ದೇಶದ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಕೂಡಾ ಉದ್ಯೋಗ ಕಡಿತದ ಹಾದಿಯನ್ನು ತುಳಿದಿದೆ. ಹೌದು, ಹಲವಾರು ಸಂಸ್ಥೆಗಳು ಈಗಾಗಲೇ ಉದ್ಯೋಗ ಕಡಿತವನ್ನು ಮಾಡುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋಮಾರ್ಟ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.
ಕಂಪನಿಯು ಇತ್ತೀಚೆಗೆ ಸ್ವಾಧೀನಪಡಿಸಿಕೊಂಡ ಮೆಟ್ರೋ ಕ್ಯಾಶ್ ಮತ್ತು ಕ್ಯಾರಿಯೊಂದಿಗೆ ಸಹಯೋಗ ಮಾಡಿದ ಬಳಿಕ ಈ ನಿರ್ಧಾರವನ್ನು ಕೈಗೊಂಡಿದೆ. ದಿ ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಈ ಉದ್ಯೋಗ ಕಡಿತದಿಂದಾಗಿ ಒಟ್ಟು ಮೂರನೇ ಎರಡರಷ್ಟು ಉದ್ಯೋಗಿಗಳನ್ನು ಕಡಿಮೆ ಮಾಡುತ್ತದೆ. ಕಂಪನಿಯು ತನ್ನ ಕಾರ್ಪೊರೇಟ್ ಕಚೇರಿಯಲ್ಲಿ 500 ಕಾರ್ಯನಿರ್ವಾಹಕರು ಸೇರಿದಂತೆ ಒಟ್ಟಾಗಿ 1,000 ಜನರನ್ನು ಕಳೆದ ಕೆಲವು ದಿನಗಳಲ್ಲಿ ರಾಜೀನಾಮೆ ನೀಡುವಂತೆ ತಿಳಿಸಿದೆ ಎಂದು ವರದಿಯಾಗಿದೆ.

ಇನ್ನು ನೂರಾರು ಉದ್ಯೋಗಿಗಳೊಂದಿಗೆ ಈಗಾಗಲೇ ಕಾರ್ಯಕ್ಷಮತೆ ಸುಧಾರಣೆ ಯೋಜನೆಯನ್ನು (ಪಿಐಪಿ) ಹಾಕಿಕೊಂಡಿರುವುದರಿಂದ ಜಿಯೋಮಾರ್ಟ್ ಇನ್ನಷ್ಟು ಉದ್ಯೋಗ ಕಡಿತ ಮಾಡಲು ಯೋಜನೆ ರೂಪಿಸಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಇನ್ನು ಕಂಪನಿಯು ಈಗಾಗಲೇ ನಿಗದಿತ ವೇತನವನ್ನು ಕಡಿತ ಮಾಡಿದೆ ಎಂದು ವರದಿಯಾಗಿದೆ.
Meta Layoffs: ಮೆಟಾ ಇನ್ನೊಂದು ಹಂತದ ಉದ್ಯೋಗ ಕಡಿತ ಮುಂದಿನ ವಾರ ಆರಂಭ
ಮೆಟ್ರೋದಲ್ಲಿ 3,500 ಉದ್ಯೋಗಿಗಳ ಸೇರ್ಪಡೆಯ ಬಳಿಕ ಸಂಸ್ಥೆಯಲ್ಲಿ ಅಧಿಕ ಉದ್ಯೋಗಿಗಳು ಇದ್ದಾರೆ ಎಂದು ಈ ಬಗ್ಗೆ ಮಾಹಿತಿ ಇರುವ ವ್ಯಕ್ತಿಯೊಬ್ಬರು ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಗ್ರಾಸರಿಯ B2B ವಿಭಾಗದಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ. ಲಾಭವನ್ನು ಹೆಚ್ಚಿಸಲು ಮತ್ತು ನಷ್ಟವನ್ನು ಕಡಿಮೆ ಮಾಡುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲೇ ಉದ್ಯೋಗ ಕಡಿತವನ್ನು ಮಾಡಿದೆ.
ಉದ್ಯೋಗ ಕಡಿತ ಮಾತ್ರವಲ್ಲ ಸೆಂಟರ್‌ಗಳು ಬಂದ್
ಇನ್ನು ಉದ್ಯೋಗ ಕಡಿತ ಮಾಡುವುದು ಮಾತ್ರವಲ್ಲ, ಸೆಂಟರ್‌ಗಳನ್ನು ಮುಚ್ಚುವ ನಿರ್ಧಾರವನ್ನು ಕೂಡಾ ಜಿಯೋಮಾರ್ಟ್ ಮಾಡಿದೆ. ಹೌದು, ಜಿಯೋಮಾರ್ಟ್‌ನಲ್ಲಿ ಸೆಂಟರ್‌ಗಳನ್ನು ಕಡಿತ ಮಾಡಲಾಗುತ್ತಿದೆ. ಸ್ಥಳೀಯ ನೆರೆಹೊರೆಯ ಅಂಗಡಿಗಳಿಗೆ ದಿನಸಿ ಮತ್ತು ಸಾಮಾನ್ಯ ಸರಕುಗಳನ್ನು ಪೂರೈಸುವ ತನ್ನ 150 ಪೂರೈಸುವಿಕೆ ಕೇಂದ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ಮುಚ್ಚಲು ಜಿಯೋಮಾರ್ಟ್ ನಿರ್ಧಾರ ಮಾಡಿದೆ.
ಈಗಾಗಲೇ ಉದ್ಯೋಗ ಕಡಿತ ನಡೆಸುತ್ತಿರುವ ಸಂಸ್ಥೆಗಳು
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ನ ಪೋಷಕ ಸಂಸ್ಥೆಯಾದ ಮೆಟಾ ಇನ್ನೊಂದು ಹಂತದ ಉದ್ಯೋಗ ಕಡಿತವನ್ನು ಈಗಾಗಲೆ ಘೋಷಣೆ ಮಾಡಿದೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲೇ ಮೆಟಾ ಹಾಗೂ ಟ್ವಿಟ್ಟರ್ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದೆ. ಅದಾದ ಬಳಿಕ ಗೂಗಲ್ ಕೂಡಾ ಉದ್ಯೋಗ ಕಡಿತವನ್ನು ಆರಂಭಿಸಿದೆ.
ಕಳೆದ ವರ್ಷದಿಂದಲೇ ಆರಂಭವಾಗಿದೆ ಉದ್ಯೋಗ ಕಡಿತ
ಜಾಗತಿಕವಾಗಿ ಆರ್ಥಿಕ ಹಿಂಜರಿತದ ಆತಂಕ, ಹಣದುಬ್ಬರದ ನಡುವೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಉದ್ಯೋಗ ಕಡಿತ ಮಾಡಿದ ಸಂಸ್ಥೆಗಳು ಪ್ರಮುಖವಾಗಿ ನೀಡಿರುವ ಕಾರಣ ವೆಚ್ಚ ಕಡಿತಗೊಳಿಸುವುದು ಮತ್ತು ಸಂಸ್ಥೆಯ ಬೆಳವಣಿಗೆಗಾಗಿ ರಚನಾತ್ಮಕ ಬದಲಾವಣೆಯಾಗಿದೆ. ಅದರಲ್ಲೂ ಮುಖ್ಯವಾಗಿ 2022ರಿಂದ ಈವರೆಗೆ ಟೆಕ್ ವಲಯದಲ್ಲಿ ಅಧಿಕ ಉದ್ಯೋಗ ಕಡಿತ ನಡೆದಿದೆ.
ಆರ್ಥಿಕ ಹಿಂಜರಿತದ ಆತಂಕದ ನಡುವೆ ಪ್ರಮುಖವಾಗಿ ಟೆಕ್ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಒಂದೇ ಬಾರಿಗೆ ಸಾವಿರಾರು ಜನರನ್ನು ಸಂಸ್ಥೆಯಿಂದ ತೆಗೆದುಹಾಕಲಾಗಿದೆ. 365 ಡೇಟಾಸೈನ್ಸ್ ಸ್ಟಡಿ ಪ್ರಕಾರ ಕೊರೊನಾ ವೈರಸ್ ಸಾಂಕ್ರಾಮಿಕದಲ್ಲಿ ಟೆಕ್ ವಲಯದಲ್ಲಿ ನಡೆದ ಉದ್ಯೋಗ ಕಡಿತಕ್ಕಿಂತ ಅಧಿಕವಾಗಿ 2022ರಲ್ಲಿ ಉದ್ಯೋಗ ಕಡಿತ ನಡೆದಿದೆ. 2022ರಲ್ಲಿ 150000 ಮಂದಿಯನ್ನು ವಜಾಗೊಳಿಸಲಾಗಿದೆ, ಈ ಟ್ರೆಂಡ್ ಮುಂದುವರಿದಿದ್ದು 2023ರ ಜನವರಿ ತಿಂಗಳಲ್ಲೇ 68,500 ಹೊಸ ಉದ್ಯೋಗ ಕಡಿತ ಮಾಡಲಾಗಿದೆ.


Click it and Unblock the Notifications