ಕಳೆದ ವರ್ಷ ಹಲವಾರು ಸಂಸ್ಥೆಗಳು ಹಣದುಬ್ಬರವನ್ನು ಎದುರಿಸಲು, ತಮ್ಮ ಸಂಸ್ಥೆಯಲ್ಲಿನ ವೆಚ್ಚವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಸಾವಿರಾರು ಮಂದಿಯನ್ನು ಉದ್ಯೋಗದಿಂದ ವಜಾ ಮಾಡುತ್ತಾ ಬಂದಿದೆ. ಈ ಬೆಳವಣಿಗೆಯೂ ಈ ವರ್ಷವೂ ಕೂಡಾ ಮುಂದುವರಿದಿದೆ. ಕಳೆದ ವರ್ಷ ಅಥವಾ ಈ ವರ್ಷದ ಆರಂಭದಲ್ಲಿ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಿದ ಸಂಸ್ಥೆಗಳು ಈಗ ಮತ್ತೆ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಅನ್ನು ನೀಡಿದೆ. ಮೆಟಾ ಕೂಡಾ ಉದ್ಯೋಗ ಕಡಿತ ಮಾಡಿದ್ದು, ಸಂಸ್ಥೆಗೆ ಸೇರಿದ 3 ದಿನದಲ್ಲೇ ಭಾರತೀಯ ಟೆಕ್ಕಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ.
ಮೆಟಾ ಜನವರಿಯಲ್ಲಿ ಉದ್ಯೋಗ ಕಡಿತವನ್ನು ಮಾಡಿದ್ದು, ಇತ್ತೀಚೆಗೆ ಮತ್ತೆ ಎರಡನೇ ಹಂತದ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಮೆಟಾದಲ್ಲಿನ ಉದ್ಯೋಗ ಕಡಿತ ಜಾಗತಿಕವಾಗಿ ಹಲವಾರು ದೇಶದ ಜನರ ಮೇಲೆ ಪ್ರಭಾವ ಬೀರಿದೆ. ಇಂತಹ ಒಂದು ನಿರ್ಧಾರದಿಂದ ಆಘಾತಕ್ಕೆ ಒಳಗಾದ ಭಾರತೀಯ ಮೂಲದ ಟೆಕ್ಕಿ ಓರ್ವರು ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ತಾನು ಮೆಟಾ ಸಂಸ್ಥೆಗೆ ಸೇರಿದ ಮೂರು ದಿನದಲ್ಲೇ ಉದ್ಯೋಗ ಕಡಿತದ ಬಲೆಗೆ ಸಿಲುಕಿ ವಜಾಗೊಂಡಿರುವ ಬಗ್ಗೆ ತಿಳಿಸಿದ್ದಾರೆ.

ಈ ಪೋಸ್ಟ್ ಅನ್ನು ಮೆಟಾದಲ್ಲಿ ಮೊದಲ ಹಂತದಲ್ಲಿ ಉದ್ಯೋಗ ಕಡಿತ ನಡೆದ ಬಳಿಕ ಮಾಡಲಾಗಿದೆ. ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆಯ ಕೆನಡಾ ಕಚೇರಿಯಲ್ಲಿ ನಾನು ಮೂರು ದಿನಗಳ ಹಿಂದೆ ನೇಮಕಾತಿಯಾದೆ. ಆದರೆ ಮೂರು ದಿನದಲ್ಲೇ ನ್ನ ಉದ್ಯೋಗವನ್ನು ಕಳೆದುಕೊಂಡಿದ್ದೇನೆ ಎಂದಿದ್ದಾರೆ. ಹಾಗೆಯೇ ಉದ್ಯೋಗಕ್ಕೆ ಸೇರ್ಪಡೆಯಾಗುವುದಕ್ಕೂ ಮುನ್ನ ಕಂಡ ಹಲವಾರು ಸಂಕಷ್ಟಗಳನ್ನು ಕೂಡಾ ಉಲ್ಲೇಖಿಸಿದ್ದಾರೆ. "ನೇಮಕಾತಿಯಾಗುವುದಕ್ಕೂ ಮುನ್ನ ವಿಸಾಕ್ಕಾಗಿ ಅತೀ ದೀರ್ಘ ಪ್ರಕ್ರಿಯೆ ನಡೆಸಲಾಗಿದೆ. ಆದರೆ ಏನು ಪ್ರಯೋಜನ ಸೇರಿದ ಮೂರು ದಿನದಲ್ಲೇ ನನ್ನನ್ನು ವಜಾಗೊಳಿಸಲಾಗಿದೆ," ಎಂದು ಹೇಳಿದ್ದಾರೆ.
ಪೋಸ್ಟ್‌ನಲ್ಲಿ ಹೇಳಿರುವುದು ಏನು ನೋಡಿ
"ಮೆಟಾ ಉದ್ಯೋಗ ಕಡಿತದಲ್ಲಿ ಪ್ರಭಾವಕ್ಕೆ ಒಳಗಾಗಿ 11000 ಉದ್ಯೋಗಿಗಳಲ್ಲಿ ನಾನು ಕೂಡಾ ಓರ್ವ ಎಂಬುವುದು ನನಗೆ ನಿನ್ನೆ ಮುಂಜಾನೆ ತಿಳಿದು ಬಂದಿದೆ. ವಿಸಾಕ್ಕಾಗಿ ಅತೀ ದೀರ್ಘವಾದ ಪ್ರಕ್ರಿಯೆಗೆ ಒಳಗಾಗಿ ನಾನು ಮೂರು ದಿನದ ಹಿಂದಷ್ಟೆ ಮೆಟಾ ಸಂಸ್ಥೆಯನ್ನು ಸೇರ್ಪಡೆಯಾಗಿದ್ದೆ," ಎಂದು ಮೆಟಾದ ಮಾಜಿ ಉದ್ಯೋಗಿ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಲಿಂಕ್ಡಿನ್‌ನಲ್ಲಿ ಮಾಡಲಾಗಿದೆ. ಇನ್ನು ಲಿಂಕ್ಡಿನ್ ಮಾಹಿತಿ ಪ್ರಕಾರ ಈ ಭಾರತೀಯ ಟೆಕ್ಕಿ ಈಗ ಭಾರತಕ್ಕೆ ವಾಪಾಸ್ ಬಂದಿದ್ದು, ಫೋನ್‌ಪೇಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇರ್ಪಡೆಯಾಗಿದ್ದಾರೆ.
ಮೆಟಾದಲ್ಲಿ ನಡೆದ ಉದ್ಯೋಗ ಕಡಿತ
ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನ ಪೋಷಕ ಸಂಸ್ಥೆಯಾದ ಮೆಟಾ ಮತ್ತೆ ಹೊಸದಾಗಿ ಮತ್ತೆ ಉದ್ಯೋಗ ಕಡಿತವನ್ನು ಮಾಡಲು ಮುಂದಾಗಿದೆ. ಈ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದೆ. ಹಾಗೆಯೇ ಹೊಸ ಲೇಆಫ್‌ಗೆ ಉದ್ಯೋಗದಿಂದ ವಜಾಗೊಳಿಸಬಹುದಾದ ಉದ್ಯೋಗಿಗಳ ಪಟ್ಟಿಯನ್ನು ನಿರ್ದೇಶಕರು ಮತ್ತು ಉಪಾಧ್ಯಕ್ಷರುಗಳ ಬಳಿ ಮೆಟಾ ಕೇಳಿದೆ. ಮೆಟಾವು ಉಳಿದ ಸಂಸ್ಥೆಗಳಿಗಿಂತ ವೇಗವಾಗಿ ಉದ್ಯೋಗ ಕಡಿತ ಪ್ರಕ್ರಿಯೆ ನಡೆಸುತ್ತಿದೆ.
ಇದಕ್ಕೂ ಮುನ್ನ ಮೆಟಾ ಸುಮಾರು 11,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅದು ಸಂಸ್ಥೆಯಲ್ಲಿನ ಮೊದಲ ಹಂತದ ಉದ್ಯೋಗ ಕಡಿತವಾಗಿದೆ. ತಂಡದ ಸಂಖ್ಯೆಯನ್ನು ಕಡಿಮೆ ಮಾಡಿ, ವೇತನದಲ್ಲೂ ಕೊಂಚ ಇಳಿಸುವ ಉದ್ದೇಶವನ್ನು ಕೂಡಾ ಸಂಸ್ಥೆ ಹೊಂದಿದೆ. ಮೆಟಾ ಅತೀ ದೊಡ್ಡ ಟೆಕ್ ಸಂಸ್ಥೆಯಾಗಿದೆ. ಇದರ ನಿವ್ವಳ ಆದಾಯವು ನಿರಂತರವಾಗಿ ಕುಸಿಯುತ್ತಲೇ ಇದೆ. ಈ ಕಾರಣದಿಂದಾಗಿ ಮೆಟಾ 2022ರಲ್ಲಿ ಸುಮಾರು 11,000 ಉದ್ಯೋಗಿಗಳನ್ನು ಅಥವಾ ಶೇಕಡ 13 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.


Click it and Unblock the Notifications