ಬೆಂಗಳೂರು (Bengaluru) ಸೇರಿ, ಕರ್ನಾಟಕದಾದ್ಯಂತ ದಿನ ಹೋದಂತೆ ಚಳಿ ಪ್ರಮಾಣ ಕಡಿಮೆಯಾಗುತ್ತಿದೆ, ತಾಪಮಾನದಲ್ಲಿ ಏರಿಕೆ ಕಾಣುತ್ತಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಬೇಸಿಗೆ ಕಾಲ ಆರಂಭವಾದಂತೆಯೇ ಅನುಭವವಾಗುತ್ತಿದೆ. ಕಾರಣ ಬಿಸಿಲಿನ ತಾಪಮಾನ ಏರಿಕೆ, ಅಲ್ಲದೇ ಸೆಖೆಯೂ ಹೆಚ್ಚಾಗಿದೆ. ಇನ್ನು ಹವಾಮಾನ ಇಲಾಖೆ ಕೂಡಾ, ಇಂದು ರಾಜ್ಯದಲ್ಲಿ ತಾಪಮಾನ ಏರಿಕೆ ಪ್ರಮಾಣದಲ್ಲಿರಲಿದೆ ಎಂದು ತಿಳಿಸಿದೆ. ಅದರಲ್ಲೂ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಸುಮಾರು 30 ಡಿಗ್ರಿ ಸೆಲ್ಸಿಯಸ್‌ನಿಂದ 31 ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲಾಗುವ ನಿರೀಕ್ಷೆಯಿದೆ. ಇನ್ನು ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ನಿಂದ 18 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಬಹುದು ಎನ್ನಲಾಗಿದೆ. ಆದರೆ ಮುಂಜಾನೆ ಮಂಜು ಕವಿದ ವಾತಾವರಣವಿರಲ್ಲಿದ್ದು, ತಕ್ಕ ಮಟ್ಟಿಗೆ ಚಳಿಯೂ ಇರಲಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ತಾಪಮಾನದಲ್ಲಿ ಭಾರೀ ಏರಿಕೆಯಾಗಲಿದೆ. ಅಲ್ಲದೇ ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲೂ ಉಷ್ಣಾಂಶ ಗರಿಷ್ಠ ಪ್ರಮಾಣದಲ್ಲಿರಲಿದೆ ಎಂದು ವರದಿಯಾಗಿದೆ.
ಅದೇ ರೀತಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಮೈಸೂರು, ಶಿವಮೊಗ್ಗ, ವಿಜಯನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲೂ ತಾಪಮಾನದಲ್ಲಿ ಏರಿಕೆಯಾಗಲಿದೆ ಎಂದು ವರದಿಯಾಗಿದೆ.
ಇನ್ನು ಕರ್ನಾಟಕದಲ್ಲಿ ಮುಂದಿನ 3 ದಿನಗಳವರೆಗೆ ಹವಾಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗಿದೆ. ಆದರೂ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನ ವಾತಾವರಣ ಹೇಗಿದೆ?
ಬೆಂಗಳೂರಿನಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಚಳಿ, ಮಂಜಿನ ವಾತಾವರಣ ಇರಲಿದೆ. ಆದರೆ ಉಳಿದ ನಗರಗಳಲ್ಲಿ ತಾಪಮಾನವೂ ಏರಿಕೆಯಲ್ಲಿರಲಿದೆ ಎಂದು ಹೇಳಲಾಗಿದೆ. ಅದೇ ರೀತಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳು:
ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಶುಷ್ಕ ಮತ್ತು ಬಿಸಿಲಿನ ವಾತಾವರಣ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಇಂದು ಗರಿಷ್ಠ ತಾಪಮಾನ 31-33 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಅದರಲ್ಲೂ ಕಲಬುರಗಿ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುವ ನಿರೀಕ್ಷೆಯಿದೆ.
ಸದ್ಯ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆ ಜನರೂ ಕೂಡಾ ಎಚ್ಚರಿಕೆಯಿಂದ ಇರಬೇಕು. ಹವಾಮಾನ ಬದಲಾದಂತೆ, ಆರೋಗ್ಯದಲ್ಲೂ ಏರುಪೇರಾಗುತ್ತೆ. ಹಾಗಾಗಿ ಆರೋಗ್ಯಕರ ಆಹಾರ, ದಿನನಿತ್ಯ ನೀರು ಕುಡಿಯಿರಿ. ಅಲ್ಲದೇ ಹೊರಗಿನ ಕೆಲಸಗಳನ್ನು ಆದಷ್ಟು ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲೇ ಮಾಡಿಮುಗಿಸಿ. ಏಕೆಂದರೆ ಮಧ್ಯಾಹ್ನದ ವೇಳೆ ಬಿಸಿಲಿನ ಬೇಗೆ ಹೆಚ್ಚಾಗುವುದರಿಂದ, ಇದರಿಂದ ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.


Click it and Unblock the Notifications