ಈಗ ಹಲವಾರು ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಮೆಟಾದಲ್ಲಿ ಎರಡನೇ ಹಂತದ ಉದ್ಯೋಗ ಕಡಿತವನ್ನು ಇತ್ತೀಚೆಗೆ ಘೋಷಣೆ ಮಾಡಲಾಗಿದೆ. ಈ ನಡುವೆ ಮೆಟಾದ ಮಾಜಿ ಉದ್ಯೋಗಿಗೆ ಯಾವುದೇ ಕೆಲಸ ಮಾಡದಿದ್ದರೂ ವೇತನ ಲಭ್ಯವಾಗಿದೆ. ಹೌದು, ಮೆಟಾದ ಮಾಜಿ ಉದ್ಯೋಗಿ ನೀಡದ ಮಾಹಿತಿ ಪ್ರಕಾರ ಆಕೆ ಸಂಸ್ಥೆಯಲ್ಲಿ ಯಾವುದೇ ಉದ್ಯೋಗವನ್ನು ಮಾಡದಿದ್ದರು ವಾರ್ಷಿಕವಾಗಿ 190,000 ಡಾಲರ್ ಅಂದರೆ ಸರಿ ಸುಮಾರು 1.5 ಕೋಟಿ ರೂಪಾಯಿ ಲಭ್ಯವಾಗಿದೆ ಎಂದು ವರದಿಯಾಗಿದೆ.
ಮಾಧ್ಯಮದ ವರದಿ ಪ್ರಕಾರ ನೇಮಕಾತಿದಾರರಾಗಿದ್ದ ಮೆಡೆಲಿನ್ ಮಚಾಡೊ 2021ರಲ್ಲಿ ತನ್ನ ಆರು ತಿಂಗಳ ಉದ್ಯೋಗದ ಬಗ್ಗೆ ವಿವರವನ್ನು ಟಿಕ್‌ಟಾಕ್ ವೀಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ. "ಮೆಟಾದಲ್ಲಿ ಯಾವುದೇ ಕಾರ್ಯ ಮಾಡದಿರಲು 190 ಸಾವಿರ ಡಾಲರ್ ಹಣ ಪಡೆಯಲಾಗುತ್ತಿದೆ" ಎಂಬ ಶೀರ್ಷಿಕೆಯ ವೀಡಿಯೊವನ್ನು ಹಾಕಿದ್ದಾರೆ. ತಾನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಕಂಪನಿಯು ಯಾವುದೇ ಹೊಸ ಸಿಬ್ಬಂದಿಯನ್ನು ಹೇಗೆ ನೇಮಿಸಿಕೊಳ್ಳಲಿಲ್ಲ ಎಂಬುದನ್ನು ಚರ್ಚಿಸಿದ್ದಾರೆ.

ಮೊದಲ ಆರು ತಿಂಗಳುಗಳು ಮತ್ತು ಮೊದಲ ವರ್ಷವೂ ಸಹ, ಸಂಸ್ಥೆಯು ಯಾರನ್ನೂ ನೇಮಿಸಿಕೊಳ್ಳುವ ಚಿಂತನೆಯನ್ನು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನು ಮ್ಯಾಡೀಸ್ ತನ್ನ ಬಹುಪಾಲು ಸಮಯವನ್ನು "ಕಲಿಕೆ" ಯಲ್ಲಿ ಕಳೆದರು ಎಂದಿದ್ದಾರೆ. ಮೆಟಾದ ಆರಂಭಿಕ ಪ್ರಕ್ರಿಯೆ ಮತ್ತು ಸೂಚನೆಗಳು ಅತ್ಯುತ್ತಮ ಮತ್ತು ಅತ್ಯಂತ ಕೂಲಂಕುಷವಾಗಿದೆ ಎಂದು ಹಾಸ್ಯವನ್ನು ಕೂಡಾ ಮಾಡಿದ್ದಾರೆ. ಯಾವುದೇ ಹೊಸ ಉದ್ಯೋಗಿಗಳನ್ನು ನೇಮಕಾತಿ ಮಾಡದಿದ್ದರೂ ಕೂಡಾ ಹಲವಾರು ಸಭೆಗಳನ್ನು ನಡೆಸಲಾಗುತ್ತಿತ್ತು ಎಂದಿದ್ದಾರೆ.
ತಂಡದಲ್ಲಿ ಎಲ್ಲರೂ ಕೂಡಾ ಹೊಸದಾಗಿದ್ದರೂ ಕೂಡಾ ಆ ಪೈಕಿ ಯಾರು ಕೂಡಾ ಹೊಸಬರನ್ನು ನೇಮಕಾತಿ ಮಾಡಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಮೆಡೆಲಿನ್ ಮಚಾಡೊ ಮೆಟಾದಲ್ಲಿ ಹೊಸ ಉದ್ಯೋಗಿಗಳ ನೇಮಕಾತಿದಾರರಾಗಿದ್ದರು ಎಂದು ತಿಳಿಸಿದ್ದಾರೆ. ಇನ್ನು ಮೆಡೆಲಿನ್ ಮಚಾಡೊ ಯಾವುದೇ ಕಾರ್ಯವನ್ನು ಮಾಡದೆಯೇ ವೇತನವನ್ನು ಪಡೆದಿದ್ದೇನೆ ಎಂದು ಹೇಳಿಕೊಂಡಿರುವುದಕ್ಕೆ ಟೀಕೆಗಳು ಕೂಡಾ ವ್ಯಕ್ತವಾಗಿದೆ.
ಸ್ಪಷ್ಟನೆಯನ್ನು ನೀಡಿದ ಮೆಡೆಲಿನ್ ಮಚಾಡೊ
ಈ ಎಲ್ಲ ಟೀಕೆಗಳ ನಂತರ ಮೆಡೆಲಿನ್ ಮಚಾಡೊ ಸ್ಪಷ್ಟಣೆಯನ್ನು ಕೂಡಾ ನೀಡಿದ್ದಾರೆ. ಲಿಂಕ್ಡಿನ್‌ನಲ್ಲಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. "ನಾನು ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದೆ, ಆದರೆ ಅದು ಟಿಕ್‌ಟಾಕ್‌ನಲ್ಲಿ ತಪ್ಪಾದ ಅರ್ಥದಲ್ಲಿ ವೈರಲ್ ಆಗಿದೆ. ನಾನು ಆ ವಿಡಿಯೋದಲ್ಲಿ ನಾನು ನೇಮಕಾತಿದಾರರಿಗೆ ನೇಮಕಾತಿಯಾದ ಬಳಿಕ ಯಾವುದೇ ಹೊಸ ನೇಮಕಾತಿಯನ್ನು ಮಾಡುವ ಅವಕಾಶ ನಮಗೆ ಲಭ್ಯವಾಗಿಲ್ಲ. ನಾನು ಮೆಟಾಕ್ಕೆ ಸೇರ್ಪಡೆಯಾದ ಆರು ತಿಂಗಳವರೆಗೆ ಬರೀ ಕಲಿಕೆ ಮಾಡಿದ್ದಷ್ಟೆ," ಎಂದು ತಿಳಿಸಿದ್ದಾರೆ.
ನೇಮಕಾತಿಯಾದ ಮೂರು ದಿನದಲ್ಲೇ ವಜಾ
ಮೆಟಾ ಜನವರಿಯಲ್ಲಿ ಉದ್ಯೋಗ ಕಡಿತವನ್ನು ಮಾಡಿದ್ದು, ಇತ್ತೀಚೆಗೆ ಮತ್ತೆ ಎರಡನೇ ಹಂತದ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಮೆಟಾದಲ್ಲಿನ ಉದ್ಯೋಗ ಕಡಿತ ಜಾಗತಿಕವಾಗಿ ಹಲವಾರು ದೇಶದ ಜನರ ಮೇಲೆ ಪ್ರಭಾವ ಬೀರಿದೆ. ಇಂತಹ ಒಂದು ನಿರ್ಧಾರದಿಂದ ಆಘಾತಕ್ಕೆ ಒಳಗಾದ ಭಾರತೀಯ ಮೂಲದ ಟೆಕ್ಕಿ ಓರ್ವರು ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ತಾನು ಮೆಟಾ ಸಂಸ್ಥೆಗೆ ಸೇರಿದ ಮೂರು ದಿನದಲ್ಲೇ ಉದ್ಯೋಗ ಕಡಿತದ ಬಲೆಗೆ ಸಿಲುಕಿ ವಜಾಗೊಂಡಿರುವ ಬಗ್ಗೆ ತಿಳಿಸಿದ್ದಾರೆ.
ಈ ಪೋಸ್ಟ್ ಅನ್ನು ಮೆಟಾದಲ್ಲಿ ಮೊದಲ ಹಂತದಲ್ಲಿ ಉದ್ಯೋಗ ಕಡಿತ ನಡೆದ ಬಳಿಕ ಮಾಡಲಾಗಿದೆ. ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆಯ ಕೆನಡಾ ಕಚೇರಿಯಲ್ಲಿ ನಾನು ಮೂರು ದಿನಗಳ ಹಿಂದೆ ನೇಮಕಾತಿಯಾದೆ. ಆದರೆ ಮೂರು ದಿನದಲ್ಲೇ ನ್ನ ಉದ್ಯೋಗವನ್ನು ಕಳೆದುಕೊಂಡಿದ್ದೇನೆ ಎಂದಿದ್ದಾರೆ. ಹಾಗೆಯೇ ಉದ್ಯೋಗಕ್ಕೆ ಸೇರ್ಪಡೆಯಾಗುವುದಕ್ಕೂ ಮುನ್ನ ಕಂಡ ಹಲವಾರು ಸಂಕಷ್ಟಗಳನ್ನು ಕೂಡಾ ಉಲ್ಲೇಖಿಸಿದ್ದಾರೆ. "ನೇಮಕಾತಿಯಾಗುವುದಕ್ಕೂ ಮುನ್ನ ವಿಸಾಕ್ಕಾಗಿ ಅತೀ ದೀರ್ಘ ಪ್ರಕ್ರಿಯೆ ನಡೆಸಲಾಗಿದೆ. ಆದರೆ ಏನು ಪ್ರಯೋಜನ ಸೇರಿದ ಮೂರು ದಿನದಲ್ಲೇ ನನ್ನನ್ನು ವಜಾಗೊಳಿಸಲಾಗಿದೆ," ಎಂದು ಹೇಳಿದ್ದಾರೆ.


Click it and Unblock the Notifications