ಕರ್ನಾಟಕ ಹವಾಮಾನ ಸ್ಥಿತಿ ದಿನೇ ದಿನೆ ಬದಲಾಗುತ್ತಿದೆ. ಜನರನ್ನು ಕನ್ಫ್ಯೂಸ್ ಮಾಡುತ್ತಿದೆ. ಕಳೆದ ವಾರ ಬೆಂಗಳೂರಿನಲ್ಲಿ ಒಂದು ದಿನ ಮಳೆ ಸುರಿದು ಭೂಮಿಗೆ ತಂಪೆರೆದಿತ್ತು. ಬಳಿಕ ಬಿಸಿಲಿನ ದಿನಗಳನ್ನ ಅನುಭವಿಸುವಂತೆ ಮಾಡಿತ್ತು. ಅತಿಹೆಚ್ಚು ತಾಪಮಾನದಲ್ಲಿ ಕಳೆಯುತ್ತಿರುವ ಕರ್ನಾಟಕದ ಕೆಲವೆಡೆ ಕಳೆದ ಎರಡ್ಮೂರು ದಿನಗಳಲ್ಲಿ ಕೊಂಚ ಮಳೆ ಸುರಿದಿದೆ. ಇದೀಗ ಮಳೆ ಹಾಗೂ ತಾಪಮಾನದ ಕುರಿತು ಭಾರತೀಯ ಹವಾಮಾನ ಇಲಾಖೆಯಿಂದ ಮತ್ತೊಂದು ಮಾಹಿತಿ ಹೊರಬಿದ್ದಿದೆ.

ಹೌದು, ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮುಂದಿನ ಆರು ದಿನಗಳವರೆಗೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಗುಡುಗು ಮತ್ತು ಮಧ್ಯಮ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಆದರೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಹಾಗೆಯೇ ಉತ್ತರ ಕರ್ನಾಟಕವು ಹೆಚ್ಚುತ್ತಿರುವ ತಾಪಮಾನದೊಂದಿಗೆ ಒಣ ಹವಾಮಾನವನ್ನು ಅನುಭವಿಸುತ್ತಲೇ ಇರುತ್ತದೆ ಎನ್ನಲಾಗಿದೆ.
ಇನ್ನು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು, 34 ಡಿಗ್ರಿ ಸೆಲ್ಸಿಯಸ್ ಮತ್ತು 39 ಡಿಗ್ರಿ ಸೆಲ್ಸಿಯಸ್ ನಡುವೆ ಏರಿತಗೊಳ್ಳುವ ನಿರೀಕ್ಷೆ ಇದೆ. ಹೀಗಿರುವಾಗ ಜನರು ಹವಾಮಾನ ಬದಲಾವಣೆ ಬಗ್ಗೆ ಅರಿತುಕೊಂಡು ಎಚ್ಚರದಿಂದಿರಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಉತ್ತರ ಒಳನಾಡಿನ ಕರ್ನಾಟಕದಲ್ಲಿ 2-4 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮಾರ್ಚ್ 30 ರಿಂದ ಏಪ್ರಿಲ್ 3 ರವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮಧ್ಯಂತರ ಮಳೆಯಾಗುವ ನಿರೀಕ್ಷೆಯಿದೆ ಎನ್ನಬಹುದಾಗಿದೆ.
ಇನ್ನು ಕರ್ನಾಟಕದ ಹವಾಮಾನ ಸ್ಥಿತಿಯ ಸಂಬಂಧ ಭಾರತೀಯ ಹವಾಮಾನ ಇಲಾಖೆ ನೀಡಿರುವ ಸೂಚನೆ ಪ್ರಕಾರ, ಮುಂದಿನ ಆರು ದಿನಗಳ ಕಾಲ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ವಿವಿಧೆಡೆ ಈ ಹವಾಮಾನ ಬದಲಾವಣೆಯ ಪರಿಣಾಮವಾಗಿ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಕುಸಿಯುವ ನಿರೀಕ್ಷೆಯಿದ್ದು, ಇನ್ನುಳಿದ ಭಾಗಗಳಲ್ಲಿ ತಾಪಮಾನದಲ್ಲಿ ಸ್ಥಿರತೆ ಇರಲಿದೆ ಎಂಬುದಾಗಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಹವಾಮಾನ:
ರಾಜಧಾನಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ ಸುಮಾರು 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು. ಸದ್ಯ ಈ ಪ್ರದೇಶಗಳಲ್ಲಿ ಮಳೆಯ ನಿರೀಕ್ಷೆ ಇಲ್ಲದಿದ್ದರೂ, ಮೋಡ ಕವಿದ ವಾತಾವರಣದಲ್ಲಿ ದಿನ ಕಳೆಯುತ್ತದೆ. ಈ ಪರಿಣಾಮದಿಂದ ತಾಪಮಾನದ ಧಗೆ ಕಡಿಮೆಯಾಗಿ ಜನ ನಿರಾಳವಾಗಬಹುದು. ಇನ್ನು ಮಾರ್ಚ್ 27ರಂದು ನಗರದಲ್ಲಿ 33.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ 22.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.
ದಕ್ಷಿಣ ಒಳನಾಡು ಮತ್ತು ಕರಾವಳಿ ಹವಾಮಾನ ಸ್ಥಿತಿ:
ದಕ್ಷಿಣ ಒಳನಾಡಾದ ಮೈಸೂರು, ಕೊಡಗು, ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲೂ ಮೋಡ ಕವಿದ ವಾತಾವರಣ ಹೆಚ್ಚಾಗಿದ್ದು ಶೀತಳ ಗಾಳಿ ಬೀಸುವ ಸಾಧ್ಯತೆ ಇದೆ.
ಇತ್ತ ಕರಾವಳಿ ಭಾಗದಲ್ಲಿ ಕೂಡ ಮೋಡ ಕವಿದ ವಾತಾವರಣ ಇರಬಹುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ, ಮಾರ್ಚ್ 30 ರಿಂದ ಏಪ್ರಿಲ್ 3ರ ವರೆಗೆ ಮಳೆ ಸಾಧ್ಯತೆ ಇದೆ. ಸಮುದ್ರತೀರದ ಹವಾಮಾನದಿಂದ ತಟವಾಸಿಗಳು ಹೆಚ್ಚಿನ ತಾಪಮಾನದಿಂದ ಅಸ್ವಸ್ಥರಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡು ಪ್ರದೇಶಗಳ ಹವಾಮಾನ:
ಇನ್ನು ಉತ್ತರ ಒಳನಾಡು ಭಾಗಗಳಲ್ಲಿ ಬಹುತೇಕ ಉಷ್ಣತೆ ಇದ್ದಂತೆಯೇ ಮುಂದುವರಿಯಲಿದೆ. ನಿನ್ನೆ (ಮಾರ್ಚ್ 27) ಬೆಳಿಗ್ಗೆ 8 ಗಂಟೆ ವೇಳೆಗೆ, ರಾಜ್ಯದ ಅತಿ ಹೆಚ್ಚು ತಾಪಮಾನ ಕಲಬುರಗಿಯಲ್ಲಿ 39.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂಬರುವ ಐದು ದಿನಗಳಲ್ಲಿ ಈ ಭಾಗದಲ್ಲಿ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್ ಮಟ್ಟದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಉತ್ತರ ಒಳನಾಡಿನ ಜನರು ಆದಷ್ಟು ಎಚ್ಚರಿಕೆಯಿಂದ ಇರಬೇಕು.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಎಪ್ರಿಲ್ 3ರ ತನಕ ರಾಜ್ಯದ ಹಲವೆಡೆ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿರುಸಿನ ಮಳೆ ಬೀಳುವ ಸಾಧ್ಯತೆ ಇದೆ. ಮಾರ್ಚ್ 30 ರಿಂದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ, ಹಾಸನ ಮತ್ತು ಮೈಸೂರು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಬಹುದು. ಹೀಗಾಗಿ, ನಾಗರಿಕರು ಹಾಗೂ ರೈತರು ಮುನ್ನೆಚ್ಚರಿಕೆ ವಹಿಸುವುದು ಮುಖ್ಯ.
ಇನ್ನು ಮುಂದಿನ ಕೆಲವು ದಿನಗಳಲ್ಲಿ ತಾಪಮಾನದಲ್ಲಿ ಏರಿಕೆಯಾಗುವ ಮುನ್ಸೂಚನೆಯಿರುವುದರಿಂದ, ಜನರು ಬೇಸಿಗೆಯ ತಾಪದಿಂದ ಸುರಕ್ಷಿತರಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ದೇಹದ ನೀರಿನ ಸಮತೋಲನ ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯುವುದು, ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಸೂಕ್ತ ನೆರಳು ಅಥವಾ ತಂಪಾದ ಸ್ಥಳಗಳಲ್ಲಿ ಇರುವುದು ಉತ್ತಮ.


Click it and Unblock the Notifications