ನವದೆಹಲಿ, ನ. 2: ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಮಾಡಿದ ಬಳಿಕ ಆ ಕಂಪನಿಯ ಆಯಕಟ್ಟಿನ ಹುದ್ದೆಗಳಲ್ಲಿದ್ದವರನ್ನು ವಜಾಗೊಳಿಸಿದ್ದಾರೆ. ಟ್ವಿಟ್ಟರ್ ಅನ್ನು ವಿಭಿನ್ನವಾಗಿ ಪರಿವರ್ತಿಸುವ ಇರಾದೆಯಲ್ಲಿರುವ ಇಲಾನ್ ಮಸ್ಕ್ ತಮ್ಮ ಈ ಗುರಿ ಸಾಧನೆಗೆ ಸ್ನೇಹಿತರು ಮತ್ತು ಹೊರಗಿನವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಅದರಲ್ಲಿ ಡೇವಿಡ್ ಸ್ಯಾಕ್ಸ್, ಜೇಸನ್ ಕಲಾಕಾನಿಸ್, ಶ್ರೀರಾಮ್ ಕೃಷ್ಣನ್ ಮೊದಲಾದವರಿದ್ದಾರೆ.
ಒಇಒ, ಸಿಟಿಒ, ಲೀಗಲ್ ಇತ್ಯಾದಿ ಪ್ರಮುಖ ಹುದ್ದೆಯಲ್ಲಿದ್ದ ಪರಾಗ್ ಅಗರ್ವಾಲ್, ವಿಜಯಾ ಗದ್ದೆ ಮೊದಲಾದವರು ಕೆಲಸ ಕಳೆದುಕೊಂಡಿದ್ದಾರೆ. ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ನಿಕ್ ಕಾಲ್ಡ್‌ವೆಲ್, ಕನ್ಸೂಮರ್ ಮತ್ತು ರೆವೆನ್ಯೂ ಪ್ರಾಡಕ್ಟ್ ವಿಭಾಗಗಳ ಜನರಲ್ ಮ್ಯಾನೇಜರ್ ಜೇ ಸುಲೈವಾನ್ ಮೊದಲಾದವರನ್ನೂ ಸ್ಥಾನಪಲ್ಲಟಗೊಳಿಸುವ ಅಥವಾ ಕೆಲಸದಿಂದ ವಿಮುಕ್ತಿಗೊಳಿಸುವ ಸಾಧ್ಯತೆ ಇದೆ.
ಮಸ್ಕ್ ಸಹಾಯಕ್ಕೆ ನಿಲ್ಲುವವರು
ಟ್ವಿಟ್ಟರ್‌ನ ರೂಪುರೇಖೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಸಂಕಲ್ಪದಲ್ಲಿರುವ ಎಲಾನ್ ಮಸ್ಕ್ ಆ ಕಂಪನಿಯ ಈಗಿನ ಯಾವ ಉದ್ಯೋಗಿಯನ್ನೂ ನಂಬಿರುವಂತೆ ಕಾಣುತ್ತಿಲ್ಲ. ತನ್ನ ಮಿತ್ರರು, ಟ್ವಿಟ್ಟರ್‌ನ ಹಿಂದಿನ ಕೆಲ ಉದ್ಯೋಗಿಗಳು ಮೊದಲಾದವರ ಸಹಾಯ ಪಡೆಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಇಲಾನ್ ಮಸ್ಕ್ ಹಿಂದೆ ಪೇಪಾಲ್ ಕಂಪನಿ ಆರಂಭಿಸಿದ್ದರು. ಆ ದಿನಗಳಿಂದಲೂ ಸ್ನೇಹಿತನಾಗಿರುವ ಡೇವಿಡ್ ಸ್ಯಾಕ್ಸ್ ಅವರನ್ನು ಮಸ್ಕ್ ಇತ್ತೀಚೆಗೆ ಭೇಟಿ ಮಾಡುವುದು ಹೆಚ್ಚಾಗಿದೆ. ಮತ್ತೊಬ್ಬ ಸ್ನೇಹಿತ ಜೇಸನ್ ಕೆಲಾಕಾನಿಸ್ ಕೂಡ ಮಸ್ಕ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರಿಗೂ ಟ್ವಿಟ್ಟರ್‌ನ ಇಮೇಲ್ ಐಡಿಗಳಿರುವುದರಿಂದ ಕಂಪನಿಯ ಭವಿಷ್ಯ ರಚನೆಯಲ್ಲಿ ಇವರ ಪಾತ್ರ ಪ್ರಮುಖವಾಗಿರಬಹುದು.
ಇನ್ನು ಟ್ವಿಟ್ಟರ್‌ನ ಮಾಜಿ ಉದ್ಯೋಗಿಗಳನ್ನೂ ಇಲಾನ್ ಮಸ್ಕ್ ಬಳಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಪ್ರಮುಖರು ಶ್ರೀರಾಮ್ ಕೃಷ್ಣನ್. ಹಾಗೆಯೇ, ಹಿಂದೆ ಟ್ವಿಟ್ಟರ್‌ನಲ್ಲಿ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥರಾಗಿದ್ದ ಕೇವಾನ್ ಬೇಕಪೂರ್ ಎಂಬುವವರನ್ನೂ ಇಲಾನ್ ಮಸ್ಕ್ ವಾಪಸ್ ಕರೆತರುವ ಯೋಜನೆಯಲ್ಲಿದ್ದಾರೆ. ಆದರೆ, ವರದಿಗಳ ಪ್ರಕಾರ ಶ್ರೀರಾಮ್ ಕೃಷ್ಣನ್ ಅವರು ಟ್ಟಿಟ್ಟರ್‌ನ ಸಮಗ್ರ ಬದಲಾವಣೆಯಲ್ಲಿ ಬಹಳ ದೊಡ್ಡ ಪಾತ್ರ ವಹಿಸಬಹುದು ಎಂಬ ಸುದ್ದಿ ಇದೆ.
ಯಾರು ಈ ಶ್ರೀರಾಮ್ ಕೃಷ್ಣನ್?
ಶ್ರೀರಾಮ್ ಕೃಷ್ಣನ್ ತಮಿಳುನಾಡಿನ ಚೆನ್ನೈನಲ್ಲಿ ಹುಟ್ಟಿದವರು. ಸದ್ಯ ಅಮೆರಿಕದ ಪ್ರಜೆ. ಚೆನ್ನೈನ ಎಸ್‌ಆರ್‌ಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಮಾಡಿ ನಂತರ ಅಮೆರಿಕದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ.
ಟ್ವಿಟ್ಟರ್ ಸೇರಿದಂತೆ ಬಹಳಷ್ಟು ಕಂಪನಿಗಳಲ್ಲಿ ಶ್ರೀರಾಮ್ ಕೃಷ್ಣನ್ ಕೆಲಸ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಅವರು ಕೋರ್ ಕನ್ಸೂಮರ್ ತಂಡಗಳ ನೇತೃತ್ವ ವಹಿಸಿದ್ದರು. ಟ್ವಿಟ್ಟರ್‌ನ ಟೈಮ್‌ಲೈನ್, ಸರ್ಚ್, ಡಿಸ್ಕವರಿ, ವೀಕ್ಷಕರ ಬೆಳವಣಿಗೆ ಇತ್ಯಾದಿ ಪ್ರಾಡಕ್ಟ್‌ಗಳನ್ನು ಇವರ ತಂಡಗಳೇ ನಿರ್ವಹಿಸುತ್ತಿದ್ದವು.
ಟ್ವಿಟ್ಟರ್ ಅಲ್ಲದೇ, ಮೆಟಾ, ಫೇಸ್‌ಬುಕ್, ಮೈಕ್ರೊಸಾಫ್ಟ್, ಸ್ನ್ಯಾಪ್ ಕಂಪನಿಗಳಲ್ಲೂ ಅವರು ಕೆಲಸ ಮಾಡಿದ್ದಾರೆ. ಸದ್ಯ ಅವರು ಆಂಡ್ರೀಸನ್ ಹೊರೋವಿಟ್ಜ್ (Andreessen Horowitz) ಕಂಪನಿಯಲ್ಲಿ ಜನರಲ್ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಪ್ಟೋ, ವೆಬ್3ಯಲ್ಲಿ ಹೂಡಿಕೆ ಮಾಡಿದ್ದಾರೆ. ಬಿಟ್‌ಸ್ಕೈ, ಹಾಪ್‌ಕಿನ್ ಮತ್ತು ಪಾಲಿವರ್ಕ್‌ನ ಬೋರ್ಡ್‌ಗಳಲ್ಲೂ ಅವರಿದ್ದಾರೆ.
ಟ್ವಿಟ್ಟರ್ ಸಿಇಒ ಆಗ್ತಾರಾ ಶ್ರೀರಾಮ್?
ಟ್ವಿಟ್ಟರ್‌ಗೆ ಹೊಸ ಕಾಯಕಲ್ಪ ಕೊಡಲು ಶ್ರೀರಾಮ್ ಕೃಷ್ಣನ್ ನೆರವನ್ನು ಮಸ್ಕ್ ಯಾಚಿಸಿದ ಬೆನ್ನಲ್ಲೇ, ಅವರೇ ಟ್ವಿಟ್ಟರ್‌ನ ಸಿಇಒ ಆಗಬಹುದು ಎಂಬ ಸುದ್ದಿ ಮೊನ್ನೆ ದಟ್ಟವಾಗಿ ಹರಡಿತ್ತು. ಆದರೆ, ಟ್ವಿಟ್ಟರ್‌ನಲ್ಲಿಯ ಕೆಲಸ ತನ್ನದು ತಾತ್ಕಾಲಿಕ ಎಂದು ಸ್ವತಃ ಶ್ರೀರಾಮ್ ಕೃಷ್ಣನ್ ಸ್ಪಷ್ಟಪಡಿಸಿದ್ದಾರೆ.
"... ಇತರ ಉನ್ನತ ವ್ಯಕ್ತಿಗಳ ಜೊತೆ ಸೇರಿ ಟ್ವಿಟ್ಟರ್‌ನಲ್ಲಿ ಇಲಾನ್ ಮಸ್ಕ್‌ಗೆ ತಾತ್ಕಾಲಿಕವಾಗಿ ನೆರವಾಗುತ್ತಿದ್ದೇನೆ... ಇದು ಬಹಳ ಮುಖ್ಯವಾದ ಕಂಪನಿಯಾಗಿದ್ದು, ಇಡೀ ವಿಶ್ವದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಬಲ್ಲುದು ಎಂಬುದು ನನ್ನ ಭಾವನೆ. ಇದನ್ನು ಸಾಕಾರ ಮಾಡುವ ಶಕ್ತಿ ಇಲಾನ್‌ಗೆ ಇದೆ" ಎಂದು ಹೇಳಿರುವ ಶ್ರೀರಾಮ್ ತಾನು ಇನ್ನೂ ಆಂಡ್ರೀಸನ್ ಹೊರೋವಿಟ್ಜ್‌ನಲ್ಲಿ ಪೂರ್ಣಾವಧಿ ಕೆಲಸ ಮಾಡುತ್ತಿರುವುದಾಗಿ ಮತ್ತೊಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications