ಕರ್ನಾಟಕದ ಹಲವೆಡೆ ಕಳೆದ 24 ಗಂಟೆಗಳಲ್ಲಿ ಮಳೆಯ ಚಟುವಟಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮಳೆ ಹೆಚ್ಚು ಕಂಡುಬಂದರೆ, ಉತ್ತರ ಒಳನಾಡಿನ ಕೆಲವೇ ಪ್ರದೇಶಗಳಲ್ಲಿ ಚದುರಿದ ಮಳೆಯಾಗಿದೆ. ಮಳೆಯ ಪರಿಣಾಮವಾಗಿ ಹಲವು ಕಡೆ ಹವಾಮಾನ ತಂಪಾಗಿ, ಬಿಸಿಲಿನ ತಾಪ ಕಡಿಮೆಯಾಗಿದೆ.

ಈ ನಡುವೆ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯೂ ಸುರಿದಿದ್ದು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ರಾಮನಗರ ಜಿಲ್ಲೆಯ ಬಿಡದಿ, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ಧಾರವಾಡದ ಕಲಘಟಗಿ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಆಲಿಕಲ್ಲುಗಳು ಸುರಿದಿವೆ. ರಸ್ತೆಗಳು, ಮನೆಗಳ ಮೇಲ್ಚಾವಣಿಗಳು ಮತ್ತು ತೋಟಗಳು ಬಿಳಿಯಾಗಿ ಕಾಣಿಸಿಕೊಂಡಿದ್ದು, ಸ್ಥಳೀಯರು ಈ ದೃಶ್ಯವನ್ನು ಅಪರೂಪದ ಅನುಭವವಾಗಿ ಕಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಗಳು ಹೆಚ್ಚಿನ ಗಮನ ಸೆಳೆಯುತ್ತಿವೆ. ಹಲವರು ಆಲಿಕಲ್ಲುಗಳನ್ನು ಕೈಯಲ್ಲಿ ಹಿಡಿದು ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಕೆಲವೆಡೆ ಪ್ರದೇಶಗಳು ಸಂಪೂರ್ಣ ಬಿಳಿಯಾಗಿರುವ ದೃಶ್ಯಗಳು ಕಂಡುಬಂದಿವೆ.
ಮಳೆಯ ಪ್ರಮಾಣದ ದೃಷ್ಟಿಯಿಂದ ಹಾಸನ ಹಾಗೂ ರಾಮನಗರ ಜಿಲ್ಲೆಯ ಮಾಗಡಿ ಭಾಗಗಳಲ್ಲಿ ಹೆಚ್ಚು ಮಳೆಯಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ಹಾಗೂ ಧರ್ಮಸ್ಥಳದಲ್ಲೂ ಗಮನಾರ್ಹ ಮಳೆಯಾಗಿದೆ. ದಾವಣಗೆರೆ ನಗರದಲ್ಲೂ ಉತ್ತಮ ಮಳೆಯಾಗಿ, ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.
ಇದಲ್ಲದೆ ತುಮಕೂರು, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಒಟ್ಟಾರೆ ದಕ್ಷಿಣ ಭಾಗದಲ್ಲಿ ಮಳೆಯ ಪ್ರಭಾವ ಹೆಚ್ಚು ಕಂಡುಬಂದಿದ್ದು, ಉತ್ತರ ಭಾಗದಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ವರದಿಯಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಮಾರ್ಚ್ 23ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ವಿಶೇಷವಾಗಿ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಕೆಲವು ಕಡೆಗಳಲ್ಲಿ ಬಲವಾದ ಗಾಳಿಯೂ ಬೀಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ನೀಡಲಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಒಂದೆರಡು ಕಡೆ ಮಳೆಯಾಗಬಹುದು.
ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮಳೆಯ ನಿರೀಕ್ಷೆ ಇದ್ದರೂ, ವಿಜಯಪುರ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ ರಾಜ್ಯದಲ್ಲಿ ಮಿಶ್ರ ಹವಾಮಾನ ಕಂಡುಬರುತ್ತಿದ್ದು, ಕೆಲವೆಡೆ ಮಳೆಯ ಅಬ್ಬರ, ಇನ್ನೂ ಕೆಲವೆಡೆ ಬಿಸಿಲಿನ ತಾಪ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಮಳೆಯ ಚಟುವಟಿಕೆ ಇನ್ನಷ್ಟು ಚುರುಕಾಗುವ ಸಾಧ್ಯತೆ ಇದೆ.


Click it and Unblock the Notifications