ಬೆಂಗಳೂರು, ಫೆಬ್ರವರಿ 9: ಸತ್ಯ ನಾಡೆಲ್ಲಾ ಜಾಗತಿಕವಾಗಿ ಪ್ರಸಿದ್ದಿ ಹೊಂದಿರುವ ಭಾರತೀಯ ಮೂಲದ ಸಿಇಒಗಳಲ್ಲಿ ಒಬ್ಬರು. ಇವರು ಪ್ರಸ್ತುತ ವಿಶ್ವದ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಮೈಕ್ರೋಸಾಫ್ಟ್ ಅನ್ನು ಮುನ್ನಡೆಸುತ್ತಿದ್ದಾರೆ. ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯತ್ತ ವಿಶೇಷ ಗಮನ ಹರಿಸುವುದರೊಂದಿಗೆ ಮತ್ತು ಭಾರತೀಯ ಡೆವಲಪರ್‌ಗಳಿಗೆ AI ಉತ್ಪನ್ನಗಳನ್ನು ನಿರ್ಮಿಸಲು ಸಹಾಯ ಮಾಡುವ ಗುರಿಯೊಂದಿಗೆ, ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ನ ಸಿಇಒ ಸತ್ಯ ಸತ್ಯ ನಾಡೆಲ್ಲಾ ಈಗ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ್ಯಂತ ಟ್ರೆಂಡ್ ಆಗಿದ್ದಾರೆ.
ಸತ್ಯ ನಾಡೆಲ್ಲಾ 1992ರಲ್ಲಿ ಮೈಕ್ರೋಸಾಫ್ಟ್ ಗೆ ಸೇರ್ಪಡೆಗೊಂಡಿದ್ದು, ಇದಾದ ಒಂದೇ ವರ್ಷದಲ್ಲಿಅವರು ಅನುಪಮಾ ಅವರನ್ನು ವಿವಾಹವಾದರು. ಅನುಪಮಾ ನಾಡೆಲ್ಲಾ ಐಎಎಸ್ ಅಧಿಕಾರಿಯ ಮಗಳಾಗಿದ್ದಾರೆ. ಅನುಪಮಾ ಅವರ ತಂದೆಯೂ, ಸತ್ಯ ನಾಡೆಲ್ಲಾ ಅವರ ತಂದೆಯ ಐಎಎಸ್ ಬ್ಯಾಚ್‌ಮೇಟ್ ಎಂದು ವರದಿಯಾಗಿದೆ. ಅನುಪಮಾ ಅವರು ವಿಶ್ವದ ಅತ್ಯಂತ ಪ್ರಸಿದ್ಧ ವ್ಯಕ್ತಿಯನ್ನು ಮದುವೆಯಾಗಿದ್ದರೂ, ಹೆಚ್ಚು ಪ್ರಚಾರ ಬಯಸದೇ ಖಾಸಗಿತನಕ್ಕೆ ಹೆಚ್ಚು ಒತ್ತು ನೀಡುತ್ತಾರೆ.

ಸತ್ಯ ನಾಡೆಲ್ಲಾ ಅವರು ಅನುಪಮಾ ನಾಡೆಲ್ಲಾಳನ್ನು ಮದುವೆಯಾದಾಗ, ಸತ್ಯ ನಾಡೆಲ್ಲಾ ಆಗಲೇ ಅಮೇರಿಕಾದ ಖಾಯಂ ನಿವಾಸಿಯಾಗಿದ್ದರು. ಸತ್ಯ ಅವರು ಗ್ರೀನ್ ಕಾರ್ಡ್ ಹೊಂದಿದ್ದರೂ, ಅನುಪಮಾ ಅವರ ವೀಸಾ ಅರ್ಜಿಯನ್ನು ಯುಎಸ್ ತಿರಸ್ಕರಿಸಿತ್ತು. ಹೀಗಾಗಿ ಸತ್ಯ ದಂಪತಿಗಳು ಪ್ರವಾಸಿ ವೀಸಾ ಪಡೆದು ಸ್ವಲ್ಪ ಸಮಯ ಮಾತ್ರ ಜೊತೆಯಾಗಿ ಇರುತ್ತಾರೆ. ಕೊನೆಗೆ ಅನುಪಮಾಗೆ ಅಮೇರಿಕಾಕ್ಕೆ ಪ್ರಯಾಣಿಸಲು ಸುಲಭವಾಗುವಂತೆ, ಸತ್ಯ ನಾಡೆಲ್ಲಾ ತಮ್ಮ ಗ್ರೀನ್ ಕಾರ್ಡ್ ಅನ್ನು ತ್ಯಜಿಸಿ H-1B ವೀಸಾವನ್ನು ಪಡೆದು ಇಮಿಗ್ರೇಷನ್ ಕಿರಿಕಿರಿಯಿಂದ ಮುಕ್ತರಾಗುತ್ತಾರೆ.
ವರದಿ ಪ್ರಕಾರ , ಅನು ಎಂದು ಹೆಚ್ಚಾಗಿ ಕರೆಯಲ್ಪಡುವ ಅನುಪಮಾ ನವದೆಹಲಿಯಲ್ಲಿ ಐಎಎಸ್ ಅಧಿಕಾರಿ ಕೆಆರ್ ವೇಣುಗೋಪಾಲ್ ಅವರ ಮಗಳಾಗಿ ಜನಿಸಿದ್ದು, ಹೈದರಾಬಾದ್‌ನಲ್ಲಿ ತಮ್ಮ ಶಿಕ್ಷಣವನ್ನು ಪಡೆದು ನಂತರ ಮಣಿಪಾಲ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್ ವಿಷಯದಲ್ಲಿ ಪದವೀಧರರಾಗಿದ್ದಾರೆ. ಇವರ ಪತಿ ಸತ್ಯ ತಮ್ಮ ಕೆಲಸ ಮತ್ತು ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದರೂ, ಅನುಪಮಾ ಅವರು ತಾವು ಗೃಹಿಣಿಯಾಗಿರಲು ಆದ್ಯತೆ ನೀಡಿ, ಮಕ್ಕಳನ್ನು ಬೆಳೆಸಲು ಅದರಲ್ಲಿಯೇ ತಮ್ಮನ್ನು ತಾನು ಅರ್ಪಿಸಿಕೊಳ್ಳಲು ತಮ್ಮ ವೃತ್ತಿಪರ ವೃತ್ತಿಜೀವನವನ್ನು ತ್ಯಜಿಸಿದರು.
ವಾಷಿಂಗ್ಟನ್ ನ ಬೆಲ್ಲಿವ್ಯೂನಲ್ಲಿ ನೆಲೆಸಿರುವ ಸತ್ಯ ನಾಡೆಲ್ಲಾ ದಂಪತಿಗಳಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, 2022 ರಲ್ಲಿ ಅವರ 26 ವರ್ಷದ ಮಗ ಝೈನ್ ಸಾವನ್ನಪ್ಪಿದರು. ಅವರ ಪುತ್ರ ಹುಟ್ಟಿನಿಂದಲೂ ಸೆರೆಬ್ರಲ್ ಪಾಲ್ಸಿ(ಮೆದುಳಿನ ಅಸಹಜ ಬೆಳವಣಿಗೆ)ಬಳಲುತ್ತಿದ್ದರು. ಪುತ್ರ ಸಾವು ದಂಪತಿಗಳಿಗೆ ತೀವ್ರ ನೋವುಕೊಟ್ಟಿತ್ತು. ಅವರ ಪುತ್ರನಿಗೆ ಚಿಕಿತ್ಸೆ ನೀಡಲಾಗುತ್ತಿದ್ದ ಸಿಯಾಟಲ್ ಚಿಲ್ಡ್ರನ್'ಸ್ ಹಾಸ್ಪಿಟಲ್ ಜೊತೆ ನಿಕಟ ಸಂಬಂಧ ಹೊಂದಿರುವ ಅನುಪಮಾ ಮಕ್ಕಳ ಆರೋಗ್ಯ ಸುಧಾರಿಸಲು, ನರವಿಜ್ಞಾನ ಮತ್ತು ಯುವ ಮಾನಸಿಕ ಆರೋಗ್ಯ ರಕ್ಷಣೆಗೆಗಾಗಿ ದೇಣಿಗೆ ನೀಡುತ್ತಾ, ಕ್ಲಿನಿಕಲ್ ಪ್ರಯೋಗ ಸಂಶೋಧನೆಯನ್ನು ಮುನ್ನಡೆಸಲು ಸಹಾಯ ಮಾಡುತ್ತಾರೆ.
ಮಾತ್ರವಲ್ಲದೇ ಅನುಪಮಾ ಅವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರೈತರು ಮತ್ತು ಮಹಿಳೆಯರ ಜೀವನೋಪಾಯಕ್ಕಾಗಿ ಅವರು 2 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಭಾರತದಲ್ಲಿ ಕೋವಿಡ್ -19 ಕಾಲಘಟ್ಟದಲ್ಲಿ ಪ್ರಧಾನಿ ಪರಿಹಾರ ನಿಧಿಗೆ ಅನುಪಮಾ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಆರ್ಥಿಕ ವರ್ಷ 2021-2022 ರಲ್ಲಿ, ಸತ್ಯ ನಾಡೆಲ್ಲಾ ಅವರ ವಾರ್ಷಿಕ ಕಂಪೆನ್ಸಷನ್ 54.9 ಮಿಲಿಯನ್ ಡಾಲರ್ ಆಗಿದ್ದು, ಅವರು ವರ್ಷಕ್ಕೆ ಸುಮಾರು 49 ಮಿಲಿಯನ್ ಡಾಲರ್ ಅಂದರೆ 450 ಕೋಟಿ ರೂ. ಗಳಿಸುತ್ತಿದ್ದರು. ಸತ್ಯ ನಾಡೆಲ್ಲಾ ಅವರ ಆಸ್ತಿ ಮೌಲ್ಯವು 6200 ಕೋಟಿ ರೂ. ಆಗಿದೆ.


Click it and Unblock the Notifications