ಕಳೆದ ವರ್ಷ 2022ರಲ್ಲಿ ವೆಚ್ಚ ಕಡಿತದ ನೆಪದಲ್ಲಿ ಉದ್ಯೋಗ ಕಡಿತವನ್ನು ಆರಂಭ ಮಾಡಿದ, ಟ್ವಿಟ್ಟರ್ ಸಂಸ್ಥೆಯು ಈ ವರ್ಷ ಮತ್ತೆ ಉದ್ಯೋಗ ಕಡಿತವನ್ನು ಮಾಡಿದೆ. ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟ್ಟರ್‌ನಲ್ಲಿ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಮತ್ತೆ 50 ಮಂದಿಯನ್ನು ವಜಾಗೊಳಿಸಲಾಗಿದೆ. ಎಲಾನ್ ಮಸ್ಕ್ ಟ್ವಿಟ್ಟರ್ ಸಂಸ್ಥೆಯನ್ನು ಖರೀದಿ ಮಾಡಿ, ಅದರ ಸಿಇಒ ಆದ ಬಳಿಕ ಸಂಸ್ಥೆಯಲ್ಲಿ ಉದ್ಯೋಗಿಗಳ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿದಿದೆ. ಶೇಕಡ 70ರಷ್ಟು ಉದ್ಯೋಗ ಕಡಿತವಾಗಿದೆ.
ಲಭ್ಯವಾದ ಮಾಹಿತಿ ಪ್ರಕಾರ ಈ ಬಾರಿ ಮಾಡಲಾಗುವ ಉದ್ಯೋಗ ಕಡಿತವು ಮುಖ್ಯವಾಗಿ ಇಂಜಿಯರಿಂಗ್ ತಂಡಕ್ಕೆ ಪ್ರಭಾವ ಬೀರಲಿದೆ. ಈ ತಂಡದಲ್ಲಿ ಜಾಹೀರಾತು ತಂತ್ರಜ್ಞಾನ, ಪ್ರಾಥಮಿಕ ಟ್ವಿಟ್ಟರ್ ಆಪ್ ನಿರ್ವಹಣಾ ತಂಡಗಳು ಕೂಡಾ ಸೇರ್ಪಡೆಯಾಗುತ್ತದೆ. ಈ ಹಿಂದೆಯೂ ಟ್ವಿಟ್ಟರ್ ಬೇರೆ ಬೇರೆ ವಿಭಾಗಗಳಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ. ಟ್ವಿಟ್ಟರ್ ಪ್ರಸ್ತುತ ಸರಿಸುಮಾರು 2000 ಮಂದಿ ಉದ್ಯೋಗಿಗಳನ್ನು ಸಂಸ್ಥೆಯಲ್ಲಿ ಹೊಂದಿದೆ.

ಟ್ವಿಟ್ಟರ್‌ನಲ್ಲಿ ನಡೆದ ಏರಿಳಿತಗಳು
2022ರ ನವೆಂಬರ್ ತಿಂಗಳಿನಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ (ಪ್ರಸ್ತುತ ಎರಡನೇ ಸ್ಥಾನ) ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು 44 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಿದ್ದಾರೆ. ಅದಾದ ಬಳಿಕ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಟ್ವಿಟ್ಟರ್ 3,700 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಇನ್ನು ಹಲವಾರು ದೇಶಗಳಲ್ಲಿ ಟ್ವಿಟ್ಟರ್ ತನ್ನ ಕಚೇರಿಯನ್ನು ಕೂಡಾ ಬಂದ್ ಮಾಡಿದೆ. ಕೆಲವು ಕಚೇರಿಗಳಲ್ಲಿ ಬಾಡಿಗೆಯನ್ನು ಕೂಡಾ ನೀಡಿಲ್ಲ.
ಪ್ರಸ್ತುತ ಭಾರತದಲ್ಲಿ ಟ್ವಿಟ್ಟರ್‌ನ ಮೂರು ಕಚೇರಿಗಳ ಪೈಕಿ ಎರಡು ಕಚೇರಿಗಳನ್ನು ಮುಚ್ಚಲಾಗಿದೆ. ಈ ಕಚೇರಿಗಳಲ್ಲಿ ಇದ್ದ 200ಕ್ಕೂ ಅಧಿಕ ಉದ್ಯೋಗಿಗಳನ್ನು ಈ ಬದಲಾವಣೆಯಿಂದಾಗಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇನ್ನು ಕೆಲವು ಮಾಧ್ಯಮಗಳು ಈ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಲಾಗಿದೆ ಎಂದು ವರದಿ ಮಾಡಿದೆ. ಕಳೆದ ವರ್ಷದಲ್ಲಿ ಸಂಸ್ಥೆಯಲ್ಲಿ ಭಾರೀ ನಷ್ಟ ಉಂಟಾಗಿದೆ. ಮುಖ್ಯವಾಗಿ ಜಾಹೀರಾತು ವಿಭಾಗದಲ್ಲಿ ನಷ್ಟ ಕಂಡುಬಂದಿದೆ.
ಟ್ವಿಟ್ಟರ್ ಬೆಳವಣಿಗೆ ಕುಸಿತ ಮತ್ತು ಬೇರೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾ, ಟಿಕ್‌ಟಾಕ್ ಜೊತೆ ಸ್ಪರ್ಧೆ ಅಧಿಕವಾಗುತ್ತಿದ್ದಂತೆ ಟ್ವಿಟ್ಟರ್‌ಗೆ ಹಲವಾರು ಸವಾಲುಗಳು ಎದುರಾಗಿದೆ. ತಮ್ಮ ಜಾಹೀರಾತಿನಲ್ಲಿ ಅಧಿಕ ಪಾರದರ್ಶಕತೆ, ಪ್ರತಿಫಲದ ಬಗ್ಗೆ ಅಧಿಕ ಒತ್ತನ್ನು ಜಾಹೀರಾತುದಾರರು ಕೋರಿದಾಗ, ಸಂಸ್ಥೆಯ ಆದಾಯಕ್ಕೆ ಇನ್ನಷ್ಟು ಪೆಟ್ಟು ಬಿದ್ದಿದೆ. ಈ ಬೆಳವಣಿಗೆಗಳ ನಡುವೆ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಅನಿಸಿಕೊಂಡಿದ್ದ ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.


Click it and Unblock the Notifications