ದೇಶಾದ್ಯಂತ ಕೊರೊನಾವೈರಸ್ ಭೀತಿಯ ಆವರಿಸಿದ್ದು ಇದೀಗ ಇದರ ಪರಿಣಾಮವು ಭಾರತೀಯ ಜೀವ ವಿಮೆ (ಎಲ್‌ಐಸಿ) ಮೇಲೂ ಆಗಿದೆ. ಪ್ರತಿ ವರ್ಷ ಹಾಗೂ ಆರು ತಿಂಗಳಿಗೊಮ್ಮೆ ಕಂತುಗಳ ಮೂಲಕ ಪ್ರೀಮಿಯಂ ಪಾವತಿಸುತ್ತಿದ್ದವರು ಹೇಗಪ್ಪಾ ಹಣ ಕಟ್ಟುವುದು ಎಂದು ಚಿಂತೆಗೀಡಾಗಿದ್ದರು.
ಆದರೆ, ಗ್ರಾಹಕರು ಭಯ ಬೀಳುವ ಅಗತ್ಯವಿಲ್ಲ ಎಂದು ಭಾರತೀಯ ಜೀವ ವಿಮಾ ನಿಗಮ ಅಭಯ ನೀಡಿದೆ. ಏಪ್ರಿಲ್ 15ರ ಒಳಗೆ ವಿಮಾ ಕಂತು ಪಾವತಿ ಗಡುವನ್ನು ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ.

''ಕೊರೊನಾವೈರಸ್ ನ ಕಾರಣದಿಂದಾಗಿ ದೇಶದಲ್ಲಿ ಚಾಲ್ತಿಯಲ್ಲಿರುವ ಅಸಾಧಾರಣ ಸನ್ನಿವೇಶಗಳ ಹಿನ್ನೆಲೆಯಲ್ಲಿ, 2020 ರ ಏಪ್ರಿಲ್ 15 ರವರೆಗೆ ಪ್ರೀಮಿಯಂ ಪಾವತಿಸುವ ತನ್ನ ಎಲ್ಐಸಿ ಪಾಲಿಸಿದಾರರಿಗೆ ವಿಶ್ರಾಂತಿ ನೀಡುವುದಾಗಿ ಘೋಷಿಸಿದೆ " ಎಂದು ಎಲ್ಐಸಿ ಹೇಳಿಕೆಯಲ್ಲಿ ತಿಳಿಸಿದೆ.
ದೇಶದ ಬಹುತೇಕ ಎಲ್ಲಾ ರಾಜ್ಯಗಳು ಶಟ್‌ಡೌನ್ ಆಗಿದೆ. ಹೀಗಾಗಿ ಈ ಮೊದಲೇ ಪರಿಸ್ಥಿತಿ ಕೈ ಮೀರುವ ಹಂತ ಬಂದು, ಯಾವ ಮಾರ್ಗದಲ್ಲೂ ಹಣ ಪಾವತಿಸಲು ಆಗದೆ ಇದ್ದ ಪಕ್ಷದಲ್ಲಿ ಎಲ್‌ಐಸಿ ಗ್ರಾಹಕರಿಗೆ ಪಾವತಿ ಸಮಯದಲ್ಲಿ ವಿನಾಯಿತಿ ನೀಡುವ ಬಗ್ಗೆ ಈ ಹಿಂದೆಯೇ ಚಿಂತನೆ ನಡೆಸಿತ್ತು.
ಆದಾಯ ತೆರಿಗೆ ಗಡುವು ವಿಸ್ತರಣೆ?
ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆ ಪಾವತಿದಾರರಿಗೆ ವಿಧಿಸಲಾಗಿರುವ ಮಾರ್ಚ್ 31ರ ಗಡುವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿದೆ. ಸೋಂಕಿನ ಹಿನ್ನೆಲೆಯಲ್ಲಿ ತನ್ನ ಇಲಾಖೆಯ ಅಧಿಕಾರಿಗಳನ್ನು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಈಗಾಗಲೇ ಸೂಚನೆ ನೀಡಿದೆ.
ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಸಲಹೆ ಮಾಡಿದೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡುವ ಸದ್ಯದ ಕೊನೆಯ ದಿನಾಂಕ ಮಾರ್ಚ್ 31. ಹೀಗಾಗಿ ಅದನ್ನು ಮಾಡಿಸಿಕೊಳ್ಳದೇ ಇರುವವರಿಗೆ ಕೂಡ ಇದು ಸ್ವಲ್ಪ ಮಟ್ಟಿಗೆ ನೆಮ್ಮದಿ ತರುವ ವಿಷಯ ಆಗಿದೆ.


Click it and Unblock the Notifications