ಕಳೆದ ವರ್ಷ ಆರಂಭವಾಗಿರುವ ಉದ್ಯೋಗ ಕಡಿತದ ಸೀಸನ್ ಇನ್ನೂ ಕೂಡಾ ಮುಗಿದಂತೆ ಕಾಣುತ್ತಿಲ್ಲ. ಹಲವಾರು ದೊಡ್ಡ ದೊಡ್ಡ ಸಂಸ್ಥೆಗಳು ಬೇರೆ ಬೇರೆ ಹಂತಗಳಲ್ಲಿ ಲೇಆಫ್ ಪ್ರಕ್ರಿಯೆಯನ್ನು ನಡೆಸುತ್ತಲೇ ಇದೆ. ಈಗ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನ ಪೋಷಕ ಸಂಸ್ಥೆಯಾದ ಮೆಟಾವು ಮತ್ತೆ ಶೀಘ್ರವೇ ಉದ್ಯೋಗ ಕಡಿತ ಆರಂಭಿಸಲಿದೆ ಎಂದು ವರದಿಯಾಗಿದೆ.
ರಿಯಾಲಿಟಿ ಲ್ಯಾಬ್ಸ್ ವಿಭಾಗದಲ್ಲಿ ಉದ್ಯೋಗಿಗಳ ಕಡಿತ ಮಾಡಲು ಸಂಸ್ಥೆಯು ತಯಾರಿಯನ್ನು ನಡೆಸುತ್ತಿದೆ. ಈ ತಂಡವು ಮೆಟಾ ಸಂಸ್ಥೆಗೆ ಕಸ್ಟಮ್ ಚಿಪ್‌ಸೆಟ್‌ಗಳನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿರುವ ತಂಡವಾಗಿದೆ. ಇನ್ನು ವರದಿ ಪ್ರಕಾರ ಈ ಲೇಆಫ್ ಬಗ್ಗೆ ಉದ್ಯೋಗಿಗಳಿಗೆ ಕಂಪನಿಯ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಮೂಲಕ ಈಗಾಗಲೇ ಮಾಹಿತಿ ನೀಡಲಾಗಿದೆ.

ಬುಧವಾರವು ಈ ಉದ್ಯೋಗ ಕಡಿತ ನಡೆಯುವ ನಿರೀಕ್ಷೆಯಿದೆ. ಯಾರು ಉದ್ಯೋಗ ಕಳೆದುಕೊಳ್ಳದಿದ್ದರೋ ಅವರಿಗೆ ಮಾತ್ರ ತಿಳಿಸಲಾಗುತ್ತದೆ ಎಂದು ವರದಿ ಹೇಳಿದೆ. ಆದರೆ ಮೆಟಾ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಫೇಸ್‌ಬುಕ್ ಅಗೈಲ್ ಸಿಲಿಕಾನ್ ಟೀಮ್ ಅಥವಾ ಫಾಸ್ಟ್ ಎಂದು ಕರೆಯಲ್ಪಡುವ ತಂಡದಲ್ಲಿ ಉದ್ಯೋಗ ಕಡಿತವಾಗಲಿದೆ ಎಂದು ವರದಿ ಹೇಳಿದೆ.
"ಮೆಟಾವರ್ಸ್" ಎಂದು ಕರೆಯಲ್ಪಡುವ ವರ್ಚುವಲ್ ವರ್ಲ್ಡ್‌ಗಳಿಗೆ ಪ್ರವೇಶವನ್ನು ನೀಡುವ ವರ್ಚುವಲ್ ರಿಯಾಲಿಟಿ ಉತ್ಪನ್ನಗಳನ್ನು ರಚಿಸಲು ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿದ್ದಾರೆ. ಆದರೆ ಈ ನಡುವೆ ಈ ತಂಡದಲ್ಲಿಯೇ ಉದ್ಯೋಗ ಕಡಿತದ ಸುದ್ದಿ ಇದೆ. ಇದರಿಂದ ಯೋಜನೆ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿದೆ.
ಫಾಸ್ಟ್ ಎಂದು ಕರೆಯಲ್ಪಡುವ ತಂಡದಲ್ಲಿ ಸರಿಸುಮಾರು 600 ಉದ್ಯೋಗಿಗಳು ಇದ್ದಾರೆ. ಈ ತಂಡ ಮೆಟಾಗೆ ಕಸ್ಟಮ್ ಚಿಪ್‌ಗಳನ್ನು ವಿನ್ಯಾಸಗೊಳಿಸುವುದರ ಕಾರ್ಯವನ್ನು ಮಾಡುತ್ತದೆ. ಆದರೆ ಮೆಟಾ ಆಂತರಿಕವಾಗಿ ಸ್ಪರ್ಧಾತ್ಮಕ ಚಿಪ್‌ಗಳನ್ನು ಉತ್ಪಾದಿಸುವಲ್ಲಿ ಸವಾಲುಗಳನ್ನು ಎದುರಿಸಿದೆ. ಅದರಿಂದಾಗಿ ಚಿಪ್ ಮೇಕರ್ ಕ್ವಾಲ್‌ಕಾಮ್ ಸಹಾಯವನ್ನು ಪಡೆಯುತ್ತಿದೆ.
ಈ ವರ್ಷದ ಆರಂಭದಲ್ಲಿ ಹೇಳಿಕೆ ನೀಡಿದ್ದ ಜುಕರ್‌ಬರ್ಗ್, ವಸಂತಕಾಲದಲ್ಲಿ ಸಾಮಾನ್ಯವಾಗಿ ಉದ್ಯೋಗ ಕಡಿತ ಮಾಡಲಾಗುತ್ತದೆ. ಆದರೆ ಕೆಲವು ಬದಲಾವಣೆಗಳು ವರ್ಷದ ಅಂತ್ಯದವರೆಗೆ ಮಾಡಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆಯನ್ನು ಮಾಡುವ ಬಗ್ಗೆ ವರದಿ ಉಲ್ಲೇಖ ಮಾಡಿದೆ.
ಈ ನಡುವೆ ಕೃತಕ ಬುದ್ಧಿಮತ್ತೆಯ ಕೆಲಸದ ಮೇಲೆ ಹೆಚ್ಚು ಗಮನಹರಿಸುವ ಮೆಟಾದಲ್ಲಿನ ಮತ್ತೊಂದು ಚಿಪ್ ತಯಾರಿಕೆ ಘಟಕವು ಅಡೆತಡೆಗಳನ್ನು ಎದುರಿಸಿದೆ. ಇದರ ಉಸ್ತುವಾರಿ ಕಾರ್ಯನಿರ್ವಾಹಕರು ಇತ್ತೀಚೆಗೆ ಸಂಸ್ಥೆಯನ್ನು ತೊರೆಯುವ ಘೋಷಣೆ ಮಾಡಿದ್ದಾರೆ. ಆದರೆ ಕೆಲಸವನ್ನು ಮುಂದುವರಿಸಲು ಮೆಟಾ ಬೇರೊಬ್ಬರಿಗೆ ಸದ್ಯಕ್ಕೆ ಜವಾಬ್ದಾರಿಯನ್ನು ನೀಡಿದೆ.
2022ರಿಂದಲೇ ಉದ್ಯೋಗ ಕಡಿತ
2022ರ ನವೆಂಬರ್ ತಿಂಗಳಿನಲ್ಲೇ ಮೆಟಾ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದೆ. ಮೆಟಾ ಸುಮಾರು 1,100 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಸುಮಾರು ಶೇಕಡ 13ರಷ್ಟು ಉದ್ಯೋಗಿಗಳನ್ನು ದಿಡೀರ್ ವಜಾಗೊಳಿಸಿದೆ.
ಇನ್ನು ಫೇಸ್‌ಬುಕ್ ಅನ್ನು ನಿರ್ವಹಣೆ ಮಾಡುವ ಮೆಟಾದ ಷೇರುಗಳು 2023ರಲ್ಲಿ ಭಾರೀ ನಷ್ಟವನ್ನು ಅನುಭವಿಸಿದೆ. ಮೆಟಾ ಷೇರುಗಳು ಶೇಕಡ 70ರಷ್ಟು ಕುಸಿದಿದೆ. ಸುಮಾರು 255.79 ಬಿಲಿಯನ್ ಡಾಲರ್ ಕುಸಿತ ಕಂಡಿದೆ. 2022ರಿಂದ ಆರಂಭವಾದ ಉದ್ಯೋಗ ಕಡಿತ ಈಗಲೂ ಮುಂದುವರಿದಿದೆ.
ಈ ವರ್ಷದ ಮೇ ತಿಂಗಳಿನಲ್ಲಿ ಸಂಸ್ಥೆಯಲ್ಲಿ ಸುಮಾರು 11 ಸಾವಿರ ಉದ್ಯೋಗಿಗಳನ್ನು ಅಂದರೆ ಸುಮಾರು ಶೇಕಡ 13ರಷ್ಟು ಸಿಬ್ಬಂದಿಗಳು ವಜಾಗೊಳಿಸಲಾಗುವುದು ಎಂದು ಮೆಟಾ ಘೋಷಣೆ ಮಾಡಿದೆ. ಇದು ಭಾರತದಲ್ಲಿಯೂ ಸಾವಿರಾರು ಮೆಟಾ ಉದ್ಯೋಗಿಗಳ ಮೇಲೆ ಪ್ರಭಾವ ಬೀರಿದೆ. ಈಗ ಮತ್ತೆ ಉದ್ಯೋಗ ಕಡಿತದ ವರದಿಯಾಗಿದೆ.


Click it and Unblock the Notifications