ನವದೆಹಲಿ, ಮಾರ್ಚ್ 30: ಸ್ವಂತ ಮನೆ ಅಥವಾ ತನ್ನದೆಂಬ ಸ್ಥಳ ಮೊದಲೇ ಇಲ್ಲ. ತನ್ನ ತಾಯಿ ಹಾಗೂ ಇತರ ಸಂಬಂಧಿಕರೊಂದಿಗೆ ವಾಸ್ತವ್ಯ ಜೀವನೋಪಾಯಕ್ಕಾಗಿ ಟಿಪ್ಪರ್ ಲಾರಿ ಮತ್ತು ಆಟೋ ರಿಕ್ಷಾ ಚಾಲನೆಯನ್ನೇ ನಂಬಿಕೊಂಡಿದ್ದ ಕಣ್ಣೂರು ಮೂಲದ ಅಳಕೋಡು ಮೂಲದ 44 ಹರೆಯದ ನಾಸರ್ ಗೆ ಏಕಾಏಕಿ 10 ಕೋಟಿ ರೂ.ಗಳ ಬಂಪರ್ ಲಾಟರಿ ಒಲಿದರೆ ಹೇಗಾಗಿರಬೇಡ ಹೇಳಿ!
ತಾಯಿ ಮರಿಯಮ್, ಅನಾರೋಗ್ಯ ಪೀಡಿತ ಚಿಕ್ಕಮ್ಮ ಮತ್ತು ಇತರ ಸಂಬಂಧಿಕರೊಂದಿಗೆ ವಾಸಿಸುತ್ತ 7ನೇ ತರಗತಿ ಓದಿದ್ದ ನಾಸರ್ ಕಾರ್ತಿಕಪುರಂ ಪಟ್ಟಣದಲ್ಲಿ ಜೀವನೋಪಾಯಕ್ಕಾಗಿ ಟಿಪ್ಪರ್ ಲಾರಿ ಮತ್ತು ಆಟೋ ರಿಕ್ಷಾಗಳನ್ನು ಓಡಿಸುತ್ತಿದ್ದರು. ಆದರೆ ಇದೀಗ ಅನಿರೀಕ್ಷಿತವಾಗಿ ಅದೃಷ್ಟ ಒಲಿದುಬಂದಿದೆ.

ಮಾ.27 ರಂದು ಮಧ್ಯಾಹ್ನ 2 ಗಂಟೆಗೆ ಕೇರಳ ಸರ್ಕಾರದ ಬೇಸಿಗೆ ಬಂಪರ್ ಲಾಟರಿ ಡ್ರಾ ನಡೆದಿತ್ತು. 10 ಕೋಟಿಯ ಈ ಅದೃಷ್ಟಕ್ಕಾಗಿ ಕೇರಳವೇ ಕಾದು ಕುಳಿತಿತ್ತು. ಬಂಪರ್ ಲಾಟರಿ ಎಸ್ಸಿ 308797 ನಂಬರ್ ಒಲಿದುಬಂದಿತ್ತು. ತಕ್ಷಣ ಟಿಕೆಟ್ ಖರೀದಿದಾರರ ಹುಡುಕಾಟ ಮುಂದುವರಿದಿತ್ತು. ಟಿಕೆಟ್ ಅನ್ನು ಕಣ್ಣೂರು ಕಡೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿತ್ತು. ಆದರೆ ಈ ಅದೃಷ್ಟ ನಾಸರ್ ಗೆ ಒಲಿದುಬಂದಿತ್ತು.
ಕಾರ್ತಿಕಪುರದ ರಾಜರಾಜೇಶ್ವರಿ ಲಾಟರಿ ಏಜೆನ್ಸಿಯಲ್ಲಿ ಮಾರಾಟವಾದ ಲಾಟರಿಯನ್ನು ಏಜೆಂಟ್ ರಾಜು ಅವರ ಬಳಿಯಿಂದ ಆಟೋ ಚಾಲಕ ನಾಸರ್ ಖರೀದಿಸಿದ್ದರು, ಅದು ಡ್ರಾ ಆಗೋ ಹಿಂದಿನ ದಿನ ರಾತ್ರಿ ವೇಳೆ ಖರೀದಿಸಿದ್ದರು. ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ನಾಸರ್ "ನಿನ್ನೆ 6 ಗಂಟೆಗೆ ಇಲ್ಲಿಗೆ ಬಂದಿದ್ದೆ . ಆ ಸಮಯಕ್ಕೆ SC 308797 ಲಾಟರಿ ಟಿಕೆಟ್ ನಾನು ನೋಡಿದ್ದೆ. ಆದರೆ ಯಾಕೋ ಖರೀದಿ ಬೇಡವೆಂದು ಸುಮ್ಮನಾಗಿ ವಾಪಾಸ್ ತೆರಳಿದ್ದೆ . ಮತ್ತೆ ಸುಮಾರು 7:30 ಕ್ಕೆ ಹಿಂತಿರುಗಿದಾಗ ಆ ಲಾಟರಿ ಟಿಕೆಟ್ ಹಾಗೇ ಇತ್ತು. ಯಾಕೆ ಯಾರು ಖರೀದಿಸಿಲ್ಲವೇ ಎಂದು ಏಜೆಂಟ್ ರಾಜು ಅವರೊಂದಿಗೆ ಹಾಸ್ಯ ಚಟಾಕಿ ಹಾರಿಸಿ ಟಿಕೆಟ್ ಖರೀದಿಸಿದ್ದೆ. ದೇವರ ಆಟವಿದು ಆ ಟಿಕೆಟ್ ನನಗಾಗಿಯೇ ಕಾದು ಕುಳಿತಿತ್ತು" ಎಂದು ನಾಸರ್ ಹೇಳಿದ್ದಾರೆ.
ತಮಗೆ ದೊರಕಿದ ಹಣದಲ್ಲಿ ಕಷ್ಟಪಡುವ ಇತರರಿಗೆ ಸಹಾಯ ಮಾಡಲು ಬಯಸುತ್ತೇನೆ ಎನ್ನುವ ನಾಸರ್ ತಮಗೊಂದು ಸ್ವಂತ ಮನೆಯನ್ನು ನಿರ್ಮಿಸಲು ಬಯಸಿದ್ದಾರೆ . ತನ್ನ ಚಿಕ್ಕಮ್ಮನ ಕಾಯಿಲೆಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಬೇಕು ಎನ್ನುವ ಆಸೆಯೂ ನಾಸರ್ ಅವರದ್ದು.
ನಾಸರ್ ಅವರ ತಂದೆ ಸುಲೈಮಾನ್ ಆರು ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಪುತ್ರ ನಿಸ್ಸಾರ್ ಕೋಝಿಕ್ಕೋಡ್‌ನಲ್ಲಿ ಧಾರ್ಮಿಕ ಶಿಕ್ಷಣವನ್ನು ಕಲಿಯುತ್ತಿದ್ದು, ಮಗಳು ನಾಸಿಲ್ ಚಪ್ಪರಪದವು ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ.
ಕೇರಳ ಸರ್ಕಾರದ ಈ ವರ್ಷದ ಬೇಸಿಗೆ ಬಂಪರ್ ಲಾಟರಿ ಅತ್ಯುತ್ತಮ ಟಿಕೆಟ್ ಮಾರಾಟವನ್ನು ಕಂಡಿದ್ದು, 36 ಲಕ್ಷ ಮುದ್ರಿತ ಟಿಕೆಟ್‌ಗಳಲ್ಲಿ 33.5 ಲಕ್ಷ ಮಾರಾಟವಾಗಿದೆ. ಕಳೆದ ವರ್ಷದ ಅಂಕಿಅಂಶಗಳಿಗಿಂತ ಮೂರೂವರೆ ಪಟ್ಟು ಹೆಚ್ಚಾಗಿದೆ. ಇದರ ಪ್ರತಿ ಟಿಕೆಟ್ ದರ 250 ರೂ ಆಗಿತ್ತು.
ಇನ್ನು ಕೇರಳದ ವಿಷು ಬಂಪರ್ ಲಾಟರಿ ಟಿಕೆಟ್ ಗುರುವಾರ ಬಿಡುಗಡೆಯಾಗಿದ್ದು ಮೊದಲ ಬಹುಮಾನ 12 ಕೋಟಿ ರೂ. ಆಗಿದೆ. ಇದತ ಡ್ರಾ ಮೇ 29 ರಂದು ನಡೆಯಲಿದ್ದು, ಪ್ರತಿ ಟಿಕೆಟ್ ದರ 300 ರೂ. ಆಗಿದೆ. ವಿಷು ಬಂಪರ್‌ನಲ್ಲಿ ತಲಾ 1 ಕೋಟಿ ರೂಪಾಯಿಗಳ ಆರು ದ್ವಿತೀಯ ಬಹುಮಾನಗಳು ಮತ್ತು ತಲಾ 10 ಲಕ್ಷ ರೂಪಾಯಿಗಳ ಆರು ತೃತೀಯ ಬಹುಮಾನಗಳು ಇರಲಿದೆ.


Click it and Unblock the Notifications