ರಾಜ್ಯ ಮತ್ತು ರಾಷ್ಟ್ರದ ಬೊಕ್ಕಸ ತುಂಬಿಸುವ ಅತಿದೊಡ್ಡ ಸುಂಕ ಎಂದರೆ ಅಬಕಾರಿ ಸುಂಕ. ಅಂದರೆ ಮದ್ಯಗಳ ಮೇಲಿನ ಸುಂಕ. ಏಕೆಂದರೆ ಮದ್ಯದ ಬೆಲೆಯಲ್ಲಿ ಎಷ್ಟೇ ಏರಿಕೆ ಮಾಡಿದರೂ, ಮದ್ಯಪ್ರಿಯರ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂಬ ಮಾತಿತ್ತು. ಆದರೆ ಕರ್ನಾಟಕದಲ್ಲಿ ಈ ಮಾತು ಹುಸಿಯಾದಂತೆ ಕಾಣುತ್ತಿದೆ. ಏಕೆಂದರೆ ಉತ್ತಮ ಆದಾಯದ ನಿರೀಕ್ಷೆಯಲ್ಲಿ ಬಿಯರ್ ಬೆಲೆ ಏರಿಕೆ ಮಾಡಿದ ರಾಜ್ಯ ಸರ್ಕಾರಕ್ಕೆ, ಬಿಯರ್ ಪ್ರಿಯರು ನೀಡಿರುವ ರಿಸಲ್ಟ್ ಶಾಕ್ ತರಿಸಿದೆ. ಆದಾಯಕ್ಕಾಗಿ ಮಾಡಿದ ಬೆಲೆ ಏರಿಕೆ ಐಡಿಯಾ ಈಗ ಅಟ್ಟರ್ ಫ್ಲಾಪ್ ಆಗಿದೆ. ಅಂದರೆ ಹೆಚ್ಚು ಬೆಲೆ ಕೊಟ್ಟು ಬಿಯರ್ ಕುಡಿಯುವಂತದ್ದೇನು ಎಂದು ಅರಿತ ಗ್ರಾಹಕರು, ಬಿಯರ್ ಖರೀದಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಬಿಯರ್ ಮಾರಾಟದಲ್ಲಿ ಶೇ.16ರಷ್ಟು ಕುಸಿತ ಕಂಡುಬಂದಿದೆ.

ಕರ್ನಾಟಕದಲ್ಲಿ 2025ರ ಜನವರಿ 20ರಿಂದ ಹೆಚ್ಚುವರಿ ಅಬಕಾರಿ ಸುಂಕ ಜಾರಿಗೆ ಬಂದ ಕಾರಣ, ಪ್ರತಿ ಬಾಟಲ್ ಬಿಯರ್‍ಗೆ 10 ರೂ. ಇಂದ 50 ರೂ. ಹೆಚ್ಚಳ ಮಾಡಲಾಯ್ತು. ಅದರಲ್ಲೂ ಹೆಚ್ಚು ಆಲ್ಕೋಹಾಲ್ ಅಂಶ ಹೊಂದಿರುವ ಬಿಯರ್‍ಗಳಿಗೇ ಬೆಲೆ ಹೆಚ್ಚಾಗಿದೆ. ರಾಜ್ಯ ಸರ್ಕಾರದ ಈ ಒಂದು ನಿರ್ಧಾರದಿಂದ ಯುವಕರಲ್ಲಿ ಬಿಯರ್ ಸೇವನೆಯ ಆಸಕ್ತಿಯೇ ಕಡಿಮೆಯಾಗಿದೆ. ಇದರಿಂದಲೇ ಬಿಯರ್ ಮಾರಾಟದಲ್ಲಿ 16% ಇಳಿಕೆ ಕಂಡುಬಂದಿದೆ. ಇನ್ನು ಈ ಬೆಲೆ ಏರಿಕೆ ಯುವಕರ ಮೇಲೆ ಅತಿಹೆಚ್ಚು ಪರಿಣಾಮ ಬೀರಿದೆ.
ಇದರ ಜೊತೆ ಸರ್ಕಾರ ಬಿಯರ್ ಉತ್ಪಾದಕರಿಗೆ ಸಕ್ಕರೆ ಅಂಶವನ್ನು, 25% ಕ್ಕಿಂತ ಹೆಚ್ಚು ಬಳಸದಂತೆ ಆದೇಶಿಸಿದೆ. ಇದರಿಂದ ಬಿಯರ್ ಗುಣಮಟ್ಟದಲ್ಲೂ ಬದಲಾವಣೆ ಕಂಡುಬಂದಿದೆ. ಇದೆಲ್ಲ ರಾಜ್ಯದ ಆದಾಯವನ್ನು ಹೆಚ್ಚಿಸುವ ಉದ್ದೇಶವಾಗಿದ್ದರೆ, ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಆದಾಯ ತೂಗಿಸಲು ಕಸರತ್ತು ಮಾಡುವ ಜನರಿಗೆ ಬೆಲೆ ಏರಿಕೆಯಿಂದ ಕಂಗಾಲಾಗುವಂತಾಗಿದೆ. ಹೀಗಾಗಿಯೇ ಬಿಯರ್ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಇದು ಮದ್ಯ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ಇದಲ್ಲದೇ ಬಿಯರ್‍ನತ್ತ ಇದ್ದ ಆಸಕ್ತಿಯನ್ನು ತೊರೆದಿರುವ ಮದ್ಯಪ್ರಿಯರು ಬಿಯರ್ ಬಳಕೆಯನ್ನೇ ನಿಲ್ಲಿಸುವ ಸಾಧ್ಯತೆಯೂ ಹೆಚ್ಚಿದೆ. ಹೀಗಾಗಿಯೇ ಈ ಬಾರಿ ಅಬಕಾರಿ ಇಲಾಖೆ, ಪ್ರಸ್ತುತ ಹಣಕಾಸು ವರ್ಷದಲ್ಲಿ ಬಂದ ಮೊದಲ 9 ತಿಂಗಳ ಆದಾಯದಲ್ಲಿ ತನ್ನ ಗುರಿ ಮುಟ್ಟಲು ಫೇಲ್ ಆಗಿದೆ.
ಇನ್ನು ಬಜೆಟ್ ಮುಂಚಿತವಾಗಿ ಎದುರಾದ ಪರಿಸ್ಥಿತಿಗಳು ಬಿಯರ್ ಬೆಲೆ ಹೆಚ್ಚಿಸುವಂತೆ ಪ್ರೇರೇಪಿಸಿದವು. ಆದರೆ ಸರ್ಕಾರಕ್ಕೆ ತನ್ನ ನಿರ್ಧಾರವೇ ಕಹಿ ಫಲಿತಾಂಶ ನೀಡಿದೆ. ಅಲ್ಲದೇ ಬಿಯರ್ ಬೆಲೆ ಮಾತ್ರ ಏರಿಕೆಯಾಗುತ್ತಿದೆಯೇ ಹೊರತು, ಅದರ ಕಿಕ್‌ನಲ್ಲಿ ಯಾವುದೇ ಬದಲಾವಣೆಯಾಗುತ್ತಿಲ್ಲ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಅಬಕಾರಿ ಇಲಾಖೆ ಈ ಪರಿಸ್ಥಿತಿಯನ್ನು ನಿಯಂತ್ರಿಸಲು, ಆದಷ್ಟು ಬೇಗ ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.
ಕಳೆದ ವರ್ಷ ಜ.20-ಫೆ.20 ರವರೆಗೆ ಆದ ಬಿಯರ್ ಮಾರಾಟವೆಷ್ಟು..?
ಕಳೆದ ವರ್ಷದ ಜನವರಿ 20- ಫೆಬ್ರವರಿ 20 ರವರೆಗೆ ಆದ ಬಿಯರ್ ಮಾರಾಟಕ್ಕೆ ಹೋಲಿಸಿದರೆ, ಈ ವರ್ಷದಲ್ಲಿ ಅದೇ ಅವಧಿಯಲ್ಲಾದ ಬಿಯರ್ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಅಂದರೆ 2024 ರಲ್ಲಿ ಈ ಅವಧಿಯಲ್ಲಿ 287.63 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಆದರೆ ಈ ವರ್ಷ 2025 ರಲ್ಲಿ ಇದು 243 ಲಕ್ಷ ಲೀಟರ್ ಮಾರಾಟವಾಗಿದ್ದು, ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಇದು ಬೆಲೆ ಏರಿಕೆಯ ಪರಿಣಾಮ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿದೆ.
ಪ್ರಮುಖವಾಗಿ ಈ ಬಿಯರ್ ಮೇಲಿನ ಬೇಡಿಕೆಗಳು ಬಾರ್ ಹಾಗೂ ಸಣ್ಣ ಸಣ್ಣ ಮದ್ಯದ ಅಂಗಡಿಗಳ ಮೇಲೆ ಅತಿಹೆಚ್ಚು ನಕಾರಾತ್ಮಕ ಪರಿಣಾಮ ಬೀರಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದಿಂದ ಖರೀದಿ ಆದೇಶಗಳ ಸಂಖ್ಯೆಯಲ್ಲಿಯೂ ಕಡಿಮೆ ಉಂಟುಮಾಡಿದೆ. ಇದಕ್ಕೆ ವಿರುದ್ಧವಾಗಿ ದೇಶೀಯ ಮದ್ಯ ಮಾರಾಟವು ತುಲನಾತ್ಮಕವಾಗಿ ಸ್ಥಿರವಾಗಿದೆ. ಕಳೆದ ವರ್ಷ 4.97 ಕೋಟಿ ಲೀಟರ್ ಮಾರಾಟವಾಗಿದ್ದರೆ, ಈ ವರ್ಷ 4.64 ಕೋಟಿ ಲೀಟರ್ ಮಾರಾಟವಾಗಿದೆ, ಇದು ಸ್ವಲ್ಪ ಮಟ್ಟಿನ ಕುಸಿತವಾಗಿದೆ.
ಕಡಿಮೆ ಬೆಲೆಯ ಬ್ರಾಂಡ್‌ಗಳತ್ತ ಮುಖ ಮಾಡಿದ ಗ್ರಾಹಕರು:
ಈ ಬಿಯರ್ ಬೆಲೆ ಏರಿಕೆಯ ಬಿಸಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದರೆ, ಗ್ರಾಹಕರು ಕೈಗೆಟುಕುವಂತಹ ಬೆಲೆಯ ಅಗ್ಗದ ಬ್ರಾಂಡ್‌ಗಳಿಗೆ ಬದಲಾಗಿದ್ದಾರೆ. ಇದರಿಂದ ಪ್ರೀಮಿಯಂ ಬ್ರಾಂಡ್ ಬಿಯರ್‍ಗಳ ಬೇಡಿಕೆ ಕಡಿಮೆಯಾಗಿದ್ದು, ಕಡಿಮೆ ಬೆಲೆಯ ಬ್ರಾಂಡ್‌ಗಳು ಹೆಚ್ಚಾಗಿ ಮಾರಾಟವಾಗುತ್ತಿವೆ ಎನ್ನಲಾಗಿದೆ. ಈ ಕಡಿಮೆ ಬೆಲೆಯ ಬಿಯರ್‍ಗಳ ಗುಣಮಟ್ಟ ಕೂಡ ಬೆಲೆಯಷ್ಟೇ ಕಡಿಮೆಯಾಗಿರುತ್ತದೆ. ಆದರೂ ಗ್ರಾಹಕರು ಅದರ ಬಗ್ಗೆ ಯೋಚಿಸದೇ ಆದಾಯ ತೂಗಿಸುವಂತಹ ಬೆಲೆಯ ಬಿಯರ್‍ನೇ ಆರಿಸಿಕೊಳ್ಳುತ್ತಿದ್ದಾರೆ.
ಇದೆಲ್ಲದರ ಜೊತೆಗೆ ಬಿಯರ್ ಬೆಲೆಗೆ ಹಾಟ್ ಡ್ರಿಂಕ್ಸ್‌ಗಳೇ ದೊರೆಯುವಾಗ ಬಿಯರ್‍ನ ಕೊಳ್ಳುವ ಅಗತ್ಯವೇನು ಎಂಬ ಯೋಚನೆಗೆ ಮದ್ಯಪ್ರಿಯರು ಬಿದ್ದಿದ್ದಾರೆ. ಬೆಲೆ ಏರಿಕೆಯ ಬಿಸಿಯಲ್ಲಿರುವ ಮದ್ಯಪ್ರಿಯರು ತಮ್ಮ ಆಸಕ್ತಿಯನ್ನು ಬದಲಿಸಿಕೊಳ್ಳುತ್ತಿರುವುದು ಕೂಡ, ಬಿಯರ್ ಮಾರಾಟದ ಇಳಿಕೆಗೆ ಕಾರಣವಾಗಿರುವ ಸಾಧ್ಯತೆಯಿದೆ.


Click it and Unblock the Notifications