿದರೆ, ಇನ್ನೊಂದು ಕಡೆ ಸಾಧಾರಣ ಮಳೆಯಾಗುತ್ತಿದೆ. ಇದರಿಂದ ಜನತೆ ಗೊಂದಲಕ್ಕೀಡಾಗಿದ್ದಾರೆ. ಇನ್ನು ಹವಾಮಾನ ಇಲಾಖೆ ಕೂಡ ಈ ಬಗ್ಗೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಇನ್ನೂ ಕೆಲವು ದಿನ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅದರಲ್ಲೂ ಇಂದು (ಮಾರ್ಚ್ 17) ಮತ್ತು ನಾಳೆ (ಮಾರ್ಚ್ 18) ದಕ್ಷಿಣ ಕನ್ನಡ, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಬಿಸಿಲಿನ ತಾಪಮಾನ ಏರಿಕೆ:
ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹದಗೆಡುತ್ತಿದೆ. ತಾಪಮಾನದ ಏರಿಕೆಯ ಬಗ್ಗೆ ತಿಳಿಯುವುದಾದರೆ, ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ದಾವಣಗೆರೆ ಮತ್ತು ಚಾಮರಾಜನಗರದಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟು ಕಡಿಮೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಗರಿಷ್ಠ 34.8 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ವಿಜಯಪುರದಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಮುಂಬರುವ ದಿನಗಳಲ್ಲಿ 2ರಿಂದ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಮಾರ್ಚ್ 18 ಮತ್ತು 19 ರಂದು ಬಿಸಿಗಾಳಿ ಬೀಸುವ ಸಾಧ್ಯತೆ ಇದೆ.
ಇನ್ನು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ನಾಲತವಾಡ, ತಾಳಿಕೋಟೆಯಲ್ಲಿ 41.2 ಡಿಗ್ರಿ ಸೆಲ್ಸಿಯಸ್, ಬಳ್ಳೊಳ್ಳಿಯಲ್ಲಿ 41 ಡಿಗ್ರಿ, ಬಬಲೇಶ್ವರ ಮತ್ತು ಢವಳಗಿಯಲ್ಲಿ 40.7 ಡಿಗ್ರಿ ಹಾಗೂ ತಿಕೋಟಾದಲ್ಲಿ 40 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದರಿಂದಾಗಿ ವಾಯುವ್ಯ ಕರ್ನಾಟಕದ ಜನರಿಗೆ ತೀವ್ರ ಬಿಸಿಲಿನ ತಾಪ ಅನುಭವವಾಗುತ್ತಿದೆ.
ರೇವತಿ ಮಳೆ ನಿರೀಕ್ಷೆಯಲ್ಲಿರುವ ಅನ್ನದಾತರು:
ಬಿಸಿಲಿನ ತಾಪಮಾನ ಹೆಚ್ಚಾಂದತೆಲ್ಲ ಜನರು ಮಳೆಯನ್ನೇ ಎದುರು ನೋಡುತ್ತಿದ್ದಾರೆ. ಅದರಲ್ಲೂ ಬೆಳೆ ಬೆಳೆಯುವ ರೈತರು ಪೂರ್ವ ಮುಂಗಾರಿನ ನಿರೀಕ್ಷೆಯಲ್ಲಿದ್ದಾರೆ. ಯುಗಾದಿ ಹಬ್ಬದ ಆಸುಪಾಸಿನಲ್ಲಿ ಭೂಮಿ ಪೂಜೆಗಳೊಂದಿಗೆ ಹೊಸ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಚಿಂತಿಸುತ್ತಿದ್ದಾರೆ. ಬೆಳೆಗಾಗಿ ರೈತರು ಹವಾಮಾನ ಬದಲಾವಣೆಯತ್ತ ಚಿತ್ತ ಹರಿಸಿದ್ದಾರೆ.
ರೇವತಿ ನಕ್ಷತ್ರದ ಸಂದರ್ಭದಲ್ಲಿ ಮಳೆಯಾದರೆ, ಅದನ್ನು ರೇವತಿ ಮಳೆ ಎಂದು ಕರೆಯಲಾಗುತ್ತದೆ. ಇದು ಉತ್ತಮ ಮುಂಗಾರು ಮಳೆಗೆ ಪೂರ್ವಸೂಚನೆ ಎನ್ನಲಾಗುತ್ತದೆ. ಈ ಬಾರಿ ಯುಗಾದಿ ಹಬ್ಬದ ನಂತರ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇದು ಖಂಡಿತವಾಗಿಯೂ ರೈತರ ಕೈಹಿಡಿಯುವ ನಿರೀಕ್ಷೆಯಲ್ಲಿದೆ.
ಇನ್ನು ಇತ್ತೀಚೆಗೆ ಸುರಿದ ಮಳೆಯಿಂದ ಸಕಲೇಶಪುರ ರೈತರಿಗೆ ಭಾರಿ ಸಂತಸ ಮೂಡಿದೆ. ಕಾಫಿ ನಾಡಿನಲ್ಲಿ ಹೂವು ಮಳೆ ಸುರಿದಿದ್ದು, ಬಹುತೇಕ ಬೆಳೆಗಾರರಿಗೆ ಖುಷಿ ತಂದಿದೆ. ಈ ಬಾರಿ ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದೆ. ಮಲೆನಾಡಿನ ಹಾನುಬಾಳು, ಹೆತ್ತೂರು, ಯಸಳೂರು, ಬೆಳಗೂಡು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಬುಧವಾರ ಸಂಜೆ ಹಾಗೂ ರಾತ್ರಿ ಕೆಲವೆಡೆ ಉತ್ತಮ ಹಾಗೂ ಇನ್ನು ಕೆಲವೆಡೆ ಸಾಧಾರಣ ಮಳೆ ಸುರಿಯಿತು. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ವಾಡಿಕೆಯಂತೆ ಕರೆಯುವ ಇದು ಮೊದಲ ಹೂವು ಮಳೆ ಆಗಿದೆ.
ಇನ್ನು ಕಳೆದ ಕೆಲ ದಿನಗಳಿಂದ ಕಾಫಿ, ಅಡಕೆ ಹಾಗೂ ಇತರೆ ಬೆಳೆಗಳಿಗೆ ನೀರು ಮಾಡುವ ಕಾರ್ಯವನ್ನು ರೈತರು ತರಾತುರಿಯಲ್ಲಿ ಮುಗಿಸಿದ್ದರು. ಈಗ ಉತ್ತಮ ಮಳೆ ಸುರಿದಿದ್ದರಿಂದ ಒಂದಷ್ಟು ಸಮಾಧಾನ ತಂದಿದೆ. ನೀರಿನ ಕೊರತೆ, ಕಾರ್ಮಿಕರ ಅಲಭ್ಯತೆ ಹಾಗೂ ಸ್ಪಿಂಕ್ಲರ್ ಮೋಟಾರ್ ಅವ್ಯವಸ್ಥೆ, ಯಂತ್ರೋಪಕರಣಗಳ ರಿಪೇರಿ ಹಾಗೂ ಇತರೆ ತೊಡಕುಗಳಿಂದ, ಮಳೆಯ ನಿರೀಕ್ಷೆಯಲ್ಲಿಆಕಾಶದತ್ತ ಮುಖ ಮಾಡಿದ್ದ ಬೆಳೆಗಾರರ ಪಾಲಿಗೆ ಮಳೆ ಸುರಿದಿರುವುದು ಸಂತಸ ಉಂಟುಮಾಡಿದೆ.
ಅಂದಹಾಗೆ ಈ ಬಾರಿ ಕರ್ನಾಟಕದ ಹವಾಮಾನದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ. ಕೆಲವೆಡೆ ಕೆಲವೆಡೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೆಲವು ಕಡೆ ಸಾಧಾರಣ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಭಾರೀ ಬಿಸಿಲಿನ ಕಾರಣ ಜನರು ತೀವ್ರ ತಾಪಮಾನವನ್ನು ಅನುಭವಿಸುತ್ತಿದ್ದಾರೆ. ವಿಜಯಪುರ, ಕಲಬುರಗಿ, ಬಳ್ಳಾರಿ, ಧಾರವಾಡ ಮೊದಲಾದ ಪ್ರದೇಶಗಳಲ್ಲಿ ಉಷ್ಣಾಂಶ 40 ಡಿಗ್ರಿಗೆ ಪಕ್ಕವಾಗಿ ದಾಖಲಾಗುತ್ತಿದೆ. ಹಾಗೆಯೇ ಇದರ ವಿರುದ್ಧವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮುಂಗಾರು ಪೂರ್ವ ಮಳೆಯ ಅಲುಗಾಡು ಶುರುವಾಗಿದೆ. ಇತ್ತ ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವರುಣನ ಮೆರುಗು ಕಾಣಬಹುದು. ಬೆಂಗಳೂರಿನಲ್ಲೂ ಹಗಲು ಬಿಸಿಲು ಹೆಚ್ಚಾದರೂ ರಾತ್ರಿ ತಂಪಾದ ವಾತಾವರಣವಿದೆ.
ಮುಂದಿನ ಕೆಲವು ದಿನಗಳ ಕಾಲ ಈ ಬಿಸಿಲು - ಮಳೆ ಸಂಕಲನ ಮುಂದುವರಿಯಲಿದ್ದು, ರೈತರು ಮುಂಗಾರು ಪೂರ್ವ ಮಳೆಯ ನಿರೀಕ್ಷೆಯಲ್ಲಿ ಕಾದಿರಬೇಕಾಗಿದೆ. ಹವಾಮಾನ ಇಲಾಖೆ ಪ್ರಕಾರ, ಮಾರ್ಚ್ 18 ಮತ್ತು 19 ರಂದು ಕೆಲವೆಡೆ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ಇನ್ನು ಕಾಫಿ ಬೆಳೆಗಾರರಿಗೆ ಮಳೆಯು ಕೂಡ ನಿರೀಕ್ಷೆಯಂತೆ ಬೀಳುತ್ತಿದ್ದು, ಇದು ಕಾಫಿ ಹಾಗೂ ಅಡಕೆ ಬೆಳೆಗೆ ಅನುಕೂಲವಾಗಲಿದೆ.
ಒಟ್ಟಿನಲ್ಲಿ ಕರ್ನಾಟಕದಲ್ಲಿ ಬಿಸಿಲಿನ ತಾಪದ ಜೊತೆಗೆ, ಕೆಲವು ಪ್ರದೇಶಗಳಲ್ಲಿ ವರುಣ ತಂಪೆರೆಯುತ್ತಿರುವುದರಿಂದ, ಹವಾಮಾನ ಬದಲಾವಣೆಗೆ ತಕ್ಕಂತೆ ಜನರು ಹಾಗೂ ರೈತರು ತಮ್ಮ ದಿನಚರಿಯನ್ನು ಹೊಂದಿಸಿಕೊಳ್ಳಬೇಕಾದ ಅಗತ್ಯವಿದೆ.


Click it and Unblock the Notifications