ಯುಎಇಯಲ್ಲಿ ಬಿಗ್ ಟಿಕೆಟ್ ಅಬುಧಾಬಿ ಸಾಪ್ತಾಹಿಕ ಡ್ರಾ ನಡೆದಿದ್ದು, ಇದರಲ್ಲಿ ಭಾರತದ ಕೇರಳದಿಂದ ಹೋಗಿರುವ ವಲಸಿಗರೊಬ್ಬರು ಬಂಪರ್ ಬಹುಮಾನವನ್ನು ಗೆದ್ದಿದ್ದಾರೆ. 15 ಮಿಲಿಯನ್ ದಿರ್ಹಮ್‌ಗಳನ್ನು (ಅಂದಾಜು ₹ 33 ಕೋಟಿ) ಗೆದ್ದ ನಂತರ, ಯುಎಇಯಲ್ಲಿ ನೆಲೆಸಿರುವ ಭಾರತೀಯ ವಲಸಿಗ ರಾಜೀವ್ ಅರಿಕ್ಕಾಟ್‌ಗೆ ಎಲ್ಲಿಲ್ಲದ ಸಂತೋಷವಾಗಿದೆ.
ಖಲೀಜ್ ಟೈಮ್ಸ್ ಪ್ರಕಾರ, ರಾಫೆಲ್ ಡ್ರಾ ಸಂಖ್ಯೆ 260 ರ ಸಮಯದಲ್ಲಿ ರಾಜೀವ್ ವಿಜೇತ ಟಿಕೆಟ್, ಸಂಖ್ಯೆ 037130 ಅನ್ನು ಉಚಿತವಾಗಿ ಪಡೆದಿದ್ದಾರೆ. ಈ ಟಿಕೆಟ್ ರಾಜೀವ್ ಜೀವನವನ್ನೇ ಬದಲಾವಣೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ಬಿಗ್ ಟಿಕೆಟ್ ಡ್ರಾಗಳಲ್ಲಿ ಭಾಗವಹಿಸುತ್ತಿರುವ ರಾಜೀವ್ ಕೊನೆಗೂ ಈ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ರಾಜೀವ್ ಪ್ರಸ್ತುತ ಅಲ್ ಐನ್‌ನಲ್ಲಿರುವ ಆರ್ಕಿಟೆಕ್ಚರಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತನ್ನ ಹೆಂಡತಿ ಮತ್ತು ಐದು ಮತ್ತು ಎಂಟು ವರ್ಷದ ಇಬ್ಬರು ಚಿಕ್ಕ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ತನ್ನ ಪ್ರೀತಿಯ ಮಕ್ಕಳ ಜನ್ಮದಿನದ ನಂಬರ್‌ನಲ್ಲಿ ಟಿಕೆಟ್ ಪಡೆದಿದ್ದು, ಆ ಟಿಕೆಟ್‌ಗಳಿಗೆಯೇ ಬಹುಮಾನ ಬಂದಿದೆ.
ಲಾಟರಿ ಟಿಕೆಟ್‌ನಲ್ಲಿ ತಾನು ವಿಜೇತ ಎನ್ನುವುದನ್ನು ಇನ್ನೂ ಅರಗಿಸಿಕೊಳ್ಳಲು ರಾಜೀವ್‌ಗೆ ಸಾಧ್ಯವಾಗಿಲ್ಲ. ಆದ್ದರಿಂದಾಗಿ ಈ ಮೊತ್ತವನ್ನು ಯಾವುದಕ್ಕೆ ಖರ್ಚು ಮಾಡುವುದು ಎಂದು ಇನ್ನೂ ಕೂಡಾ ನಿರ್ಧಾರವನ್ನು ಮಾಡಿಲ್ಲ. ಬಹುಮಾನದ ಹಣವನ್ನು ಇತರ 19 ಜನರಿಗೆ ಸಮಾನವಾಗಿ ಹಂಚಿಕೊಳ್ಳಲು ರಾಜೀವ್ ಮುಂದಾಗಿದ್ದಾರೆ. ಈ ಉದಾರ ನಿರ್ಧಾರವು ಅವರ ಗೆಲುವಿನ ಸಂತೋಷವನ್ನು ದುಪ್ಪಟ್ಟು ಮಾಡಿದ್ದಂತಾಗಿದೆ.
"ನಾನು 10 ವರ್ಷಗಳಿಂದ ಅಲ್ ಐನ್‌ನಲ್ಲಿ ವಾಸಿಸುತ್ತಿದ್ದೇನೆ. ನಾನು ಕಳೆದ 3 ವರ್ಷಗಳಿಂದ ಟಿಕೆಟ್‌ಗಳನ್ನು ಖರೀದಿಸುತ್ತಿದ್ದೇನೆ. ನಾನು ಲಾಟರಿ ಗೆದ್ದಿರುವುದು ಇದೇ ಮೊದಲ ಬಾರಿಗೆ. ಈ ಬಾರಿ ನಾನು ಮತ್ತು ನನ್ನ ಹೆಂಡತಿ 7 ಮತ್ತು 13 ಸಂಖ್ಯೆಗಳ ಟಿಕೆಟ್‌ಗಳನ್ನು ಆಯ್ಕೆ ಮಾಡಿದ್ದೇವೆ. ಇದು ನಮ್ಮ ಮಕ್ಕಳ ಜನ್ಮ ದಿನಾಂಕಗಳಾಗಿವೆ. ಎರಡು ತಿಂಗಳ ಹಿಂದೆ ನಾನು ಇದೇ ರೀತಿಯ ಸಂಖ್ಯೆಯ ಟಿಕೆಟ್ ಪಡೆದಿದ್ದೆ. ಆಗ ಬಹುಮಾನ ಲಭ್ಯವಾಗಿಲ್ಲ. ಆದರೆ ಈಗ ಅದೃಷ್ಟ ನನ್ನ ವಶವಾಗಿದೆ," ಎಂದು ರಾಜೀವ್ ಖರೀದಿಸಿದ ಟಿಕೆಟ್ ಬಗ್ಗೆ ಜನವರಿ 11 ರಂದು ಖಲೀಜ್ ಟೈಮ್ಸ್‌ಗೆ ತಿಳಿಸಿದರು.
ಕೇರಳದ 40 ವರ್ಷದ ವ್ಯಕ್ತಿ ಗೆಲ್ಲುವ ಭರವಸೆಯನ್ನು ಹೊಂದಿದ್ದರು, ಅವರು ಡ್ರಾಗಾಗಿ ಒಟ್ಟು ಆರು ಟಿಕೆಟ್‌ಗಳನ್ನು ಹೊಂದಿದ್ದರು. ಅಚ್ಚರಿ ಎಂದರೆ ಕಾಂಪ್ಲಿಮೆಂಟರಿ ಟಿಕೆಟ್ ಅವರ ಗೆಲುವನ್ನು ಖಾತ್ರಿಪಡಿಸಿದೆ. "ನಾನು ಬಿಗ್ ಟಿಕೆಟ್‌ನಿಂದ ವಿಶೇಷ ಕೊಡುಗೆಯನ್ನು ಪಡೆದುಕೊಂಡಿದ್ದೇನೆ, ಆದರೆ ನಾನು ಎರಡನ್ನು ಖರೀದಿಸಿದಾಗ ನಾನು ನಾಲ್ಕು ಟಿಕೆಟ್‌ಗಳನ್ನು ಉಚಿತವಾಗಿ ಪಡೆದುಕೊಂಡಿದ್ದೇನೆ. ನಾನು ಯಾವಾಗಲೂ ಗೆಲ್ಲುವ ಭರವಸೆ ಹೊಂದಿದ್ದರೂ, ಈ ಬಾರಿ ಡ್ರಾದಲ್ಲಿ ಆರು ಟಿಕೆಟ್‌ಗಳೊಂದಿಗೆ ನಿರೀಕ್ಷೆಗಳು ಹೆಚ್ಚಾಗಿವೆ," ಎಂದಿದ್ದಾರೆ.


Click it and Unblock the Notifications