ಕರ್ನಾಟಕದಲ್ಲಿ ಧಾರ್ಮಿಕ ತಾಣಗಳ ಸಂಖ್ಯೆ ಹೆಚ್ಚಾಗಿಯೇ ಇವೆ. ಧರ್ಮಸ್ಥಳ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ..ಹೀಗೆ ನಾನಾ ದೇಗುಲಗಳಿಗೆ ಭಕ್ತರ ಸಂಖ್ಯೆ ವರ್ಷ ವರ್ಷ ಹರಿದುಬರುತ್ತಲೇ ಇರುತ್ತದೆ. ಹೆಚ್ಚಿನ ಜನರು ದೋಷ ಪರಿಹಾರ ಮಾಡಿಕೊಳ್ಳಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವುದು ಸಾಮಾನ್ಯ. ಅದರಂತೆ ಹೆಚ್ಚಿನ ಜನ ಹೋಗುವುದರಿಂದ ಅಲ್ಲಿನ ಆದಾಯ ಕೂಡ ಹೆಚ್ಚಾಗಿಯೇ ಇರುತ್ತೆ. 2024-25ನೇ ಸಾಲಿನಲ್ಲಿಯೂ ಸಾಗರೋಪಾದಿಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದು, ಈ ಸಮಯದಲ್ಲಿ ದೇವಾಲಯ ಗಳಿಸಿರುವ ಆದಾಯ ದಾಖಲೆ ಮಟ್ಟದ್ದಾಗಿದೆ. ಅಂದರೆ 2024-25ನೇ ಸಾಲಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ, ₹155.95 ಕೋಟಿ ಆದಾಯ ಸಂಗ್ರಹವಾಗಿದ್ದು ರಾಜ್ಯ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದಕ್ಕೆ ಕಾರಣ ಏನೆಂದರೆ ಸಾಗರೋಪಾದಿಯಲ್ಲಿ ಭಕ್ತರು ಭೇಟಿ ನೀಡುವುದು. ಇಲ್ಲಿ ಇಲ್ಲಿ ನಿರಂತರವಾಗಿ ನಡೆಯುವ ಧಾರ್ಮಿಕ ಸೇವೆಗಳು ಹಾಗೂ ಭಕ್ತರಿಂದ ಬರುವ ಹೆಚ್ಚಿನ ಸಂಖ್ಯೆಯ ಅರ್ಪಣೆಗಳು ಹೆಚ್ಚಿನ ಆದಾಯಕ್ಕೆ ಕಾರಣವಾಗಿವೆ. ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರವೇ ವಿಶೇಷ. ಈ ಶ್ರದ್ಧೆಯ ಪೂಜೆ ದೇಶದೆಲ್ಲೆಡೆ ಜನಪ್ರಿಯ. ಹೀಗಾಗಿಯೇ ದೇಶದ ಮೂಲೆ ಮೂಲೆಯಿಂದಲೂ ಭಕ್ತರು ಹರಿದು ಬರುತ್ತಾರೆ. ಇದಲ್ಲದೇ ಈ ಪೂಜೆಯ ಜೊತೆಗೆ ಇತರೆ ಧಾರ್ಮಿಕ ಸೇವೆಗಳೂ ದೇವಸ್ಥಾನಕ್ಕೆ ಉತ್ತಮ ಆದಾಯ ತರುತ್ತಿವೆ.
ಆದಾಯ ಮಾತ್ರ ಹೆಚ್ಚಾಗಿಲ್ಲ. ಈ ದೇವಾಲಯದಲ್ಲಿ ಖರ್ಚು ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿದೆ. ಈ ವರ್ಷ ದೇವಾಲಯವು ₹79.82 ಕೋಟಿ ವೆಚ್ಚ ಮಾಡಿದ್ದು, ಇದರಲ್ಲಿ ಭಕ್ತರಿಗೆ ನೀಡುವ ಸೌಲಭ್ಯಗಳು, ಆಡಳಿತ, ಉತ್ಸವ ಆಯೋಜನೆ ಹಾಗೂ ಸಿಬ್ಬಂದಿಯ ವೇತನ ಸೇರಿವೆ. ಈ ದೇವಸ್ಥಾನವನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಇಲಾಖೆ ನಿರ್ವಹಿಸುತ್ತಿದೆ.
ಭಕ್ತರ ಭರವಸೆ ಮತ್ತು ಸಂಸ್ಕೃತಿಯ ಸ್ಥಿರತೆಯನ್ನು ಕಾಪಾಡಿಕೊಂಡಿರುವ ಈ ದೇವಾಲಯ ಕಳೆದ ಕೆಲ ವರ್ಷಗಳಲ್ಲಿ ಆದಾಯದ ವಿಷಯದಲ್ಲಿ ಸತತ ಬೆಳವಣಿಗೆಯ ಹಾದಿಯಲ್ಲಿದೆ. 2011-12ನೇ ಹಣಕಾಸು ವರ್ಷದಲ್ಲಿ ಈ ದೇವಸ್ಥಾನ ₹56.24 ಕೋಟಿ ಗಳಿಸಿದ್ದರೆ, 2020-21ರಲ್ಲಿ ₹68.94 ಕೋಟಿ, 2021-22ರಲ್ಲಿ ₹72.73 ಕೋಟಿ, 2022-23ರಲ್ಲಿ ₹123 ಕೋಟಿ ಆದಾಯ ದಾಖಲಾಗಿತ್ತು. ಈ ಕ್ರಮವನ್ನು ಮುಂದುವರೆಸುತ್ತಾ, 2023-24ರಲ್ಲಿ ₹146.01 ಕೋಟಿಗೂ ಮೀರಿದ ದೇವಸ್ಥಾನ, ಈಗ ₹155.95 ಕೋಟಿ ಗಳಿಸಿ ಮತ್ತೊಮ್ಮೆ ತಾನೇ ಶ್ರೀಮಂತಮಾದ ದೇವಸ್ಥಾನ ಎಂಬ ಸ್ಥಾನವನ್ನು ಗಟ್ಟಿಯಾಗಿ ಕಾಯ್ದುಕೊಂಡಿದೆ.
ಈ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ನಾನಾ ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತರ ನಂಬಿಕೆಯನ್ನು ಸದುಪಯೋಗಪಡಿಸಿಕೊಂಡು, ಆಧ್ಯಾತ್ಮಿಕ ಹಾಗೂ ಆರ್ಥಿಕ ಮಟ್ಟದಲ್ಲಿ ರಾಜ್ಯದ ಧಾರ್ಮಿಕ ಪರಂಪರೆಯ ಬೃಹತ್ ಹಿರಿಮೆ ಮಾಡುತ್ತಿದೆ. ಇದರಿಂದಾಗಿ ಇದು ಕೇವಲ ಪವಿತ್ರ ತಾಣವಲ್ಲ, ಒಂದು ಸಾಂಸ್ಕೃತಿಕ ಸ್ಫೂರ್ತಿ ಕೇಂದ್ರವಾಗಿಯೂ ಪರಿಗಣಿಸಬಹುದು.
ಈ ವರ್ಷವೂ ಧರ್ಮದಾಯ ಇಲಾಖೆ ಬಿಡುಗಡೆಮಾಡುವ ಅಧಿಕೃತ ಪಟ್ಟಿಯಲ್ಲಿ, ಈ ದೇವಸ್ಥಾನ ಮೊದಲ ಸ್ಥಾನದಲ್ಲಿ ಸ್ಥಿರವಾಗಿರುವ ಸಾಧ್ಯತೆ ಬಹುಮಾನವಾಗಿದ್ದು, ಕೊಲ್ಲೂರು ಮೂಕಾಂಬಿಕಾ ದೇವಾಲಯ ಮತ್ತೊಮ್ಮೆ ಎರಡನೇ ಸ್ಥಾನದಲ್ಲಿರುವುದಾಗಿ ಅಂದಾಜಿಸಲಾಗಿದೆ. ಇಂತಹ ಧಾರ್ಮಿಕ ಕೇಂದ್ರಗಳು ರಾಜ್ಯದ ಧಾರ್ಮಿಕ ಬಾಹುಳ್ಯವನ್ನೂ, ಪ್ರವಾಸೋದ್ಯಮವನ್ನೂ ಮುನ್ನೆಡೆಸಲು ಕಾರಣವಾಗುತ್ತವೆ.
ವರ್ಷದಿಂದ ವರ್ಷಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಕೇವಲ ಭಕ್ತಿಭಾವಕ್ಕೆ ಮಾತ್ರವಲ್ಲ, ಆರ್ಥಿಕವಾಗಿ ಸಹ ರಾಜ್ಯದ ದೇವಾಲಯಗಳಲ್ಲಿ ಮುಂಚೂಣಿಯಲ್ಲಿದೆ ಎಂಬುದು ಸ್ಪಷ್ಟವಾಗಿದೆ. ₹155 ಕೋಟಿಯ ದಾಖಲಾತಿ ಆದಾಯವು ಈ ದೇಗುಲದ ವಿಸ್ತಾರವಾದ ಧಾರ್ಮಿಕ ಸೇವೆಗಳಿಗೆ, ನಿರಂತರ ಭಕ್ತರ ಆಗಮಕ್ಕೆ ಮತ್ತು ವ್ಯವಸ್ಥಿತ ನಿರ್ವಹಣೆಗೆ ಸಾಕ್ಷಿಯಾಗಿದೆ. ಸಹಜವಾಗಿ ಇದು ಕರ್ನಾಟಕದ ಮಾತ್ರವಲ್ಲ, ಭಾರತದ ಪ್ರಮುಖ ಧಾರ್ಮಿಕ ತಾಣಗಳ ಪೈಕಿ ಒಂದಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಸಹ ಕುಕ್ಕೆ ಸುಬ್ರಹ್ಮಣ್ಯ ತನ್ನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಪ್ರಭಾವವನ್ನು ಇನ್ನಷ್ಟು ವಿಸ್ತರಿಸಲಿದೆ ಎಂಬ ನಿರೀಕ್ಷೆ ಸಹ ನಿಜವಾಗಿಯೇ ಭಕ್ತರ ಮನಗಳಲ್ಲಿ ಮೂಡುತ್ತಿದೆ.


Click it and Unblock the Notifications