ರಾಜ್ಯದಲ್ಲಿ ಚಳಿ (Cold) ತಕ್ಕಮಟ್ಟಿಗೆ ಕಡಿಮೆಯಾಗಿದೆ. ಆದರೆ ಚಳಿ ಕಮ್ಮಿಯಾಗುತ್ತಿದ್ದಂತೆ, ಬಿಸಿಲು ಹೆಚ್ಚಾಗುತ್ತಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಉಷ್ಣಾಂಶದಲ್ಲಿ ಏರಿಕೆ ಕಂಡುಬಂದಿದ್ದು, ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ರಾಜ್ಯದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ನಿಂದ 32 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಕರ್ನಾಟಕದಲ್ಲಿ ಸಾಮಾನ್ಯದಂತೆ ಇಂದೂ ಒಣ ಹವೆ ಇರಲಿದ್ದು, ಯಾವುದೇ ಮಳೆ ಎಚ್ಚರಿಕೆ ನೀಡಲಾಗಿಲ್ಲ. ಭಾರತೀಯ ಹವಾಮಾನ ಇಲಾಖೆ (IMD) ವರದಿ ಪ್ರಕಾರ, ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲದೇ ತಾಪಮಾನ ಕೂಡಾ ಮಧ್ಯಮ ಮಟ್ಟದಲ್ಲಿರಲಿದೆ.
ಬೇಸಿಗೆ ಆರಂಭ?
ಇದೀಗ ಬಿಸಿಲು ಹೆಚ್ಚಾದಂತೆ ಬೇಸಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಈ ಬಾರಿ ನಿರೀಕ್ಷೆಗೂ ಮೊದಲೇ ಬೇಸಿಗೆ ಆರಂಭವಾಗುವ ನಿರೀಕ್ಷೆಯಿದೆ. ಅಂದರೆ ಫೆಬ್ರವರಿ ಮೊದಲ ವಾರದಿಂದಲೇ ಬೇಸಿಗೆ ಆರಂಭವಾಗಬಹುದು. ದಕ್ಷಿಣ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಈ ಬಾರಿ ಬೇಸಿಗೆ ಭಾರೀ ಏರಿಕೆಯ ಮಟ್ಟ ತಲುಪಬಹುದು ಎಂದು ಹೇಳಲಾಗಿದೆ.
ಇನ್ನು ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಬೇಸಿಗೆ ಹೆಚ್ಚಾಗಿಯೇ ಇರುತ್ತದೆ. ಅದೇ ರೀತಿ ಈ ಬಾರಿ ಕೂಡಾ ತೇವಾಂಶ ಕೂಡಿದ ಸೆಖೆ ವಾತಾವರಣ ಕರಾವಳಿ ಜಿಲ್ಲೆಗಳಲ್ಲಿ ಇರುತ್ತದೆ. ಇನ್ನು ಚಳಿ ಮಾದರಿಯಲ್ಲೇ ಬೇಸಿಗೆ ಕೂಡಾ ಜನರ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದರಲ್ಲೂ ಕರ್ನಾಟಕದ ಉತ್ತರ ಒಳನಾಡು, ಮಲೆನಾಡು ಭಾಗಗಳಲ್ಲಿ ಮುಂದಿನ ಒಂದು ವಾರ ಒಣ ಹವೆ ಇರಲಿದೆ ಎಂದು ಹೇಳಲಾಗಿದೆ.
ಇಂದಿನ ಹವಾಮಾನ:
ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ತೀವ್ರ ಚಳಿ ಇರಲಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಒಣಹವೆ ಇರಲಿದೆ?
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ, ತುಮಕೂರು, ರಾಮನಗರ, ಚಿತ್ರದುರ್ಗ, ವಿಜಯನಗರ, ಮೈಸೂರು, ಚಿಕ್ಕಮಗಳೂರು, ಕೊಡಗು, ಕೋಲಾರ, ಬಳ್ಳಾರಿ, ಚಿಕ್ಕಬಳ್ಳಾಪುರ, ಮಂಡ್ಯ, ದಾವಣಗೆರೆ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲೂ ಒಣ ಹವೆ ಮುಂದುವರೆಯಲಿದೆ.
ಹಾಗೆಯೇ ಉತ್ತರ ಒಳನಾಡು ಜಿಲ್ಲೆಗಳಾದ ಬೀದರ್, ಬಾಗಲಕೋಟೆ, ಗದಗ, ಕಲಬುರಗಿ, ಬಳ್ಳಾರಿ, ಯಾದಗಿರಿ, ಬೆಳಗಾವಿ, ವಿಜಯಪುರ, ಹಾವೇರಿ, ಧಾರವಾಡ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಒಣ ಹವೆಯ ವಾತಾವರಣವಿದ್ದು, ಮುಂದಿನ ಕೆಲವು ದಿನಗಳವರೆಗೆ ಇದೇ ರೀತಿಯ ಹವಾಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಆದ್ದರಿಂದ ಚಳಿ ಪ್ರಮಾಣ ಇಂದು ಕಮ್ಮಿ ಇರಲಿದ್ದು, ಉಷ್ಣಾಂಶ ಹೆಚ್ಚಾಗಲಿದೆ.


Click it and Unblock the Notifications