ಸಾಂಸ್ಕೃತಿಕ ನಗರಿ ಮೈಸೂರಿನನಲ್ಲಿ 'ಫಿಲ್ಮ್ ಸಿಟಿ' (Film City) ನಿರ್ಮಾಣದ ಕನಸು ಶೀಘ್ರದಲ್ಲೇ ನನಸಾಗಲಿದೆ.
ಹೌದು,ಮೈಸೂರಲ್ಲಿ 500 ಕೋಟಿ ವೆಚ್ಚದ ಚಿತ್ರನಗರಿ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಆದರೆ ರಾಜ್ಯದ ಮೊದಲ ಚಲನಚಿತ್ರ ನಗರಿಯ ಘೋಷಣೆ 45 ವರ್ಷಗಳ ಹಿಂದೆ ಪ್ರಸ್ತಾಪಿಸಿದರೂ ಇನ್ನೂ ಕಾಗದದಲ್ಲೇ ಉಳಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ 150 ಎಕರೆ ಭೂಮಿಯಲ್ಲಿ "ಅಂತರರಾಷ್ಟ್ರೀಯ ಮಟ್ಟದ" ಚಲನಚಿತ್ರ ನಗರವನ್ನು ನಿರ್ಮಿಸಲು ರಾಜ್ಯ ಬಜೆಟ್‌ನಲ್ಲಿ 500 ಕೋಟಿ ರೂ.ಗಳನ್ನು ಮಂಜೂರು ಮಾಡುವುದರೊಂದಿಗೆ ಮತ್ತೆ ಭರವಸೆಯನ್ನು ಮೂಡಿಸಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಇಮ್ಮಾವು ಎಂಬಲ್ಲಿ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಈಗಾಗಲೇ 110 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ನಾಲ್ಕು ತಿಂಗಳ ಹಿಂದೆ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಾರಂಭಿಸಿರುವ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ (ಡಿಐಪಿಆರ್) ಈಗಾಗಲೇ ಹಸ್ತಾಂತರಿಸಿದೆ.
ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಅಧಿಕಾರಿಗಳು ಅದರ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಟೆಂಡರ್ ಆಹ್ವಾನಿಸಿದ್ದಾರೆ. ಕೆಐಎಡಿಬಿ ಶೀಘ್ರದಲ್ಲೇ ಯೋಜನೆಗಾಗಿ ಇನ್ನೂ 40 ಎಕರೆ ಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿದೆ ಎಂದು ಡಿಐಪಿಆರ್‌ನ ಸಹಾಯಕ ನಿರ್ದೇಶಕ ಮತ್ತು ಯೋಜನೆಯ ನೋಡಲ್ ಅಧಿಕಾರಿ ಟಿ.ಕೆ. ಹರೀಶ್ ಮಾಹಿತಿಯನ್ನು ತಿಳಿಸಿದ್ದಾರೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ. ಚಲನಚಿತ್ರ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳೊಂದಿಗೆ ಚಿತ್ರೀಕರಣದಿಂದ ಅಂತಿಮ ಸಂಪಾದನೆಯವರೆಗೆ ಈ ಯೋಜನೆಯು ಒಂದೇ ತಾಣವಾಗುವಂತೆ ನೋಡಿಕೊಳ್ಳುವ ಚಿಂತನೆಗಳು ಆಗಿವೆ.
ಯೋಜನೆಯನ್ನು ಕೈಗೆತ್ತಿಕೊಳ್ಳಲು ವಿವರವಾದ ಯೋಜನಾ ವರದಿಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೈಗಾರಿಕಾ ನೀತಿಯಡಿ ಸಿನಿಮಾರಂಗ
ರಾಜ್ಯ ಸರ್ಕಾರವು ಕನ್ನಡ ಚಿತ್ರರಂಗವನ್ನು ಕೈಗಾರಿಕಾ ನೀತಿಯಡಿ ತರಲು ನಿರ್ಧರಿಸಿದೆ, ಇದರಿಂದ ಚಿತ್ರರಂಗಕ್ಕೆ ಕೈಗಾರಿಕಾ ಸೌಲಭ್ಯಗಳು ಲಭ್ಯವಾಗಲಿವೆಈ ಬಗ್ಗೆ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆಯನ್ನು ಸಹ ಮಾಡಿದ್ದಾರೆ. ಸಿನಿಮಾ ರಂಗವನ್ನು ಉದ್ಯಮ ಎಂದು ಪರಿಗಣಿಸಿ ಸರ್ಕಾರ ಘೋಷಣೆಯನ್ನು ಈಗಾಗಲೇ ಜಾರಿಯನ್ನು ಮಾಡಲಾಗಿದೆ.
ಏನಿದು ಫಿಲ್ಮ್ ಸಿಟಿ ಯೋಜನೆ ?
ಕರ್ನಾಟಕದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಯೋಜನೆ ಕನ್ನಡ ಚಿತ್ರರಂಗದ ಬಹುದಿನಗಳ ಕನಸು. ಈ ಯೋಜನೆಯು ಚಿತ್ರರಂಗದ ಚಿತ್ರೀಕರಣ ಅಗತ್ಯಗಳನ್ನು ಪೂರೈಸುವುದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.
ಮೈಸೂರಿನಲ್ಲಿ ಫಿಲ್ಮ್ ಸಿಟಿಯಲ್ಲಿ ಚಿತ್ರಮಂದಿರಗಳು, ಸ್ಟುಡಿಯೋಗಳು, ಮಲ್ಟಿಪ್ಲೆಕ್ಸ್‌ಗಳು, ಥೀಮ್ ಪಾರ್ಕ್‌ಗಳು ಮತ್ತು ಹೋಟೆಲ್‌ಗಳು ನಿರ್ಮಾಣವಾಗಲಿವೆ. ಈ ಯೋಜನೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ಜಾಗ ಗುರುತಿಸಲಾಗಿದ್ದು, ಭೂಮಿ ಹಸ್ತಾಂತರ ಮತ್ತು ಯೋಜನೆ ಅನುಷ್ಠಾನದ ಕುರಿತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಯೋಜನೆ ಚಿತ್ರರಂಗದ ಅಭಿವೃದ್ಧಿಗೆ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗಲಿದೆ.
ಹಿಂದಿ ಹಾಗೂ ತೆಲುಗು ಚಿತ್ರರಂಗಗಳಿಗೆ ಇರುವ ಮಾದರಿಯಲ್ಲೇ ಕನ್ನಡ ಚಿತ್ರರಂಗಕ್ಕೂ ಫಿಲ್ಮ್ ಸಿಟಿ ನಿರ್ಮಾಣವಾಗಬೇಕು ಎನ್ನುವುದು ಕನ್ನಡ ಚಿತ್ರರಂಗದ ಬಹುದಿನಗಳ ಕನಸು.ಆದರೆ, ಈ ವಿಷಯ ಚರ್ಚೆಯ ಮುನ್ನೆಲೆಗೆ ಬಂದಷ್ಟು ಮತ್ತೆ ಹಿನ್ನಡೆ ಅನುಭವಿಸಿದ್ದೇ ಹೆಚ್ಚಾಗಿದೆ.
ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಲಿದೆ ಎನ್ನುವ ವೇಳೆಯಲ್ಲಿ ಪರ - ವಿರೋಧ ಚರ್ಚೆಗಳು ನಡೆದಿದ್ದವು. ಚಿತ್ರನಗರಿಯನ್ನು ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಇಲ್ಲವೇ ರಾಮನಗರದಲ್ಲಿ ನಿರ್ಮಾಣ ಮಾಡಬೇಕು ಎನ್ನುವ ವಿಚಾರವು ಸಹ ಚರ್ಚೆಯಾಗುತ್ತಲೇ ಇತ್ತು. ಇವೆಲ್ಲಾ ಅಡೆತಡೆಗಳ ನಡುವೆಯೂ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವಾಗಲು ಸಜ್ಜಾಗುತ್ತಿದೆ ಶೀಘ್ರದಲ್ಲೇ ಫಿಲಂ ಸಿಟಿ ನಿರ್ಮಾಣವಾಗುತ್ತದೆ.


Click it and Unblock the Notifications