ಕರ್ನಾಟಕದಲ್ಲಿ (Karnataka) ಮುಂದಿನ ಕೆಲವು ದಿನಗಳವರೆಗೆ ಬಿಸಿಲ್ಲಬ್ಬರ ಜೋರಾಗಿಯೇ ಇರಲಿದೆ. ಈ ಹಿಂದೆಲ್ಲಾ ಮಳೆಗಾಗಿ ಅಲರ್ಟ್ ನೀಡುತ್ತಿದ್ದ ಇಲಾಖೆ, ಇದೀಗ ಬಿಸಿಲಿಗಾಗಿ ಎಚ್ಚರಿಕೆ ಕೊಡುವಂತಾಗಿದೆ. ಹೊರಗೆ ಹೋದ್ರೆ ಸಾಕು ಅಯ್ಯಯ್ಯೋ ಎಂಬಂತಾಗಿದೆ. ಹವಾಮಾನ ಪರಿಸ್ಥಿತಿ ರಾಜ್ಯದಲ್ಲಿ ಭಾರೀ ವಿಪರೀತವಾಗಿದ್ದು, ಜನರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿ, ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಲ್ಲೇ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಹೆಚ್ಚಾಗಲಿದೆ ತಾಪಮಾನ
ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯಕ್ಕಿಂತಲೂ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆ ಪ್ರಕಾರ ಬೆಂಗಳೂರಿನಲ್ಲಿ 35-36 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಇದು ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚೇ ಇರಲಿದೆ. ಕನಿಷ್ಠ ತಾಪಮಾನ 19-20 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಬೆಳಿಗ್ಗೆಯಲ್ಲಿ ಸ್ವಲ್ಪ ಮಂಜು ಅಥವಾ ಮೋಡ ಕವಿದ ವಾತಾವರಣ ಇದ್ದರೂ, ನಂತರ ಬಿಸಿಲಿನ ಬೇಗೆ ಹೆಚ್ಚಾಗಲಿದೆ,
ಇನ್ನು ಮೈಸೂರು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 32-34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19-20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಈ ಜಿಲ್ಲೆಗಳಲ್ಲಿ ಮಳೆಯ ಯಾವುದೇ ಸೂಚನೆಗಳಿಲ್ಲ.
ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ 35-37 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಉತ್ತರ ಕನ್ನಡದಲ್ಲೂ ಸಹ ಒಣ ಹವೆ ಮುಂದುವರೆಯಲಿದೆ ಎಂದು ಹೇಳಲಾಗಿದ್ದು, ಗರಿಷ್ಠ ತಾಪಮಾನ 32-34 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಲವು ವರದಿಗಳ ಪ್ರಕಾರ, ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ತಲುಪಿದೆ ಎನ್ನಲಾಗಿದೆ. ಅಲ್ಲದೇ ಈ ಪ್ರದೇಶಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ.
ಜನರಿಗೆ ಸಲಹೆ:
ತಾಪಮಾನ ಏರಿಕೆಯಾಗುತ್ತಿದ್ದಂತೆ, ಅದು ಜನರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಅದೇ ರೀತಿ ಸೂರ್ಯನ ಕಿರಣಗಳಲ್ಲಿ ಅತಿನೇರಳೆ (UV) ಮಟ್ಟ ಹೆಚ್ಚಾಗಿ ಕಂಡುಬರಲಿದ್ದು, ಇದು ಮಾನವರ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೆಳಿಗ್ಗೆ 11 ಗಂಟೆ ನಂತರ, ಸಂಜೆ 4 ಗಂಟೆಯ ಒಳಗೆ, ಅಗತ್ಯವಿಲ್ಲದಿದ್ದರೆ ಮನೆಯಿಂದ ಹೋಗದಿರಿ. ಈ ಸಮಯದಲ್ಲಿ ಸೂರ್ಯನ ತಾಪಮಾನ ಮತ್ತು ಬಿಸಿಲಿನ ಬೇಗೆ ತೀವ್ರವಾಗಿರುವುದರಿಂದ, ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಆದಷ್ಟು ಆರೋಗ್ಯಕರ ಆಹಾರ, ತಂಪು ಪಾನೀಯ, ಎಳನೀರು ಸೇವಿಸದರೆ ಒಳ್ಳೆಯದು. ಆದ್ದರಿಂದ ಆದಷ್ಟು ಮುಂಜಾಗೃತ ಕ್ರಮ ವಹಿಸಿದರೆ ಒಳ್ಳೆಯದು ಎಂದು ಸಲಹೆ ನೀಡಲಾಗಿದೆ.


Click it and Unblock the Notifications