ತ್ವರಿತವಾಗಿ ದಿನಸಿಗಳನ್ನು ಸರಬರಾಜು ಮಾಡುವ ಸ್ಟಾರ್ಟ್‌ಅಪ್ ಸಂಸ್ಥೆಯಾದ ಡೊನ್ಜೊ ಸಂಸ್ಥೆಯಲ್ಲಿ ಎರಡನೇ ಹಂತದ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಘೋಷಣೆ ಮಾಡಿದೆ. ಈ ಹಿಂದೆ ಮೂರು ತಿಂಗಳ ಹಿಂದೆ ಡೊನ್ಜೊ ಸಂಸ್ಥೆಯಲ್ಲಿ ಮೊದಲ ಹಂತದ ಉದ್ಯೋಗ ಕಡಿತ ಮಾಡಲಾಗಿದೆ. ಆ ಸಂದರ್ಭದಲ್ಲಿ ಒಟ್ಟಾಗಿ 60-80 ಮಂದಿಗೆ ಡೊನ್ಜೊ ಪಿಂಕ್ ಸ್ಲಿಪ್ ನೀಡಿದೆ. ಈ ಎರಡನೇ ಹಂತದ ಉದ್ಯೋಗ ಕಡಿತದ ವೇಳೆ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಸಂಸ್ಥೆಯು ಶೇಕಡ 30ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.
ಈ ಬಾರಿ ಶೇಕಡ 30ರಷ್ಟು ಉದ್ಯೋಗ ಕಡಿತವೆಂದರೆ 300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ರಿಲಯನ್ಸ್ ಬೆಂಬಲಿತ ಈ ರಿಟೇಲ್ ಕ್ವಿಕ್ ಕಾಮರ್ಸ್ ಸ್ಟಾರ್ಟ್‌ಅಪ್‌ನಲ್ಲಿ ಪ್ರಾರಂಭದಲ್ಲಿ 75 ಮಿಲಿಯನ್ ಡಾಲರ್ ಹಣವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ 50 ಮಿಲಿಯನ್ ಡಾಲರ್ ಫಂಡಿಂಗ್ ಇನ್ಫ್ಯೂಷನ್ ಗೂಗಲ್ ಮತ್ತು ರಿಲಯನ್ಸ್ ರಿಟೇಲ್‌ನಿಂದ ಲಭ್ಯವಾಗಿದೆ. ಉಳಿದ ಮೊತ್ತವು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ ಲಭ್ಯವಾಗಿದೆ.

ಈ ಬಗ್ಗೆ ಏಪ್ರಿಲ್ 5 ರಂದು ಟೌನ್ ಹಾಲ್ ಸಭೆಯಲ್ಲಿ ಮಾಹಿತಿ ನೀಡಿರುವ ಡೊನ್ಜೊ ಸ್ಥಾಪಕ ಮತ್ತು ಸಿಇಒ ಕಬೀರ್ ಬಿಸ್ವಾಸ್ ಉದ್ಯೋಗಿಗಳಿಗೆ ಉದ್ಯೋಗ ಕಡಿತದ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ 18 ತಿಂಗಳುಗಳಲ್ಲಿ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ಕಂಪನಿಯು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು. ಇದರೊಂದಿಗೆ ಡೊನ್ಜೊ ಡಾರ್ಕ್ ಸ್ಟೋರ್‌ಗಳಲ್ಲಿ ಸುಮಾರು ಶೇಕಡ 50ರಷ್ಟು ಉದ್ಯೋಗ ಕಡಿತ ಮಾಡುವ ಬಗ್ಗೆಯೂ ವರದಿಯಾಗಿದೆ. ಎಲ್ಲಿ ಡಾರ್ಕ್ ಸ್ಟೋರ್‌ಗಳನ್ನು ಮುಚ್ಚಲಾಗುತ್ತದೆಯೋ ಅಲ್ಲಿ ಡೊನ್ಜೊ ಸೂಪರ್‌ಮಾರ್ಕೆಟ್‌ಗಳು ಮತ್ತು ಇತರ ವ್ಯಾಪಾರಿಗಳೊಂದಿಗೆ ಪಾಲುದಾರರಾಗುತ್ತಾರೆ.
ಹಲವಾರು ಸಂಸ್ಥೆಗಳಲ್ಲಿ ಉದ್ಯೋಗ ಕಡಿತ
ಡೊನ್ಜೊ ಮಾತ್ರವಲ್ಲದೆ ಇತರೆ ಸ್ಟಾರ್ಟ್‌ಅಪ್ ಸಂಸ್ಥೆಗಳಲ್ಲಿಯೂ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಜೆಪ್ಟೋ, ಜೊಮ್ಯಾಟೊ, ಬ್ಲಿಂಕಿಟ್, ಬಿಗ್ ಬಾಸ್ಕೆಟ್ ಮೊದಲಾದವುಗಳಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗಿದೆ. ವಿಗ್ಗಿಯಲ್ಲಿ ಸುಮಾರು ಶೇಕಡ 10ರಷ್ಟು ಅಥವಾ ಸರಿಸುಮಾರು 600 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಲಾಗುತ್ತದೆ ಎಂದು ಇತ್ತೀಚೆಗೆ ಘೋಷಣೆ ಮಾಡಲಾಗಿದೆ. ಜೊಮ್ಯಾಟೊದಲ್ಲಿ ಹಣಕಾಸು ವರದಿಯು ಸಂಸ್ಥೆಯು ಭಾರೀ ನಷ್ಟ ಉಂಟಾಗಿದೆ ಎಂದು ತಿಳಿಸಿದೆ. ಇದರ ನಡುವೆ ಸಂಸ್ಥೆಯು 225 ಸಣ್ಣ ನಗರಗಳಿಗೆ ಜೊಮ್ಯಾಟೊ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ನಗರಗಳಲ್ಲಿ ಹೆಚ್ಚಿನ ವಹಿವಾಟು ಇಲ್ಲ ಎಂದು ಹೇಳಿದೆ.
ಅದಕ್ಕೂ ಮುನ್ನ ಜೊಮ್ಯಾಟೊವನ್ನು ಕಟ್ಟಿ ಬೆಳೆಸಿದ, ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಸಂಸ್ಥೆಯು ಸುಮಾರು ಶೇಕಡ 3ರಷ್ಟು ಉದ್ಯೋಗ ಕಡಿತವನ್ನು ಮಾಡುವುದಾಗಿ ಘೋಷಣೆ ಮಾಡಿದೆ. ಪ್ರಮುಖವಾಗಿ ಸಂಸ್ಥೆಯಲ್ಲಿ ತನ್ನ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜೊಮ್ಯಾಟೊ ಈ ಹಾದಿಯನ್ನು ಹಿಡಿದಿದೆ. ಅಂದರೆ ಸಂಸ್ಥೆಯಲ್ಲಿ ಸುಮಾರು 3,800 ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ.
ಇನ್ನು ಮೆಕ್‌ಡೊನಾಲ್ಡ್ಸ್, ಗಿಟ್‌ಹಬ್, ಡಿಸ್ನೆ, ಮೆಟಾ, ಆಕ್ಸೆಂಚರ್, ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್, ಟ್ವಿಟ್ಟರ್, ಬಿಎಎಸ್‌ಎಫ್, ಜೂಮ್, ಭಾರತ್‌ಪೇ, ಸ್ವಿಗ್ಗಿ, ಶೇರ್‌ಚಾಟ್, ಓಲಾ, ಕ್ರಿಪ್ಟೋ ಡಾಟ್ ಕಾಮ್, ಗೋಲ್ಡ್‌ಮ್ಯಾನ್ ಸಾಚ್ಸ್, ಕಾಗ್ನಿಜೆಂಟ್ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ, ಮುಖ್ಯವಾಗಿ ಟೆಕ್ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ಮಾಡಲಾಗಿದೆ.


Click it and Unblock the Notifications