ತಿರುವನಂತಪುರಂ, ಅ. 23: ಅಡುಗೆ ಬಲ್ಲವರಿಗೆ ಯಾವತ್ತಿದ್ದರೂ ಬೇಡಿಕೆ ಇದ್ದೇ ಇದೆ. ಹೋಟೆಲ್ ಉದ್ಯಮದಲ್ಲಿ ಬಾಣಸಿಗ ಅಥವಾ ಚೆಫ್‌ಗಳಿಗೆ ಬಹಳ ಪ್ರಾಶಸ್ತ್ಯ. ಆದರೆ, ಬಹಳ ಸ್ವಾದಿಷ್ಟವಾಗಿ ಅಡುಗೆ ಮಾಡುವ ಬಾಣಸಿಗರು ಸ್ವಂತವಾಗಿ ರೆಸ್ಟೋರೆಂಟ್ ಮಾಡಬೇಕೆಂದರೆ ಬಂಡವಾಳದ ಸಮಸ್ಯೆ. ಹೀಗಾಗಿ, ಬೇರೆಯವರಿಗೆ ಚಾಕರಿಕೆ ಮಾಡುತ್ತಾ ತಮ್ಮ ಆಸೆ ತೀರಿಸಿಕೊಳ್ಳಬೇಕು. ಆದರೆ ಕೇರಳದ ವೆಂಡಿಗೋ ಎಂಬ ಕಂಪನಿ ಬಾಣಸಿಗರಿಗೆ ಉದ್ಯಮಿಗಳಾಗುವ ಅವಕಾಶ ಕಲ್ಪಿಸಿದೆ.
ಅಡುಗೆಯಲ್ಲಿ ಆಸಕ್ತಿ ಇರುವ ಯಾರು ಬೇಕಾದರೂ ಯಾವ ಬಂಡವಾಳ ಇಲ್ಲದೇ ಉದ್ಯಮಿಗಳಾಗಲು ತಮ್ಮ ಕಂಪನಿ ನೆರವಾಗುತ್ತದೆ ಎಂದು ವೆಂಡಿಗೋ ಸಂಸ್ಥೆ ಹೇಳಿದೆ.
ಅಂದಹಾಗೆ, ವೆಂಡಿಗೋ ಒಂದು ಇಕಾಮರ್ಸ್ ಪೋರ್ಟಲ್ ಆಗಿದ್ದು, ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಇತ್ತೀಚೆಗೆ ಫುಡ್ ಡೆಲಿವರಿ ಸೇವೆ ಆರಂಭಿಸುತ್ತಿದೆ. ಸ್ವಿಗ್ಗಿ, ಜೊಮಾಟೋಗಿಂತಲೂ ವಿಭಿನ್ನ ಮಾದರಿಯ ಸೇವೆಯನ್ನು ವೆಂಡಿಗೊ ನೀಡುತ್ತದೆ. ಗ್ರಾಹಕರು ಒಂದಕ್ಕಿಂತ ಹೆಚ್ಚು ರೆಸ್ಟೋರೆಂಟ್‌ಗಳಿಂದ ಬೇರೆ ಬೇರೆ ಆಹಾರಗಳನ್ನು ಬುಕ್ ಮಾಡಿ ಒಂದೇ ಬಿಲ್‌ನಲ್ಲಿ ಒಮ್ಮೆಗೇ ಡೆಲಿವರಿ ಪಡೆಯಬಹುದು.

ಮನೋಜ್ ಡೇದನ್, ಅನೀಶ್ ಸುಹೇಲ್ ಮತ್ತು ಕಿರಣ್ ಕರುಣಾಕರನ್ ಈ ಹೊಸ ಸ್ಟಾರ್ಟಪ್‌ನ ಸಂಸ್ಥಾಪಕರು. ಇ-ಕಾಮರ್ಸ್ ವಲಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ಕಿರಣ್ ಕರುಣಾಕರನ್ ಈ ಸ್ಟಾರ್ಟಪ್‌ಗೆ ಹೂಡಿಕೆದಾರರೂ ಹೌದು.
ಬೇರೆ ಬೇರೆ ರೆಸ್ಟೋರೆಂಟ್‌ಗಳ ಜೊತೆ ಟೈಯಪ್ ಮಾಡಿಕೊಳ್ಳುವುದರ ಜೊತೆ ವೆಂಡಿಕೋ ಕಂಪನಿ ಕೆಲವೆಡೆ ಕ್ಲೌಡ್ ಕಿಚನ್‌ಗಳನ್ನು ನಿರ್ಮಿಸುತ್ತಿದೆ. ಇಲ್ಲಿ ಒಂದೇ ಕಡೆ ವಿವಿಧ ರೆಸ್ಟೋರೆಂಟ್‌ಗಳನ್ನು ಆನ್‌ಲೈನ್ ಫುಡ್ ಡೆಲಿವರಿಗೆಂದೇ ನಿರ್ಮಿಸಲಾಗಿರುತ್ತದೆ. ಬಾಣಸಿಗರು ಮಾತ್ರ ಬಂದು ಅಡುಗೆ ಸಿದ್ಧ ಮಾಡುತ್ತಾರೆ. ಬೆಂಗಳೂರಿನಲ್ಲೂ ಹಲವೆಡೆ ಕ್ಲೌಡ್ ಕಿಚನ್‌ಗಳಿರುವುದನ್ನು ನೋಡಬಹುದು. ತಿರುವನಂತಪುರಂನ ಕೆಲವೆಡೆ ನಿರ್ಮಿಸಲಾಗಿರುವ ಕ್ಲೌಡ್ ಕಿಚನ್‌ನಲ್ಲಿ ಚೆಫ್‌ಗಳು ಅಥವಾ ಬಾಣಸಿಗರು ಅಲ್ಲಿ ಹೋಗಿ ಅಡುಗೆ ಮಾಡಿ ಮಾರಾಟ ಮಾಡಬಹುದು. ಅಂಥದ್ದೊಂದು ವ್ಯವಸ್ಥೆಯನ್ನು ವೆಂಡಿಗೋ ಕಲ್ಪಿಸಿದೆ.
"ಒಂದು ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ (ಫಾಸ್ಟ್ ಫುಡ್ ಹೋಟೆಲ್ ರೀತಿಯದ್ದು) ತೆರೆಯಬೇಕೆಂದರೂ 10 ಲಕ್ಷವಾದರೂ ಬೇಕಾಗುತ್ತದೆ. ಜೊತೆಗೆ ಮಾರ್ಕೆಟಿಂಗ್ ಇತ್ಯಾದಿಗೆ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ, ವೆಂಡಿಗೋ ಸಂಸ್ಥೆಯೇ ನಿರ್ದಿಷ್ಟ ಶುಲ್ಕ ಪಡೆದು ಹೋಟೆಲ್ ಮತ್ತು ಡಿಜಿಟಲ್ ವ್ಯವಸ್ಥೆ ಮಾಡುತ್ತದೆ" ಎಂದು ಈ ಕಂಪನಿ ಹೇಳಿದೆ.

ಮಲ್ಟಿಪಲ್ ಆರ್ಡರ್
ವೆಂಡಿಗೋ ಪೋರ್ಟಲ್ ಮೂಲಕ ಗ್ರಾಹಕರು ಸಿಂಗಲ್ ಆರ್ಡರ್‌ನಲ್ಲಿ ಹಲವು ರೆಸ್ಟೋರೆಂಟ್‌ಗಳಿಂದ ಆಹಾರ ಬುಕ್ ಮಾಡಬಹುದು. ತಮಗೆ ಅನುಕೂಲವಾಗುವ ಜಾಗಕ್ಕೆ ಡೆಲಿವರಿ ಮಾಡಿಸಬಹುದು.
ವೆಂಡಿಗೋ ಪೋರ್ಟಲ್‌ನಲ್ಲಿ ಒಬ್ಬ ಗ್ರಾಹಕ ಆರ್ಡರ್ ಕೊಟ್ಟು ಪಿಕ್ ಅಪ್ ಸಮಯ ಮತ್ತು ಸ್ಥಳವನ್ನು ನಿರ್ದಿಷ್ಟಪಡಿಸಬಹುದು. ಪೇಮೆಂಟ್ ಆದ ಬಳಿಕ ಗ್ರಾಹಕರಿಗೆ ಒಟಿಪಿ ಸಿಗುತ್ತದೆ ಮತ್ತು ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಕಿಯೋಸ್ಕ್ ಬಾಕ್ಸ್ ನಂಬರ್ ಅನ್ನು ಗ್ರಾಹಕರಿಗೆ ಕೊಡಲಾಗುತ್ತದೆ.
ನಗರದ ಹಲವೆಡೆ ಕಿಯೋಸ್ಕ್‌ಗನ್ನು ನಿರ್ಮಿಸಲಾಗುತ್ತಿದೆ. ಗ್ರಾಹಕರು ತಮ್ಮ ಸ್ಥಳಕ್ಕೆ ಸಮೀಪ ಇರುವ ಕಿಯೋಸ್ಕ್ ಅನ್ನು ಆರಿಸಿಕೊಳ್ಳಬಹುದು. ಆ ಕಿಯೋಸ್ಕ್‌ಗೆ ಅವರು ಬುಕ್ ಮಾಡಿದ ಆಹಾರವು ಸರಬರಾಜಾಗುತ್ತದೆ. ಗ್ರಾಹಕರು ಕಿಯೋಸ್ಕ್‌ಗೆ ಹೋಗಿ ಡೆಲಿವರಿ ಪಡೆಯಬಹುದು. ಅವರು ಬುಕ್ ಮಾಡಿದ ಬರುವ ಒಟಿಪಿ ಮತ್ತು ಕಿಯೋಕ್ಸ್ ಬಾಕ್ಸ್ ನಂಬರ್ ಸಹಾಯದಿಂದ ಆಹಾರವನ್ನು ಪಡೆಯಬಹುದು.


Click it and Unblock the Notifications