ಕೊರೊನಾವೈರಸ್ ಸೋಂಕು ತಡೆಯಲು ಲಾಕ್‌ಡೌನ್ ಜಾರಿ ಮಾಡಿರುವುದೇನೋ ಸರಿ. ಆದರೆ, ಲಾಕ್‌ಡೌನ್ ಹೀಗೆಯೇ ಮುಂದುವರಿದರೆ ಕೊರೊನಾಗೆ ಬಲಿಯಾಗುವವರ ಸಂಖ್ಯೆಗಿಂತಲೂ ಹಸಿವಿನಿಂದಲೇ ಹೆಚ್ಚು ಸಾವುಗಳು ಸಂಭವಿಸಬಹುದು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಒಂದು ಹೊಸ ಸಾಮಾನ್ಯ ಸೋಂಕು ಎಂದು ಭಾರತ ಒಪ್ಪಿಕೊಳ್ಳಬೇಕು. ಸೋಂಕನ್ನು ತಾಳಿಕೊಳ್ಳಬಲ್ಲ ಸಮರ್ಥರನ್ನು ಕೆಲಸ ಮಾಡಲು ಅವಕಾಶ ನೀಡಬೇಕು. ಇದರಿಂದ ದುರ್ಬಲರಿಗೆ ರಕ್ಷಣೆ ನೀಡಲು ಸಾಧ್ಯ ಎಂದು ಹೇಳಿದ್ದಾರೆ.
ಭಾರತದಂತಹ ದೇಶದಲ್ಲಿ ಲಾಕ್‌ಡೌನ್ ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಿಲ್ಲ. ಇದು ಹೀಗೆಯೇ ಮುಂದುವರಿದರೆ, ಇನ್ನು ಕೆಲವೇ ದಿನಗಳಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆಯೇ ಕೊರೊನಾ ಸೋಂಕಿನಿಂದಾಗುವ ಸಾವಿಗಿಂತ ಹಲವು ಪಟ್ಟು ಹೆಚ್ಚಿರಲಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾದಿಂದ ಸಾಯುತ್ತಿರುವ ಪ್ರಮಾಣ ಕಡಿಮೆ
ಭಾರತದಲ್ಲಿ ಕೊರೊನಾ ವೈರಸ್‌ನಿಂದ ಸಂಭವಿಸುವ ಸಾವಿನ ದರ 0.25-0.5 ಪರ್ಸೆಂಟ್‌ರಷ್ಟಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ಅತಿ ಕಡಿಮೆ ಇದೆ. ಇದುವರೆಗೆ ಲಾಕ್‌ಡೌನ್ ಜಾರಿ ಮಾಡಿರುವುದರಿಂದ ದೇಶದ ಹಲವಾರು ಸ್ಥಳಗಳಲ್ಲಿ ಲಾಕ್‌ಡೌನ್ ಹರಡುವಿಕೆಯನ್ನು ನಿಯಂತ್ರಿಸಲಾಗಿದೆ. ಮೇ 3 ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಹಾಗಾಗಿ ದೇಶವು ಇದೊಂದು ಹೊಸ ಸಾಮಾನ್ಯ ಸೋಂಕು ಎಂದು ಪರಿಗಣಿಸಬೇಕು ಎಂದು ನಾರಾಯಣಮೂರ್ತಿ ಹೇಳಿದ್ದಾರೆ.
ದೇಶದಲ್ಲಿ ಹಲವು ರೋಗಗಳಿಂದ 90 ಲಕ್ಷ ಸಾವು
ಕೊರೊನಾವೈರಸ್ ದೇಶದಲ್ಲಿ ನಿಜಕ್ಕೂ ಬಿಕ್ಕಟ್ಟು ಸೃಷ್ಟಿಸಿರುವುದು ನಿಜ. ಆದರೆ ಈ ಸೋಂಕು ಇಲ್ಲದೆಯೂ ಭಾರತದಲ್ಲಿ ಹಲವು ರೋಗಗಳ ಕಾರಣದಿಂದಾಗಿ ವಾರ್ಷಿಕ 90 ಲಕ್ಷ ಸಾವುಗಳು ಸಂಭವಿಸುತ್ತವೆ. ಇದರಲ್ಲಿ 25 ಪರ್ಸೆಂಟ್‌ರಷ್ಟು ಸಾವುಗಳು ವಾಯುಮಾಲಿನ್ಯ ಸಂಬಂಧಿ ಕಾರಣದಿಂದಲೇ ಸಂಭವಿಸುತ್ತಿವೆ. ಇದಕ್ಕೆ ಕಾರಣ ದೇಶವು ವಿಶ್ವದಲ್ಲೇ ಹೆಚ್ಚು ಕಲುಷಿತವಾಗಿದೆ.
ಕಳೆದ ಎರಡು ತಿಂಗಳಲ್ಲಿ ಕೊರೊನಾ ವೈರಸ್‌ನಿಂದಾಗಿ 1,000 ಜನ ಬಲಿಯಾಗಿದ್ದಾರೆ. ಸಹಜ ಸಾವುಗಳಿಗೂ, ಕೊರೊನಾ ಸಾವುಗಳಿಗೂ ತಾಳೆ ಹಾಕಿದರೆ ಕೊರೊನಾ ಸಾವುಗಳು ಅತಿ ಕಡಿಮೆ ಎಂದೇ ಹೇಳಬಹುದು. ಹೀಗಾಗಿ ಕೊರೊನಾ ಸೋಂಕು ನಾವು ಅಂದುಕೊಂಡಿರುವಷ್ಟು ಭೀಕರವಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ಹೇಳಿದ್ದಾರೆ.
ದೇಶದಲ್ಲಿ 1.9 ಕೋಟಿಯಷ್ಟು ಅಸಂಘಟಿತ ಕಾರ್ಮಿಕರ ಸ್ಥಿತಿ ಅತಂತ್ರ
ದೇಶದಲ್ಲಿ 1.9 ಕೋಟಿಯಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸ್ವಯಂ ಉದ್ಯೋಗಿಗಳಾಗಿದ್ದಾರೆ. ಇಷ್ಟು ಬೃಹತ್ ಸಂಖ್ಯೆಯ ಉದ್ಯೋಗಿಗಳು ಲಾಕ್‌ಡೌನ್ ನಿಂದಾಗಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡು ಕೂತಿದ್ದಾರೆ. ಲಾಕ್‌ಡೌನ್ ದೀರ್ಘಕಾಲದವರೆಗೆ ಮುಂದುವರಿದರೆ, ಒಂದು ಹೊತ್ತಿನ ಊಟಕ್ಕೂ ನೆಲೆ ಇಲ್ಲದಂತಾಗಿ ಕೂರುವಂತಾಗುತ್ತದೆ. ಅಲ್ಲದೆ ಕೊರೊನೊಗಿಂತ ಹಸಿವಿನಿಂದ ಸಾಯುವವರೇ ಹೆಚ್ಚಾಗುತ್ತಾರೆ ಎಂದು ನಾರಾಯಣಮೂರ್ತಿ ಹೇಳಿದ್ದಾರೆ.
ಸಂಶೋಧನೆಗೆ ಕರೆ ನೀಡಿದ ನಾರಾಯಣಮೂರ್ತಿ
ಭಾರತದಲ್ಲಿ ಬಹುತೇಕ ಯುವಕರಲ್ಲಿ ಈ ಸೋಂಕು ಇದ್ದರೂ ಕೂಡ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಭಾರತೀಯರ ಆನುವಂಶೀಯತೆ, ಇಲ್ಲಿನ ಬೆಚ್ಚನೆಯ ಹವಾಮಾನ ಅಥವಾ ವ್ಯಾಪಕವಾದ ಬಿಸಿಜಿ ವ್ಯಾಕ್ಸಿನೇಷನ್ ಕಾರಣದಿಂದಾಗಿ ಭಾರತದಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ನಾರಾಯಣ ಮೂರ್ತಿ ಅವರು ಹಲವು ಅಂಶಗಳತ್ತ ಗಮನಸೆಳೆದಿದ್ದಾರೆ. ಈ ಕುರಿತು ಸಂಶೋಧನೆಗೂ ಕರೆ ನೀಡಿದ್ದಾರೆ.
ಜೊತೆಗೆ ಐಟಿ ಕಂಪನಿಗಳು ಕಾರ್ಯ ನಿರ್ವಹಣೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ಶಿಫ್ಟ್‌ನಷ್ಟು ಇರುವ ಜನರನ್ನು ಮೂರು ಶಿಫ್ಟ್‌ಗಳಾಗಿ ವಿಂಗಡಿಸಬೇಕು ಎಂದು ಸಲಹೆ ನೀಡಿದ್ದಾರೆ.


Click it and Unblock the Notifications